ಅಲೆಕ್ಸ್ ಹೇಲ್ಸ್ ಆರ್ಭಟಕ್ಕೆ ಕ್ರಿಸ್ ಗೇಲ್ ವಿಶ್ವ ದಾಖಲೆಯೇ ಶೇಕಿಂಗ್
Alex Hales Records: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟರ್ಗಳು ಮಾತ್ರ 13 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಕ್ರಿಸ್ ಗೇಲ್ಸ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಕ್ರಿಸ್ ಗೇಲ್ ದಾಖಲೆಯನ್ನು ಬೆನ್ನತ್ತಿರುವ ಇಂಗ್ಲೆಂಡ್ ಬ್ಯಾಟರ್ ಅಲೆಕ್ಸ್ ಹೇಲ್ಸ್ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹೇಲ್ಸ್ ಹೆಸರಿಗೆ ಹೊಸ ದಾಖಲೆ ಸೇರ್ಪಡೆಯಾಗುವುದನ್ನು ಎದುರು ನೋಡಬಹುದು.
Updated on: Feb 06, 2025 | 9:04 AM

ಟಿ20 ಕ್ರಿಕೆಟ್ನಲ್ಲಿ ಅಲೆಕ್ಸ್ ಹೇಲ್ಸ್ ಮತ್ತೊಂದು ಮೈಲುಗಲ್ಲು ದಾಟಿದ್ದಾರೆ. ಈ ಬಾರಿ ಕೀರನ್ ಪೊಲಾರ್ಡ್ ಅವರ ವಿಶ್ವ ದಾಖಲೆ ಮುರಿದು ಮತ್ತೊಂದು ಭರ್ಜರಿ ರೆಕಾರ್ಡ್ನತ್ತ ಹೆಜ್ಜೆಯನ್ನಿಟ್ಟಿದ್ದಾರೆ. ಈ ಹೆಜ್ಜೆಯೊಂದಿಗೆ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿರುವ ಸಾರ್ವಕಾಲಿಕ ಶ್ರೇಷ್ಠ ದಾಖಲೆಯೊಂದು ಅಲುಗಾಡಲಾರಂಭಿಸಿದೆ.

ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ILT20 ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಲೆಕ್ಸ್ ಹೇಲ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ದುಬೈ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಲೆಕ್ಸ್ ಹೇಲ್ಸ್ 32 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 67 ರನ್ ಸಿಡಿಸಿದ್ದಾರೆ.

ಈ 67 ರನ್ಗಳೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಅಲೆಕ್ಸ್ ಹೇಲ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆಯ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಇದ್ದರು.

ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್ನಲ್ಲಿ ಈವರೆಗೆ 695 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 617 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 1 ಶತಕ ಹಾಗೂ 61 ಅರ್ಧಶತಕಗಳೊಂದಿಗೆ ಒಟ್ಟು 13537 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಪೊಲಾರ್ಡ್ ಅವರ ವಿಶ್ವ ದಾಖಲೆ ಮುರಿದು ಅಲೆಕ್ಸ್ ಹೇಲ್ಸ್ ದ್ವಿತೀಯ ಸ್ಥಾನಕ್ಕೇರಿದ್ದಾರೆ. 492 ಟಿ20 ಪಂದ್ಯಗಳಲ್ಲಿ 487 ಇನಿಂಗ್ಸ್ ಆಡಿರುವ ಅಲೆಕ್ಸ್ 7 ಭರ್ಜರಿ ಶತಕ ಹಾಗೂ 84 ಅರ್ಧಶತಕಗಳೊಂದಿಗೆ ಒಟ್ಟು 13558 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನ 2ನೇ ರನ್ ಸರದಾರ ಎನಿಸಿಕೊಂಡಿದ್ದಾರೆ.

ಸದ್ಯ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕ್ರಿಸ್ ಗೇಲ್. ಯೂನಿವರ್ಸ್ ಬಾಸ್ ಖ್ಯಾತಿಯ ಗೇಲ್ 463 ಟಿ20 ಪಂದ್ಯಗಳಲ್ಲಿ 455 ಇನಿಂಗ್ಸ್ ಆಡಿದ್ದು, ಈ ವೇಳೆ 22 ಶತಕ ಹಾಗೂ 88 ಅರ್ಧಶತಕಗಳೊಂದಿಗೆ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಪೇರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

ಇದೀಗ 13558 ರನ್ಗಳನ್ನು ಕಲೆಹಾಕಿರುವ ಅಲೆಕ್ಸ್ ಹೇಲ್ಸ್ ಇನ್ನು 1005 ರನ್ಗಳನ್ನು ಗಳಿಸಿದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಅತ್ತ ಕ್ರಿಸ್ ಗೇಲ್ ಟಿ20 ಕ್ರಿಕೆಟ್ನಿಂದ ನಿವೃತ್ತರಾಗಿರುವ ಕಾರಣ ಮುಂಬರುವ ದಿನಗಳಲ್ಲಿ ಅಲೆಕ್ಸ್ ಹೇಲ್ಸ್ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
























