ಬಹು ನಿರೀಕ್ಷಿತ ಭಾರತದ ಡೌನ್ ಅಂಡರ್ ಪ್ರವಾಸ ಹೆಚ್ಚು ಕಡಿಮೆ ಶುರುವಾಗಿಬಿಟ್ಟಿದೆ. ಕೊವಿಡ್-19 ಪಿಡುಗು ಮತ್ತು ಅದರಿಂದ ಉಂಟಾದ ಲಾಕ್ಡೌನ್ಗಳ ನಂತರ ಟೀಮ್ ಇಂಡಿಯಾ ಮೊದಲ ಬಾರಿಗೆ ಮತ್ತೊಂದು ಕ್ರಿಕೆಟಿಂಗ್ ರಾಷ್ಟ್ರದ ಜೊತೆ ಪೂರ್ಣ ಪ್ರಮಾಣದ ಮೊದಲ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ. ಈ ಪ್ರವಾಸದಲ್ಲಿ ಭಾರತ 3 ಒಡಿಐ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನಾಡಲಿದ್ದು ಅಡಿಲೇಡ್ ಓವಲ್ನಲ್ಲಿ ನಡೆಯುವ ಮೊದಲ ಟೆಸ್ಟ್ ಹೊನಲು ಬೆಳಕಿನ ಪಂದ್ಯವಾಗಿರುತ್ತದೆ.
ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜನೆವರಿ ತಿಂಗಳಲ್ಲಿ ತಂದೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೊಹ್ಲಿಗೆ ರಜೆಯನ್ನೂ ಮಂಜೂರು ಮಾಡಿದೆ. ಡಿಸೆಂಬರ್ 17 ರಿಂದ 21ರವರೆಗೆ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡ ನಂತರ ಕೊಹ್ಲಿ ಹೆರಿಗೆ ಸಮಯದಲ್ಲಿ ತಮ್ಮ ತಾರಾ ಪತ್ನಿ ಅನುಷ್ಕಾ ಶರ್ಮ ಅವರೊಂದಿಗಿರಲು ಸ್ವದೇಶಕ್ಕೆ ಮರಳಲಿದ್ದಾರೆ.
‘‘ಅವರ ಕರೀಯರ್ನ ಅತ್ಯಂತ ಪ್ರಮುಖ ಸರಣಿ ಇದಾಗಿದೆ. ತಮ್ಮ ಕ್ರಿಕೆಟ್ ಕರೀಯರ್ನಲ್ಲಿ ಅವರು ಎಲ್ಲ ಸಾಧನೆಗಳನ್ನು ಮಾಡಿದ್ದಾರೆ. ಅವರು ಒಂದು ಟೆಸ್ಟ್ ಮಾತ್ರ ಆಡಿ ವಾಪಸ್ಸು ಹೋಗಲಿರುವುದು ನನಗೆ ಸ್ವಲ್ಪ ನಿರಾಶೆ ಮತ್ತು ಆಶ್ಚರ್ಯವನ್ನುಂಟು ಮಾಡಿದೆ. ಆದರೆ ಅವರು ಕುಟುಂಬಕ್ಕೆ ಪ್ರಾಶಸ್ತ್ಯ ನೀಡುತ್ತಿರುವುದರಲ್ಲಿ ತಪ್ಪೇನೂ ಇಲ್ಲ. ಇಂಥ ಸಂದರ್ಭಗಳಲ್ಲಿ ಎಲ್ಲರೂ ಫ್ಯಾಮಿಲಿ ಜೊತೆ ಇರಲು ಬಯಸುತ್ತಾರೆ,’’ ಎಂದು ವಾ ಹೇಳಿದ್ದಾರೆ.
ಆದರೆ, ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಕ್ ಹೊಕ್ಲೀ ಅವರಿಗೆ ವಿರಾಟ್ ನಿರ್ಧಾರ ಸೋಜಿಗವನ್ನೇನೂ ಮೂಡಿಸಿಲ್ಲ. ‘ವಿರಾಟ್ ಮತ್ತು ಅನುಷ್ಕಾ ತಮ್ಮ ಕುಟುಂಬವನ್ನು ವಿಸ್ತರಿಸುತ್ತಿರುವ ಬಗ್ಗೆ ಘೋಷಣೆ ಮಾಡಿದಾಗಲೇ ಇಂಥ ಪರಿಸ್ಥಿತಿ ಎದುರಾಗುತ್ತದೆ ಅಂತ ನಾನಂದುಕೊಂಡಿದ್ದೆ,’ ಎಂದು ಹೊಕ್ಲೀ ಹೇಳಿದ್ದಾರೆ.
‘‘ಆದರೆ, ವಿರಾಟ್ 3 ಒಡಿಐ, 3 ಟಿ20ಐ ಮತ್ತು 1 ಟೆಸ್ಟ್ ಪಂದ್ಯವನ್ನಾಡಲು ಆಗಮಿಸುತ್ತಿರುವುದು ನನ್ನಲ್ಲಿ ರೋಮಾಂಚನವನ್ನುಂಟು ಮಾಡಿದೆ. ಹೆರಿಗೆ ಸಮಯದಲ್ಲಿ ಅವರು ತಮ್ಮ ಪತ್ನಿಯೊಂದಿಗೆ ಇರಬಯಸಿರುವ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ವಿರಾಟ್ ಕ್ರಿಕೆಟ್ನ ಸೂಪರ್ಸ್ಟಾರ್ಗಳಲ್ಲಿ ಒಬ್ಬರು. 10 ಪಂದ್ಯಗಳ ಪೈಕಿ 7 ರಲ್ಲಿ ಅವರು ಆಡುವುದನ್ನು ನೋಡಲು ಉತ್ಸುಕನಾಗಿದ್ದೇನೆ,’’ ಅಂತ ಹೊಕ್ಲೀ ಹೇಳಿದ್ದಾರೆ.
ಎರಡು ರಾಷ್ಟ್ರಗಳ ನಡುವೆ ಮೊದಲ ಪಂದ್ಯ ಒಡಿಐ ಆಗಿದ್ದು, ನವೆಂಬರ್ 27ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.