ಈ ಸೀಸನಲ್ಲಿ ಮೂರು ಬಾರಿ ಡೆಲ್ಲಿಯನ್ನು ಮಣಿಸಿರುವ ಮುಂಬೈಗೆ ಅಡ್ವಾಂಟೇಜ್ | Mumbai enjoys upper hand having beaten Delhi thrice this season

  • Publish Date - 5:18 pm, Tue, 10 November 20
ಈ ಸೀಸನಲ್ಲಿ ಮೂರು ಬಾರಿ ಡೆಲ್ಲಿಯನ್ನು ಮಣಿಸಿರುವ ಮುಂಬೈಗೆ ಅಡ್ವಾಂಟೇಜ್ | Mumbai enjoys upper hand having beaten Delhi thrice this season

‘‘ಐಸಿಸಿ ವಿಶ್ವಕಪ್ ನಂತರ ಅತಿದೊಡ್ಡ ಕ್ರಿಕೆಟ್ ಈವೆಂಟ್ ಅಂದರೆ ಇಂಡಿಯನ್ ಪ್ರಿಮೀಯರ್ ಲೀಗ್,’’ ಅಂತ ವಿಶ್ವದ ಮುಂಬೈ ಇಂಡಿಯನ್ಸ್ ಟೀಮಿನ ಸ್ಟಾರ್ ಅಲ್​ರೌಂಡರ್ ಕೈರನ್ ಪೊಲ್ಲಾರ್ಡ್ ನಿನ್ನೆ ಹೇಳಿದ್ದಾರೆ. ಅವರು ಹೇಳಿರುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಯಾಕೆಂದರೆ ಜನಪ್ರಿಯತೆಯ ದೃಷ್ಟಿಯಿಂದ ನೋಡಿದರೆ ಐಪಿಎಲ್ ಹೆಚ್ಚು ಪ್ರೇಕ್ಷಕರನ್ನು ಮೈದಾನಗಳತ್ತ ಸೆಳೆಯುತ್ತದೆ, ಮತ್ತು ಅತಿಹೆಚ್ಚು ವೀಕ್ಷಕರನ್ನು ತಮ್ಮ ತಮ್ಮ ಮನೆಗಳಲ್ಲಿ ಟಿವಿಗಳ ಎದುರು ಅಲುಗಾಡದಂತೆ ಕೂರುವಂತೆ ಮಾಡುತ್ತದೆ. ಟಿ20 ಕ್ರಿಕೆಟ್ ತನ್ನ ಭಕ್ತರಿಗೆ ಒದಗಿಸುವ ಮನರಂಜನೆಯೇ ಹಾಗಿದೆ.

ಹೌದು, ಕ್ರಿಕೆಟ್ ಇತಿಹಾಸದಲ್ಲಿ ಇಂದು ಮಹತ್ವದ ದಿನ. ಕೇವಲ ಕ್ರಿಕೆಟ್ ಮಾತ್ರವಲ್ಲ, ಎಲ್ಲ ಪ್ರಮುಖ ಸ್ಪೋರ್ಟಿಂಗ್ ಈವೆಂಟ್​ಗಳನ್ನು ಗಣನೆಗೆ ತೆಗೆದುಕೊಂಡರೂ ಐಪಿಎಲ್ ಒಂದು ಪ್ರಮುಖವಾದ ಟೂರ್ನಿಯಾಗಿ ಗೋಚರವಾಗುತ್ತದೆ. ಒಮ್ಮೆ ಯೋಚಿಸಿ ನೋಡಿ, ಸದರಿ ಸೀಸನನ್ನು ಕೊವಿಡ್ ಸೋಂಕಿನ ಭೀತಿ, ಖಾಲಿ ಮೈದಾನಗಳು, ಚೀರ್ ಲೀಡರ್​ಗಳ ಗೈರುಹಾಜರಿ ಹೊರತಾಗಿಯೂ 20 ಕೋಟಿಗೂ ಹೆಚ್ಚು ಜನ ಟಿವಿಗಳಲ್ಲಿ ವೀಕ್ಷಿಸಿದ್ದಾರೆ. ಐಪಿಎಲ್​ನ ಜನಪ್ರಿಯತೆ ಅರ್ಥ ಮಾಡಿಕೊಳ್ಳಲು ಅಷ್ಟು ಸಾಕೆನಿಸುತ್ತದೆ.

ಐಪಿಎಲ್ 13ನೇ ಸೀಸನ್ನಿನ ಚಾಂಪಿಯನ್​ಶಿಪ್ ಪಂದ್ಯ ಇಂದು ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ಐದನೇ ಬಾರಿಗೆ ಟ್ರೋಫಿ ಗೆಲ್ಲ್ಲುವ ಛಲ ತೊಟ್ಟಿರುವ ಮುಂಬೈ ಇಂಡಿಯನ್ಸ್ ಮತ್ತು ಮೊಟ್ಟಮೊದಲ ಬಾರಿಗೆ ಫೈನಲ್ ತಲುಪಿದ್ದರೂ ಗೆಲ್ಲುವ ವಿಶ್ವಾಸವನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ.

ಅಂದಹಾಗೆ, ಕೊವಿಡ್ ಪ್ಯಾಂಡೆಮಿಕ್​ನಿಂದಾಗಿ ಪ್ರಶಸ್ತಿ ಮೊತ್ತವನ್ನು ಅರ್ಧದಷ್ಟು ಇಳಿಸಲಾಗಿದೆ. ಹಾಗಾಗಿ ಇಂದು ಗೆಲ್ಲು ತಂಡ ರೂ. 10 ಕೋಟಿ ಬಾಚಿಕೊಂಡರೆ ಸೋಲುವ ಟೀಮು ರೂ. 6.5 ಕೋಟಿಗಳನ್ನು ಮಡಿಲಿಗೆ ಹಾಕಿಕೊಳ್ಳುತ್ತದೆ. ಸದರಿ ಟೂರ್ನಿಯಲ್ಲಿ 3 ಮತ್ತು 4 ನೇ ಸ್ಥಾನಗಳನ್ನು ಪಡೆದ ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳು ತಲಾ ರೂ. 4.375 ಕೋಟಿಗಳನ್ನು ಜೇಬಿಗಿಳಿಸಿವೆ.

ಹಲವಾರು ಪಂದ್ಯಗಳಲ್ಲಿ ಮೈನವಿರೇಳಿಸುವಂಥ ಆಟ ಕಂಡುಬಂದ ಈ ಬಾರಿಯ ಐಪಿಎಲ್ ಸೀಸನ್ ನಿಸ್ಸಂದೇಹವಾಗಿ ಉಳಿದ ಸೀಸನ್​ಗಳಿಗಿಂತ ಹೆಚ್ಚು ರೋಚಕವೆನಿಸಿದ್ದು ಸುಳ್ಳಲ್ಲ. 3 ಪಂದ್ಯಗಳ ಫಲಿತಾಂಶ 4 ಸೂಪರ್ ಓವರ್​ಗಳಲ್ಲಿ (ಒಂದು ಪಂದ್ಯದಲ್ಲಿ 2 ಬಾರಿ ಸೂಪರ್ ಓವರ್ ಆಡಿಸಬೇಕಾಯಿತು) ಸಿಕ್ಕಿತು.

ಓಕೆ, ಈ ಸೀಸನಲ್ಲಿ ಡೆಲ್ಲಿ ಯನ್ನು 3 ಬಾರಿ ಸೋಲಿಸಿರುವ ಮುಂಬೈ ಟೀಮಿನ ಅತ್ಮವಿಶ್ವಾಸ ಮತ್ತು ನೈತಿಕ ಸ್ಥೈರ್ಯ ಮುಗಿಲೆತ್ತರದಲ್ಲಿದೆ. ಇದುವರೆಗೆ, 5 ಬಾರಿ ಫೈನಲ್ಸ್​ನಲ್ಲಿ ಆಡಿರುವ ಮುಂಬೈ 4 ಬಾರಿ ಮೊದಲು ಬ್ಯಾಟ್ ಮಾಡಿ ಅವೆಲ್ಲವುಗಳಲ್ಲಿ ಜಯ ಕಂಡಿದೆ. ಆದರೆ , ಮರಳುಗಾಡಿನ ಪಿಚ್​ಗಳು ಇತರ ಪಿಚ್​ಗಳಿಗಿಂತ ಭಿನ್ನವಾಗಿವೆ. ಲೀಗ್ ಹಂತದಲ್ಲಿ ಮುಂಬೈ ಎರಡು ಬಾರಿ ಚೇಸ್ ಮಾಡುವಾಗ ಗೆದ್ದಿದೆ. ಟೂರ್ನಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿರುವ ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ 0ಕಿಷನ್ ಇವತ್ತು ಸಹ ಮಿಂಚಲಿ ಅತ ಮುಂಬೈ ಅಭಿಮಾನಿಗಳು ಅಂದುಕೊಳ್ಳುತಿದ್ದಾರೆ.

ಡೆಲ್ಲಿಯ ಅರಂಭಿಕ ಬೌಲರ್​ಗಳು-ಕಗಿಸೊ ರಬಾಡ ಮತ್ತು ಌನ್ರಿಖ್ ನೊರ್ಕಿಯ ವಿರುದ್ಧ ರನ್ ಗಳಿಸುವುದು ಸುಲಭವಲ್ಲ. ಈ ಸೀಸನಲ್ಲಿ ರಬಾಡ ಪ್ರತಿ ಓವರ್​ಗೆ 8.21 ರನ್ ಖರ್ಚು ಮಾಡಿ ಉಳಿದೆಲ್ಲ ಬೌಲರ್​ಗಳಿಗಿಂತ ಜಾಸ್ತಿ ವಿಕೆಟ್(29) ಪಡೆದಿದ್ದಾರೆ. ನೊರ್ಕಿಯ ಐಪಿಎಲ್ ಇತಿಹಾಸದಲ್ಲೇ ಅತಿವೇಗದ ಎಸೆತವನನ್ನು ಬೌಲ್ ಮಾಡಿರುವ ಕೀರ್ತಿ ಹೊಂದಿದ್ದಾರೆ. ಅದಕ್ಕೂ ಮಿಗಿಲಾಗಿ ಗಾಯದ ನಂತರ ವಿಶ್ರಾಂತಿ ಪಡೆದು ಪುನಃ ಅಡುತ್ತಿರುವ ರೋಹಿತ್ ಶರ್ಮ ಅವರ ಆಟದಲ್ಲಿ ಎಂದಿನ ಸೊಬಗು ಕಾಣುತ್ತಿಲ್ಲ. ಆದರೆ, ಸೂರ್ಯಕುಮಅರ್ ಯಾದವ್, ಇಶಾನ್ ಕಿಷನ್, ಪೊಲ್ಲಾರ್ಡ್ ಹಾಗೂ ಪಾಂಡೆ ಸಹೋದರರನ್ನೊಳಗೊಂಡ ರೋಹಿತ್ ಟೀಮಿನ ಮಿಡ್ಲ್ ಆರ್ಡರ್ ಫಾರ್ಮೈಡೇಬಲ್ ಆಗಿದೆ. ಡಿ ಕಾಕ್ 4 ಅರ್ಧ ಶತಕಗಳನ್ನು ಬಾರಿಸಿದ್ದು ಉತ್ತಮ ಫಾರ್ಮ್​ನಲ್ಲಿದ್ದಾರೆ. ಹಾಗೆ ನೋಡಿದರೆ, ಮುಂಬೈ ಟೀಮಿನ ಆರಂಭಿಕ ಬೌಲರ್​ಗಳು-ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಜೋಡಿಯಾಗಿ ರಬಾಡ ಮತ್ತು ನೊರ್ಕಿಯ ಜೋಡಿಗಿಂತ ಹೆಚ್ಚು ವಿಕೆಟ್​ಗಳನ್ನು ಪಡೆದಿದ್ದಾರೆ. ಕ್ವಾಲಿಫೈಯರ್ 1 ರಲ್ಲಿ ಇವರಿಬ್ಬರ ಘಾತಕ ಬೌಲಿಂಗ್​ನಿಂದಾಗಿಯೇ ಮುಂಬೈಗೆ ಸುಲಭ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಡೆಲ್ಲಿ ಟೀಮಿನ ಸ್ಕೋರು 0/3 ಇದ್ದಿದ್ದು ನಿಮಗೆ ನೆನಪಿದೆ ತಾನೆ? 2 ವಿಕೆಟ್​ಗಳನ್ನು ಬೌಲ್ಟ್ ಕೀಳಿದರೆ ಮತ್ತೊಂದನ್ನು ಬುಮ್ರಾ ಉರುಳಿಸಿದ್ದರು. ಈ ಸೀಸನಲ್ಲಿ ಆಡಿರುವ 3 ಪಂದ್ಯಗಳಲ್ಲಿ ಬುಮ್ರಾ ಮತ್ತು ಬೌಲ್ಟ್ ಡೆಲ್ಲಿ ಟಾಪ್ ಆರ್ಡರ್​ನ 11 ವಿಕೆಟ್​ಗಳನ್ನು ಪಡೆದಿದ್ದಾರೆ.

ಡೆಲ್ಲಿ ಟೀಮಿನಲ್ಲಿ ಹೆಚ್ಚು ಎಡಗೈ ಬ್ಯಾಟ್ಸ್​ಮನ್​ಗಳಿರುವುದರಿಂದ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಇಂದು ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆಯಿದೆ. ಹಾಗಿ ನೋಡಿದರೆ, ಡೆಲ್ಲಿಯ ಎಲ್ಲ ಬ್ಯಾಟ್ಸ್​ಮನ್​ಗಳು ಲೆಗ್​ಸ್ಪಿನ್ನರ್​ಗಳ ವಿರುದ್ಧ ತಿಣುಕಾಡಿದ್ದಾರೆ.

ಡೆಲ್ಲಿಗೆ ಮತ್ತೊಮ್ಮೆ ಇಂದು ಶಿಖರ್ ಧವನ್ ಮತ್ತು ಮಾರ್ಕಸ್ ಸ್ಟಾಯ್ನಿಸ್ ಆರಂಭ ಆಟಗಾರರಾಗಿ ಕಣಕ್ಕಿಳಿಯಬಹುದು. ಆದರೆ, ಬೌಲ್ಟ್ ಮತ್ತು ಬುಮ್ರಾ ಅದ್ಭುತವಾದ ಲಯದಲ್ಲಿರುವುದರಿಂದ ಆರಂಭಿಕ ಒವರ್​ಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಿರಿ ಎಂದು ಟೀಮಿನ ಮೆಂಟರ್ ರಿಕ್ಕಿ ಪಾಂಟಿಂಗ್ ಈಗಾಗಲೇ ಅವರಿಗೆ ಸಲಹೆ ನೀಡಿರಬಹುದು. ಬುಮ್ರಾ ಅವರ ಭಯಾನಕ ವೇಗ ಮತ್ತು ಪಿನ್ ಪಾಯಿಂಟ್ ನಿಖರತೆ ಎದುರಾಳಿ ಬ್ಯಾಟರ್​ಗಳನ್ನು ದಂಗು ಬಡಿಸುತ್ತಿದೆ.

ನಾಯಕ ಶ್ರೇಯಸ್ ಅಯ್ಯರ್ ತಮ್ಮ ಇನ್ನಿಂಗ್ಸನ್ನು ನಿಧಾನ ಗತಿಯಲ್ಲಿ ಆರಂಭಿಸುತ್ತಿರುವುದು ಟೀಮಿನ ಅಂತಿಮ ಮೊತ್ತದ ಮೇಲೆ ಪರಿಣಾಮ ಬೀರುತ್ತಿದೆ. ಎರಡು ಪಂದ್ಯಗಳಲ್ಲಿ ವಿಫಲರಾಗಿ ಹೈದರಾಬಾದ್ ವಿರುದ್ಧ ಅಡಿದ ಎರಡನೇ ಕ್ವಾಲಿಫೈಯರ್​ನಲ್ಲಿ 50 ಎಸೆತಗಳಲ್ಲಿ 78 ರನ್ ಬಾರಿಸಿದ ಧವನ್ ಮೇಲೆ ಡೆಲ್ಲಿ ಜಾಸ್ತಿ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಇಂದು ಯಾರೇ ಗೆದ್ದರೂ ಅದೊಂದು ದಾಖಲೆಯಾಗಲಿದೆ ಎಂದು ರೋಹಿತ್ ಹೇಳಿದ್ದಾರೆ. ಅವರ ಟೀಮು ಗೆದ್ದರೆ ದಾಖಲೆಯ 5 ನೇ ಬಾರಿ ಪ್ರಶಸ್ತಿ ಗೆದ್ದಂತಾಗುತ್ತದೆ, ಡೆಲ್ಲಿ ಗೆದ್ದರೆ ಆಡಿದ ಮೊದಲ ಫೈನಲ್​ನಲ್ಲೇ ಕಿರೀಟ ಧರಿಸಿದಂತಾಗುತ್ತದೆ.

Click on your DTH Provider to Add TV9 Kannada