Milkha Singh: ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ; ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರು
Milkha Singh: ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಚಂಡೀಗಡ: ಕೊವಿಡ್ ಸೋಂಕಿನಿಂದ ಬಳಲುತ್ತಿದ್ದ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಪಟು ಮಿಲ್ಖಾ ಸಿಂಗ್ (91) ಶುಕ್ರವಾರ ಮಧ್ಯರಾತ್ರಿ ನಿಧನರಾದರು. ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಐದು ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು. 1958ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್, ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದ ಮಿಲ್ಖಾ 1960ರ ರೋಮ್ ಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು. ಕೊವಿಡ್ ಸೋಂಕಿನಿಂದ ಅಸ್ವಸ್ಥರಾಗಿದ್ದ ಮಿಲ್ಖಾ ಸಿಂಗ್ ಅವರನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಗೆ ಮೇ 24ರಂದು ದಾಖಲಿಸಲಾಗಿತ್ತು.
ಐಸಿಯು ವಾರ್ಡ್‌ನಿಂದ ಸಾಮಾನ್ಯ ಐಸಿಯುಗೆ ಸ್ಥಳಾಂತರಿಸಲಾಗಿತ್ತು 400 ಮೀಟರ್ ಓಟದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದ ಮಿಲ್ಖಾ ಅವರ ಕೊವಿಡ್-19 ಟೆಸ್ಟ್ ವರದಿ ಈ ವಾರದ ಆರಂಭದಲ್ಲಿ ನೆಗೆಟಿವ್ ಬಂದಿತ್ತು. ಅನಂತರ ಅವರನ್ನು ಚಂಡೀಗಡದ ವೈದ್ಯಕೀಯ ಮಹಾವಿದ್ಯಾಲಯದ ಕೊವಿಡ್ ಐಸಿಯು ವಾರ್ಡ್‌ನಿಂದ ಸಾಮಾನ್ಯ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ದಿನದಿಂದ ದಿನಕ್ಕೆ ಈ ಸಾಧಕನ ದೇಹಸ್ಥಿತಿ ಬಿಗಡಾಯಿಸಿತು. ಮಿಲ್ಖಾ ಅವರ ಮಗ ಜೀವ್ ಮಿಲ್ಖಾ ಸಿಂಗ್ ತಮ್ಮ ತಂದೆಯ ನಿಧನದ ಸುದ್ದಿಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.
46.6 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದ್ದ ಮಿಲ್ಖಾ ಪ್ರಸ್ತುತ ಪಾಕಿಸ್ತಾನದಲ್ಲಿರುವ ಗೋವಿಂದಪುರದಲ್ಲಿ 20ನೇ ನವೆಂಬರ್ 1929ರಂದು ಮಿಲ್ಖಾಸಿಂಗ್ ಜನಿಸಿದರು. 1958ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿದರು. 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕೃಷ್ಣ ಪೂಂಜಾ ಡಿಸ್ಕಸ್ ಥ್ರೋಗಾಗಿ ಚಿನ್ನದ ಪಡೆಯುವವರೆಗೂ ಮಿಲ್ಖಾ ಏಕಮಾತ್ರ ಸ್ವರ್ಣ ಪದಕ ವಿಜೇತ ಎನಿಸಿದ್ದರು. 46.6 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದ್ದ ಮಿಲ್ಖಾ ದಕ್ಷಿಣ ಆಫ್ರಿಕಾದ ಖ್ಯಾತ ಓಟಗಾರ ಮಾಲ್ಕೊಮ್ ಸ್ಪೆನ್ಸ್ ಅವರನ್ನು ಸೋಲಿಸಿದ್ದರು.
ಫ್ಲೈಯಿಂಗ್ ಸಿಖ್ ಅಂತಲೆ ಖ್ಯಾತರಾಗಿದ್ದರು 1958ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ 200 ಮೀಟರ್ ಮತ್ತು 400 ಮೀಟರ್ ವಿಭಾಗದಲ್ಲಿ ಮಿಲ್ಖಾ ಸಿಂಗ್ ಚಿನ್ನದ ಪದಕ ಗೆದ್ದಿದ್ದರು. 1962ರ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಮತ್ತು 4X400 ರಿಲೇ ವಿಭಾಗದಲ್ಲಿಯೂ ಇಂಥದ್ದೇ ಸಾಧನೆಯನ್ನು ಮೆರೆದಿದ್ದರು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಅಂತರವನ್ನು 45.6 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. ಮಿಲ್ಖಾ ಸಿಂಗ್‌ರ ಈ ರಾಷ್ಟ್ರೀಯ ದಾಖಲೆಯನ್ನು 1998ರ ಒಲಿಂಪಿಕ್ಸ್‌ನಲ್ಲಿ ಪರಮ್‌ಜೀತ್ ಸಿಂಗ್ ಮುರಿದರು. ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಅನೇಕ ದಾಖಲೆಗಳನ್ನು ಮಾಡಿದ ಈ ಅನುಭವಿ ಓಟಗಾರ ಫ್ಲೈಯಿಂಗ್ ಸಿಖ್ ಅಂತಲೆ ಖ್ಯಾತರಾಗಿದ್ದರು. ಓಟದ ಸ್ಪರ್ಧೆಯಲ್ಲಿ ಅಂದಿನ ಪ್ರಬಲ ಕ್ರೀಡಾಪಟು ಅಬ್ದುಲ್ ಖಲೀಕ್ ಅವರನ್ನು ಸೋಲಿಸಿದ ನಂತರ 1960 ರಲ್ಲಿ ಪಾಕಿಸ್ತಾನದ ಸರ್ವಾಧಿಕಾರಿ ಆಡಳಿತಗಾರ ಜನರಲ್ ಅಯೂಬ್ ಖಾನ್ ಅವರಿಗೆ ಈ ಹೆಸರನ್ನು ನೀಡಿದ್ದರು.
ಮಿಲ್ಖಾ ಸಿಂಗ್ ಅವರಿಗೆ ಮೋನಾ ಸಿಂಗ್, ಅಲೀಜಾ ಗ್ರೋವರ್ ಮತ್ತು ಸೋನಿಯಾ ಸಾನ್‌ವಲ್ಕಾ ಎಂಬ ಮೂವರು ಪುತ್ರಿಯರು ಮತ್ತು ಜೀವ್ ಮಿಲ್ಖಾ ಸಿಂಗ್ ಹೆಸರಿನ ಮಗ ಇದ್ದಾರೆ. ಖ್ಯಾತ ಗಾಲ್ಫ್ ಆಟಗಾರ ಜೀವ್ ತಮ್ಮ ತಂದೆಯಂತೆಯೇ ಪದ್ಮಶ್ರೀ ಪುರಸ್ಕೃತರು. 2019ರಲ್ಲಿ ಮಿಲ್ಖಾಸಿಂಗ್ ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಶ್ರೀಯುತರಿಗೆ 1959 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಿಲ್ಖಾ ಸಿಂಗ್ ಜೀವನ ಆಧರಿಸಿದ ಬಯೋಪಿಕ್ ಭಾಗ್ ಮಿಲ್ಕಾ ಭಾಗ್ 2013ರಲ್ಲಿ ತೆರೆಕಂಡಿತ್ತು.
Published On - 1:02 am, Sat, 19 June 21