ಔಟ್ ಆಗದಿದ್ದರೂ ವಿಕೆಟ್ ಒಪ್ಪಿಸಿ ಹೊರ ನಡೆದ ಆಸ್ಟ್ರೇಲಿಯಾ ಬ್ಯಾಟರ್..!

|

Updated on: Dec 07, 2024 | 2:30 PM

India vs Australia: ಓವಲ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಇನಿಂಗ್ಸ್​​ನಲ್ಲಿ ಟೀಮ್ ಇಂಡಿಯಾ 180 ರನ್ ಕಲೆಹಾಕಿದರೆ, ಆಸ್ಟ್ರೇಲಿಯಾ 76 ಓವರ್​​ಗಳಲ್ಲಿ 332/8 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದೆ.

ಅಡಿಲೇಡ್​ನ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​​ನಲ್ಲಿ 180 ರನ್​ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್​ ಕಲೆಹಾಕಿತ್ತು.

ಅದರಂತೆ ದ್ವಿತೀಯ ದಿನದಾಟದಲ್ಲಿ 2ನೇ ಇನಿಂಗ್ಸ್ ಮುಂದುವರೆಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲಿಲ್ಲ. ಜಸ್​ಪ್ರೀತ್ ಬುಮ್ರಾ ಎಸೆತಗಳಲ್ಲಿ ಆರಂಭಿಕ ಆಟಗಾರ ನಾಥನ್ ಮೆಕ್​ಸ್ವೀನ್ (39) ಹಾಗೂ ಸ್ಟೀವ್ ಸ್ಮಿತ್ (2) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮಾರ್ನಸ್ ಲಾಬುಶೇನ್ (64) ಕೂಡ ಔಟಾದರು. ಈ ಹಂತದಲ್ಲಿ ಟ್ರಾವಿಸ್ ಹೆಡ್ ಜೊತೆಗೂಡಿದ ಮಿಚೆಲ್ ಮಾರ್ಷ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. 25 ಎಸೆತಗಳನ್ನು ಎದುರಿಸಿದ ಮಾರ್ಷ್ 1 ಫೋರ್​​ನೊಂದಿಗೆ 9 ರನ್ ಕಲೆಹಾಕಿದ್ದರು.

64ನೇ ಓವರ್​​ನಲ್ಲಿ ದಾಳಿಗಿಳಿದ ಅಶ್ವಿನ್ ಮಿಚೆಲ್ ಮಾರ್ಷ್​ ವಿಕೆಟ್ ಪಡೆಯಲು ಇನ್ನಿಲ್ಲದ ತಂತ್ರ ಪ್ರಯೋಗಿಸಿದರು. ಆದರೆ ಮೊದಲ ಮೂರು ಎಸೆತಗಳಲ್ಲಿ ಯಾವುದೇ ಸಫಲತೆ ದೊರೆತಿರಲಿಲ್ಲ. ಇನ್ನು ನಾಲ್ಕನೇ ಎಸೆತವು ಮಿಚೆಲ್ ಮಾರ್ಷ್ ಬ್ಯಾಟ್​ ಬದಿಯಿಂದ ವಿಕೆಟ್ ಕೀಪರ್ ಕೈ ಸೇರಿತು.

ಚೆಂಡು ಹಿಡಿಯುತ್ತಿದ್ದಂತೆ ವಿಕೆಟ್ ಕೀಪರ್ ರಿಷಭ್ ಪಂತ್ ಅಪೀಲ್ ಮಾಡಲಾರಂಭಿಸಿದರು. ಇತ್ತ ಅಶ್ವಿನ್ ಕೂಡ ಅಂಪೈರ್​​ಗೆ ಮನವಿ ಸಲ್ಲಿಸಿದರು. ಟೀಮ್ ಇಂಡಿಯಾ ಆಟಗಾರರ ಮನವಿಯನ್ನು ನೋಡಿ ಅತ್ತ ಮಿಚೆಲ್ ಮಾರ್ಷ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಲಾರಂಭಿಸಿದರು. ಮಾರ್ಷ್ ಕ್ರೀಸ್ ತೊರೆಯುತ್ತಿರುವುದನ್ನು ಗಮನಿಸಿದ ಅಂಪೈರ್ ಔಟ್ ನೀಡಿದರು.

ಆದರೆ ಆ ಬಳಿಕ ನಡೆದ ವಿಡಿಯೋ ರಿಪ್ಲೇನಲ್ಲಿ ಮಿಚೆಲ್ ಮಾರ್ಷ್​​ ಅವರ ಬ್ಯಾಟ್​ಗೆ ಬಾಲ್​ ತಾಗದಿರುವುದು ಕಂಡು ಬಂದಿದೆ. ಚೆಂಡು ಬ್ಯಾಟ್​​ನಿಂದ ದೂರದಲ್ಲೇ ಸಾಗಿದರೂ, ತಪ್ಪು ಗ್ರಹಿಕೆಯಿಂದ ಮಾರ್ಷ್​ ಕ್ರೀಸ್ ತೊರೆದಿದ್ದರು. ಇದೀಗ ನಾಟೌಟ್ ಆಗಿದ್ದರೂ, ವಿಕೆಟ್ ಒಪ್ಪಿಸಿ ಹೊರ ನಡೆದ ಮಿಚೆಲ್ ಮಾರ್ಷ್ ಅವರ ವಿಡಿಯೋ ವೈರಲ್ ಆಗಿದೆ.