ವಿಶ್ವದ ಅತಿ ದೊಡ್ಡ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ; ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ಉದ್ಘಾಟನೆ

|

Updated on: Feb 24, 2021 | 2:52 PM

Motera Stadium: ಕ್ರೀಡಾಂಗಣದ ಉದ್ಘಾಟನೆಯಲ್ಲಿ ಗೃಹ ಸಚಿವ ಅಮಿತ್​ ಶಾ ಹಾಗೂ ಕ್ರೀಡಾ ಸಚಿವ ಕಿರಣ್​ ರಿಜಿಜು ಭಾಗವಹಿಸಿದ್ದು, ಭೂಮಿ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯ ಹೊಂದಿದೆ.

ವಿಶ್ವದ ಅತಿ ದೊಡ್ಡ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ; ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ಉದ್ಘಾಟನೆ
ಕ್ರಿಕೆಟ್ ಮೈದಾನ (ಸಾಂದರ್ಭಿಕ ಚಿತ್ರ)
Follow us on

ವಿಶ್ವದ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಎಂಬ ಖ್ಯಾತಿಗೆ ಪಾತ್ರವಾಗುತ್ತಿರುವ ಮೊಟೆರಾದಲ್ಲಿರುವ ಸರ್ದಾರ್​ ವಲ್ಲಭಬಾಯಿ ಪಟೇಲ್​ ಕ್ರೀಡಾಂಗಣವನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣಗೊಳಿಸಲಾಗಿದ್ದು, ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಉದ್ಘಾಟಿಸಿದ್ದಾರೆ. 11 ಮಣ್ಣಿನ ಪಿಚ್‌ಗಳಿರುವ ಮೊಟೆರಾ ಕ್ರೀಡಾಂಗಣದಲ್ಲಿ ಆರು ಪಿಚ್​ ಕೆಂಪು ಮಣ್ಣಿನಿಂದ ಮಾಡಲ್ಪಟ್ಟಿದ್ದರೆ, 5 ಪಿಚ್​ಗಳನ್ನು ಕಪ್ಪು ಮಣ್ಣಿನಿಂದ ಮಾಡಲಾಗಿದೆ. ಮುಖ್ಯ ಮತ್ತು ಅಭ್ಯಾಸ ಪಿಚ್‌ಗಳಿಗಾಗಿ ಎರಡೂ ಬಣ್ಣದ ಜೇಡಿಮಣ್ಣನ್ನು ಬಳಸಿದ ಮೊದಲ ಕ್ರೀಡಾಂಗಣ ಇದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂದು ಇದೇ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ನಡೆಯಲಿದ್ದು, ಮೊಟೆರಾ ಕ್ರೀಡಾಂಗಣದಲ್ಲಿ ನಡೆಸುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇದಾಗಲಿದೆ.

ಕ್ರೀಡಾಂಗಣದ ಉದ್ಘಾಟನೆಯಲ್ಲಿ ಗೃಹ ಸಚಿವ ಅಮಿತ್​ ಶಾ ಹಾಗೂ ಕ್ರೀಡಾ ಸಚಿವ ಕಿರಣ್​ ರಿಜಿಜು ಭಾಗವಹಿಸಿದ್ದು, ಭೂಮಿ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯ ಹೊಂದಿದೆ. ಇದರ ನಂತರ 2ನೇ ಸ್ಥಾನವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಪಡೆದುಕೊಂಡಿದ್ದು, ಅದು ಸುಮಾರು 1 ಲಕ್ಷ ಜನ ಕೂರುವ ಆಸನಗಳ ಸಾಮರ್ಥ್ಯ ಹೊಂದಿದೆ. ಸದ್ಯ ಕೊವಿಡ್-19 ನಿಯಮಾವಳಿಗಳಿಂದಾಗಿ ಕ್ರೀಡಾಂಗಣದ ಸಾಮರ್ಥ್ಯವನ್ನು 50% ರಷ್ಟು ಮುಚ್ಚಲಾಗಿದ್ದರೂ, 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣಕ್ಕೆ ಲಗ್ಗೆ ಇಡುವ ನಿರೀಕ್ಷೆಯಿದೆ.

ಇಂದಿನ ಪಂದ್ಯದ ಮೂಲಕ ಇದು ಭಾರತದಲ್ಲಿ ಆಡಲಾಗುತ್ತಿರುವ ಎರಡನೇ ಪಿಂಕ್​ ಬಾಲ್​ ಟೆಸ್ಟ್‌ ಎನ್ನುವುದೂ ವಿಶೇಷವಾಗಿದೆ. ಇದಕ್ಕೂ ಮೊದಲು ಟೀಂ ಇಂಡಿಯಾ, ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಪಿಂಕ್​ ಬಾಲ್​ ಟೆಸ್ಟ್​ ಆಡಿತ್ತು ಹಾಗೂ ಅಂದಿನ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾ ವಿರುದ್ಧ ಇನ್ನಿಂಗ್ಸ್​ ಗೆಲುವು ಸಾಧಿಸಿತ್ತು. ಈ ಕಾರಣಗಳಿಂದಾಗಿ ಇಂದಿನ ಪಂದ್ಯದಲ್ಲಿ ಭಾರತ ಹೇಗೆ ಆಡಲಿದೆ ಎಂಬ ಕುತೂಹಲವೂ ಹೆಚ್ಚಿದೆ.

ಇದನ್ನೂ ನೋಡಿ: 700 ಕೋಟಿ ವೆಚ್ಚ, 1 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಕೂರುವ ಸಾಮರ್ಥ್ಯ, 3D ಥಿಯೇಟರ್, ಅಬ್ಬಬ್ಬಾ.. ಕ್ರಿಕೆಟ್​ ಸ್ವರ್ಗ ಮೊಟೆರಾ ಕ್ರೀಡಾಂಗಣದ Photos ನೋಡಿ

Published On - 1:35 pm, Wed, 24 February 21