ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಮಹೇಂದ್ರ ಸಿಂಗ್ ಧೋನಿ ಎಂದರೇ ನಂಬಿಕೆ. ಅಂದಿಗೂ ಇಂದಿಗೂ ವಿಶೇಷ ಅಭಿಮಾನ. ಪಂದ್ಯ ನಡೆಯುವಾಗ ಮೈದಾನದಲ್ಲಿ ನಿಂತು ತಂಡವನ್ನು ಮುನ್ನಡೆಸುವ ಕ್ಯಾಪ್ಟನ್ ಕೂಲ್ ಆಗಿದ್ದ ಧೋನಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರೆ ನೋಡುವವರ ಮೈ ರೋಮಾಂಚಿತವಾಗುತ್ತಿತ್ತು. ಎಂತಹ ಕಠಿಣ ಸಂದರ್ಭವಿದ್ದರೂ ಧೋನಿ ಇದ್ದಾರೆ ಎಂಬ ನಂಬಿಕೆಯಲ್ಲೇ ಕ್ರಿಕೆಟ್ ಪ್ರೇಮಿಗಳು ತುದಿಗಾಲಿನಲ್ಲಿ ಕೂತು ಕೊನೆಯ ಬಾಲ್ ತನಕವೂ ಕಾಯುತ್ತಿದ್ದರು. ಹಾಗಂತ ಧೋನಿಯನ್ನು ಒಬ್ಬ ಆಟಗಾರನನ್ನಾಗಿಯಷ್ಟೇ ಜನ ನೋಡಿಲ್ಲ. ಕ್ರಿಕೆಟ್ ಹೊರತಾಗಿಯೂ ಅವರನ್ನು ಇಷ್ಟಪಡಲು ಅನೇಕ ಕಾರಣಗಳಿವೆ. ಇಂದು (ಜುಲೈ 7,2021) ಮಹೇಂದ್ರ ಸಿಂಗ್ ಧೋನಿ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಾಲ್ಕು ದಶಕಗಳನ್ನು ಪೂರೈಸಿರುವ ಎಂಎಸ್ಡಿ ಬಗ್ಗೆ ಹುಟ್ಟುಹಬ್ಬದ ನೆಪದಲ್ಲಿ ಕೆಲ ಅಪರೂಪದ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
ಕ್ಯಾಪ್ಟನ್ ಕೂಲ್ ಎಂದೇ ಪ್ರಖ್ಯಾತರಾದ ಧೋನಿ ನಿವೃತ್ತಿ ಘೋಷಣೆ ಮಾಡುವ ತನಕವೂ ವೃತ್ತಿ ಜೀವನದಲ್ಲೂ ಒಂದೇ ರೀತಿಯ ಗತ್ತು, ಗಾಂಭೀರ್ಯ ಕಾಯ್ದುಕೊಂಡು ಗಮನ ಸೆಳೆದವರು. ಅಭಿಮಾನಿಗಳ ನೆಚ್ಚಿನ ಥಾಲಾ, ಸಹ ಆಟಗಾರರ ಪ್ರೀತಿಯ ಮಾಹೀ ಭಾರತೀಯ ಕ್ರಿಕೆಟ್ ಲೋಕಕ್ಕೆ ಹೊಸ ಮೆರುಗನ್ನೇ ತಂದುಕೊಟ್ಟವರು. ಧೋನಿಯ ಬಗ್ಗೆ ಅಭಿಮಾನಿಗಳಿಗೆ ಗೊತ್ತಿರದ ಸಂಗತಿಗಳು ಕಡಿಮೆಯೇ ಆದರೂ ಅವರು 40ನೇ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಒಂದಷ್ಟು ವಿಷಯಗಳನ್ನು ಮೆಲುಕು ಹಾಕುವ ಪ್ರಯತ್ನವಿದು.
ಧೋನಿಗೆ ಸಂಬಂಧಿಸಿದ ಕೆಲ ಪ್ರಮುಖ ಮಾಹಿತಿ
ಪೂರ್ಣ ಹೆಸರು: ಮಹೇಂದ್ರ ಸಿಂಗ್ ಧೋನಿ
ಅಡ್ಡ ಹೆಸರು: ಮಾಹೀ, ಕ್ಯಾಪ್ಟನ್ ಕೂಲ್, ಥಾಲಾ, ಎಂಎಸ್ಡಿ
ಜೆರ್ಸಿ ನಂಬರ್: 7
ಎತ್ತರ: 1.75 ಮೀಟರ್
ಜನ್ಮ ದಿನಾಂಕ: 7 ಜುಲೈ, 1981
ಹುಟ್ಟೂರು: ರಾಂಚಿ, ಜಾರ್ಖಂಡ್ (ನಂತರ ಅವರ ಕುಟುಂಬ ಉತ್ತರಾಖಂಡ್ಗೆ ಬಂದು ನೆಲೆಸಿತು)
ಸಂಗಾತಿ: ಸಾಕ್ಷಿ ಸಿಂಗ್ ಧೋನಿ
ವಿವಾಹವಾದ ದಿನಾಂಕ: 4 ಜುಲೈ, 2010
ಮಗಳು: ಜೀವಾ ಸಿಂಗ್ ಧೋನಿ
ಏಕದಿನ ಪಂದ್ಯಕ್ಕೆ ಪದಾರ್ಪಣೆ: ಬಾಂಗ್ಲಾದೇಶದ ವಿರುದ್ಧ 23 ಡಿಸೆಂಬರ್, 2004
ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ: ಶ್ರೀಲಂಕಾ ವಿರುದ್ಧ 2 ಡಿಸೆಂಬರ್, 2005
ಟಿ20ಐ ಪದಾರ್ಪಣೆ: ದಕ್ಷಿಣ ಆಫ್ರಿಕಾ ವಿರುದ್ಧ 1 ಡಿಸೆಂಬರ್, 2006
ಕೊನೆಯ ಏಕದಿನ ಪಂದ್ಯ: ನ್ಯೂಜಿಲೆಂಡ್ ವಿರುದ್ಧ 9 ಜುಲೈ, 2019
ಕೊನೆಯ ಟೆಸ್ಟ್ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ 26 ಡಿಸೆಂಬರ್, 2014
ಕೊನೆಯ ಟಿ20ಐ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ 27 ಫೆಬ್ರವರಿ, 2019
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಧೋನಿ ಗಳಿಸಿದ ರನ್
ಏಕದಿನ: ರನ್-10,773; ಶತಕ-10; ಅರ್ಧಶತಕ-73; ಸರಾಸರಿ-50.53
ಟಿ20ಐ ರನ್-1,617; ಶತಕ-00; ಅರ್ಧಶತಕ-02; ಸರಾಸರಿ-37.60
ಟೆಸ್ಟ್ ರನ್-4,876; ಶತಕ-06; ಅರ್ಧಶತಕ-33; ಸರಾಸರಿ-38.09
ನಾಯಕನಾಗಿ ಧೋನಿ
ಏಕದಿನ ಪಂದ್ಯ: ಪಂದ್ಯ-200; ಗೆಲುವು-110; ಸೋಲು-74; ಟೈ-5; ಫಲಿತಾಂಶವಿಲ್ಲ-11
ಟೆಸ್ಟ್ ಪಂದ್ಯ: ಪಂದ್ಯ-60; ಗೆಲುವು-27; ಸೋಲು-18; ಡ್ರಾ-15
ಟಿ20ಐ ಪಂದ್ಯ: ಪಂದ್ಯ-72; ಗೆಲುವು-41; ಸೋಲು-28; ಟೈ/ಫಲಿತಾಂಶವಿಲ್ಲ-3
ಗಮನಾರ್ಹ ವಿಚಾರವೆಂದರೆ ಎಲ್ಲಾ ಮೂರು ಬಗೆಯ ಪಂದ್ಯಗಳಲ್ಲೂ ಐಸಿಸಿ ಟ್ರೋಫಿ ಬಾಚಿದ ಭಾರತ ಕ್ರಿಕೆಟ್ ತಂಡದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಧೋನಿಗಿದೆ. ಟಿ20 ವಿಶ್ವಕಪ್ 2007ರಲ್ಲಿ, ವಿಶ್ವಕಪ್ 2011ರಲ್ಲಿ ಹಾಗೂ ಚಾಂಪಿಯನ್ಸ್ ಟ್ರೋಫಿ 2013ರಲ್ಲಿ ಗೆಲುವು ಭಾರತಕ್ಕೆ ಒಲಿದಿತ್ತು. ಅಂತೆಯೇ, ಒಬ್ಬ ನಾಯಕನಾಗಿ ತನ್ನ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಬಾರಿ ಪ್ರತಿನಿಧಿಸಿದ ಖ್ಯಾತಿಯೂ ಧೋನಿಯ ಪಾಲಿಗಿದ್ದು ಒಟ್ಟು 332 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಈವರೆಗೆ ದ್ವಿಶತಕ ಬಾರಿಸಿದ ಏಕೈಕ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಬ ಹಿರಿಮೆ ಧೋನಿಯದ್ದಾಗಿದ್ದು, 2012-13ರಲ್ಲಿ ಚೆನ್ನೈ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ 224ರನ್ ಗಳಿಸಿದ್ದರು.
ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ ಧೋನಿ ಈವರೆಗೆ ಆಡಿದ 211 ಪಂದ್ಯಗಳಿಂದ 4,669ರನ್ ಗಳಿಸಿದ್ದು, ಅವರು ಐಪಿಎಲ್ನಲ್ಲಿ ಪಂದ್ಯವೊಂದರಲ್ಲಿ ಬಾರಿಸಿದ ಗರಿಷ್ಠ ಮೊತ್ತ 84, ಐಪಿಎಲ್ನಲ್ಲಿ ಧೋನಿಯ ಸ್ಟ್ರೈಕ್ ರೇಟ್ 136.64 ಇದ್ದು, 23 ಅರ್ಧಶತಕ ಗಳಿಸಿದ್ದಾರೆ. ನಾಯಕನಾಗಿ ಆಡಿದ 195 ಐಪಿಎಲ್ ಪಂದ್ಯಾವಳಿಗಳಲ್ಲಿ 115ರಲ್ಲಿ ಗೆದ್ದಿದ್ದು, 79ರಲ್ಲಿ ಸೋತಿದ್ದಾರೆ. ಕೇವಲ 1 ಪಂದ್ಯ ಮಾತ್ರ ಫಲಿತಾಂಶವಿಲ್ಲದೇ ಅಂತ್ಯ ಕಂಡಿದೆ. ಧೋನಿ ನಾಯಕನಾಗಿ 9 ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ದು, 3 ಬಾರಿ ಗೆದ್ದು 6 ಬಾರಿ ಸೋಲು ಕಂಡಿದ್ದಾರೆ. ಎಂ.ಎಸ್.ಧೋನಿ ಐಪಿಎಲ್ನಿಂದ ಒಟ್ಟು 152.8ಕೋಟಿ ರೂಪಾಯಿ ಗಳಿಸಿದ್ದು, ಈ ವರ್ಷದ ಆವೃತ್ತಿಯಲ್ಲಿ 15 ಕೋಟಿ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ:
MS Dhoni Birthday: ಎಂ.ಎಸ್. ಧೋನಿ ಜನ್ಮದಿನ ವಿಶೇಷ .. ನಾಯಕನಾಗಿ ಮಹೀ ಸೃಷ್ಟಿಸಿದ ಐದು ಶ್ರೇಷ್ಠ ದಾಖಲೆಗಳಿವು
MS Dhoni Birthday: 40ನೇ ವರ್ಷಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್ ಧೋನಿ; ಅಭಿಮಾನಿಯಿಂದ ವಿಭಿನ್ನ ಆಚರಣೆ