ಕರೆಂಟ್ ಶಾಕ್ನಿಂದ ಬಲಗೈ ಕಳೆದುಕೊಂಡರೂ ಕೂಲಿ ಕೆಲಸ ಬಿಡದ ತಂದೆ. ನೆರೆಹೊರೆಯವರ ಬಳಿ ಸಾಕಷ್ಟು ಸಾಲ ಮಾಡಿದ ತಾಯಿ. ಈ ಇಬ್ಬರ ಹೋರಾಟಕ್ಕೆ ಪ್ರತಿಫಲವಾಗಿ ಮಗಳು ಇದೀಗ ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸುವ ಮೂಲಕ ತಮ್ಮ ಪೋಷಕರ ಹೋರಾಟದ ಕಥೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ವಾಸ್ತವವಾಗಿ ಗುಜರಾತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ (National Games 2022) ಉತ್ತರ ಪ್ರದೇಶದ ಮುನಿತಾ ಪ್ರಜಾಪತಿ ಎಂಬ ಯುವತಿ 20 ಕಿಮೀ ಮಹಿಳೆಯರ ವೇಗದ ನಡಿಗೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ನಿನ್ನೆಯಿಂದ ಆರಂಭವಾಗಿರುವ ನ್ಯಾಷನಲ್ ಗೇಮ್ಸ್ನಲ್ಲಿ 20 ಕಿಮೀ ಮಹಿಳೆಯರ ವೇಗದ ನಡಿಗೆಯಲ್ಲಿ ಸ್ಪರ್ಧಿಸಿದ್ದ ಮುನಿತಾ 1 ಗಂಟೆ 38 ನಿಮಿಷ 20 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಕರೆಂಟ್ ಶಾಕ್ನಿಂದ ತಂದೆಯ ಬಲಗೈ ಕಟ್
ಚಿನ್ನದ ಪದಕ ಗೆಲ್ಲುವುದರೊಂದಿಗೆ ನ್ಯಾಷನಲ್ ಗೇಮ್ಸ್ನಲ್ಲಿ ದಾಖಲೆ ಬರೆದಿರುವ 21 ವರ್ಷದ ಮುನಿತಾ ಕುಟುಂಬದ ಕಥೆ ಕೇಳಿದರೆ ಎಂತಹವರಿಗೂ ಕಣ್ಣೀರು ಬರದಿರದು. ತೀರ ಬಡ ಕುಟುಂಬದಲ್ಲಿ ಜನಿಸಿದ ಮುನಿತಾ ಅವರ ತಂದೆ ಕೂಲಿ ಕೆಲಸ ಮಾಡಿ, ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಅವರ ತಂದೆ ತಮ್ಮ ಬಲಗೈಯನ್ನು ಕಳೆದುಕೊಳ್ಳಬೇಕಾಯಿತು. ಇಷ್ಟೆಲ್ಲಾ ಆದರೂ ಮಗಳ ಕನಸನ್ನು ನನಸಾಗಿಸಲು ಮುನಿತಾ ತಂದೆ ಪಟ್ಟಪಾಡು ಅಷ್ಟಿಷ್ಟಲ್ಲ.
ಕೆಲಸಕ್ಕಾಗಿ ಆಟದ ಹಿಂದೆ ಬಿದ್ದೆ
ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರಿಂದ ಮುನಿತಾಳಿಗೆ ಸಲಹೆ ನೀಡಿದ ಅವರ ಅಕ್ಕ, ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಒಳ್ಳೆಯ ಸರ್ಕಾರಿ ಉದ್ಯೋಗವನ್ನೂ ಪಡೆಯಬಹುದು ಎಂಬ ಸಲಹೆಯನ್ನು ನೀಡಿದ್ದರಂತೆ. ಇದಾದ ನಂತರ ಮೈದಾನಕ್ಕಿಳಿದ ಮುನಿತಾ 2017 ರಲ್ಲಿ ಭೋಪಾಲ್‌ನಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಟ್ರಯಲ್ಸ್ ನೀಡಿದ್ದರು.
2 ವರ್ಷಗಳ ಹಿಂದೆಯೇ ದಾಖಲೆ
ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಮುನಿತಾ ಎಂದೂ ಹಿಂತ್ತಿರುಗಿ ನೋಡಲಿಲ್ಲ. ಮುನಿತಾ ಪ್ರಜಾಪತಿ 2018 ರ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದರೆ, ಎರಡು ವರ್ಷಗಳ ಹಿಂದೆ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 10 ಕಿ.ಮೀ ವೇಗದ ನಡಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
ಮಗಳಿಗಾಗಿ ಸಾಲ ಮಾಡಿದ ತಾಯಿ
ಮುನಿತಾಳ ತಾಯಿ ತನ್ನ ಸಹೋದರಿಯರಿಂದ ಸಾಲ ಪಡೆದು 2017 ರಲ್ಲಿ ಆಕೆಯನ್ನು ಟ್ರಯಲ್ಸ್‌ಗಾಗಿ ಭೋಪಾಲ್‌ಗೆ ಕಳುಹಿಸಿದ್ದರಂತೆ. ಈ ಅವಕಾಶ ತನ್ನ ಜೀವನದ ಕೊನೆಯ ಪ್ರಯೋಗವೆಂದು ಪರಿಗಣಿಸಿದ್ದ ಮುನಿತಾ ಟ್ರಯಲ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಆಯ್ಕೆಯಾದರು. ಆ ಬಳಿಕ ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಮುನಿತಾಗೆ ಪ್ರಾಧಿಕಾರದಿಂದ ಆಹಾರ ಮತ್ತು ಕಿಟ್‌ನ ಸೌಲಭ್ಯವೂ ದೊರೆಯಿತು.