Chess World Cup 2025: ಕೊನೆರು ಹಂಪಿಯವರನ್ನು ಮಣಿಸಿ ಚೆಸ್ ವಿಶ್ವಕಪ್ ಗೆದ್ದ 19 ವರ್ಷದ ದಿವ್ಯಾ ದೇಶಮುಖ್

FIDE Women’s Chess World Cup 2025 Final: 19 ವರ್ಷದ ಭಾರತೀಯ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರು 2025ರ ಮಹಿಳಾ ಚೆಸ್ ವಿಶ್ವಕಪ್ ಗೆದ್ದಿದ್ದಾರೆ. ಜಾರ್ಜಿಯಾದಲ್ಲಿ ನಡೆದ ಫೈನಲ್‌ನಲ್ಲಿ ಅವರು ಭಾರತದ ಕೊನೆರು ಹಂಪಿ ಅವರನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.ಈ ಮೂಲಕ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆಯನ್ನು ದಿವ್ಯಾ ನಿರ್ಮಿಸಿದ್ದಾರೆ.

Chess World Cup 2025: ಕೊನೆರು ಹಂಪಿಯವರನ್ನು ಮಣಿಸಿ ಚೆಸ್ ವಿಶ್ವಕಪ್ ಗೆದ್ದ 19 ವರ್ಷದ ದಿವ್ಯಾ ದೇಶಮುಖ್
Divya Deshmukh

Updated on: Jul 28, 2025 | 4:53 PM

ಭಾರತದ ಯುವ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ (Divya Deshmukh) 2025 ರ ಮಹಿಳಾ ಚೆಸ್ ವಿಶ್ವಕಪ್ ಪ್ರಶಸ್ತಿಯನ್ನು (Women’s Chess World Cup) ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 19 ವರ್ಷದ ದಿವ್ಯಾ, ಜಾರ್ಜಿಯಾದಲ್ಲಿ ನಡೆದ ಈ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದ ಲೆಜೆಂಡರಿ ಆಟಗಾರ್ತಿ ಕೊನೆರು ಹಂಪಿ (Koneru Humpy) ಅವರನ್ನು ಸೋಲಿಸುವ ಮೂಲಕ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ, ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳಾ ಚೆಸ್ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷವೇ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದಿದ್ದ ದಿವ್ಯಾ, ಈಗ ಮಹಿಳಾ ಚೆಸ್ ವಿಶ್ವಕಪ್‌ನ ಚಾಂಪಿಯನ್ ಆಗಿದ್ದಾರೆ. ಇದು ಮಾತ್ರವಲ್ಲದೆ, ಈ ಪ್ರಶಸ್ತಿ ಗೆಲುವಿನೊಂದಿಗೆ ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಚೆಸ್ ವಿಶ್ವಕಪ್​ ಗೆದ್ದ ದಿವ್ಯಾ

ಕಳೆದ 3 ವಾರಗಳಿಂದ ಜಾರ್ಜಿಯಾದ ಬಟುಮಿಯಲ್ಲಿ ನಡೆದ ಮಹಿಳಾ ಚೆಸ್ ವಿಶ್ವಕಪ್​ನಲ್ಲಿ ದಿವ್ಯಾ ದೇಶಮುಖ್ ಫೈನಲ್ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅವರ ನಂತರ, ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಕೂಡ ಫೈನಲ್ ತಲುಪುವ ಮೂಲಕ ಈ ಪ್ರಶಸ್ತಿ ಪಂದ್ಯವನ್ನು ಮತ್ತಷ್ಟು ವಿಶೇಷವಾಗಿಸಿದ್ದರು. ಏಕೆಂದರೆ, ಯಾರೇ ಗೆದ್ದರೂ, ಪ್ರಶಸ್ತಿ ಭಾರತದ ಪಾಲಾಗುವುದರ ಜೊತೆಗೆ ಮೊದಲ ಬಾರಿಗೆ ಭಾರತೀಯ ಮಹಿಳೆಯೊಬ್ಬರು ಚೆಸ್ ವಿಶ್ವಕಪ್ ಚಾಂಪಿಯನ್ ಆಗುತ್ತಿದ್ದರು. ಅದರಂತೆ ನಡೆದ ಫೈನಲ್ ಪಂದ್ಯದಲ್ಲಿ ಕೊನೆರು ಹಂಪಿ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿದ್ದರೂ, ಯುವ ಆಟಗಾರ್ತಿಯ ಮುಂದೆ ಅನುಭವಿ ಕೊನೆರು ಹಂಪಿ ಅವರು ಸೋಲೊಪ್ಪಿಕೊಳ್ಳಬೇಕಾಯಿತು.

ಟೈ-ಬ್ರೇಕ್​ನಲ್ಲಿ ವಿಜೇತರ ನಿರ್ಧಾರ

ಜುಲೈ 26 ರ ಶನಿವಾರ ನಡೆದ ಫೈನಲ್‌ನಲ್ಲಿ ದಿವ್ಯಾ ಮತ್ತು ಕೊನೆರು ಮುಖಾಮುಖಿಯಾಗಿದ್ದರು. ಅಂದೇ ದಿವ್ಯಾ ಗೆಲ್ಲುವ ಸಾಧ್ಯತೆಗಳು ಹೆಚ್ಚಿದ್ದವು. ಆದರೆ ಕೊನೆಯ ಹಂತದಲ್ಲಿ ದಿವ್ಯಾ ಮಾಡಿದ ತಪ್ಪು ನಡೆಗಳ ಲಾಭ ಪಡೆದುಕೊಂಡಿದ್ದ ಕೊನೆರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ನಂತರ ಭಾನುವಾರ ನಡೆದ ಎರಡನೇ ಪಂದ್ಯವೂ ಕೂಡ ಡ್ರಾದಲ್ಲಿ ಕೊನೆಗೊಂಡಿತ್ತು. ಹೀಗಾಗಿ ಪಂದ್ಯ ಟೈ-ಬ್ರೇಕ್​ನತ್ತ ಸಾಗಿತ್ತು. ಕ್ಲಾಸಿಕ್ ಸ್ವರೂಪದಲ್ಲಿ ನಡೆದಿದ್ದ ಫೈನಲ್‌ನ ಮೊದಲ ಎರಡು ಪಂದ್ಯಗಳು ಡ್ರಾ ಗೊಂಡಿದ್ದರೆ, ರ್ಯಾಪಿಡ್ ಸ್ವರೂಪದಲ್ಲಿ ನಡೆದ ಟೈ-ಬ್ರೇಕ್​ನಲ್ಲಿ ದಿವ್ಯಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ವಿಶ್ವದ ನಂಬರ್​ 1 ಚೆಸ್​ ಚತುರನಿಗೆ ಸೋಲುಣಿಸಿದ ಡಿ. ಗುಕೇಶ್

ಮೊದಲ ಭಾರತೀಯ ಮಹಿಳೆ

ಪಂದ್ಯ ಟೈ ಬ್ರೇಕ್​ನತ್ತ ಸಾಗಿದ್ದರಿಂದ ಕೊನೆರು ಹಂಪಿ ಕೊಂಚ ಮೇಲುಗೈ ಸಾಧಿಸಿದಂತೆ ತೋರುತ್ತಿತ್ತು. ಏಕೆಂದರೆ ರ್ಯಾಪಿಡ್ ಸ್ವರೂಪದಲ್ಲಿ 38 ವರ್ಷದ ಕೊನೆರು ಹಂಪಿ ದಿವ್ಯಾಗಿಂತ ಉತ್ತಮ ಆಟಗಾರ್ತಿಯಾಗಿದ್ದರು. ಆದರೆ ದಿವ್ಯಾ ತಮ್ಮ ಚಾಣಾಕ್ಷ ನಡೆಗಳಿಂದ ಕೊನೆರು ಹಂಪಿಯವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಈ ಮೂಲಕ ಕೇವಲ 19 ನೇ ವಯಸ್ಸಿನಲ್ಲಿ, ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ದಿವ್ಯಾ ಪಾತ್ರರಾಗಿದ್ದಾರೆ. ಇಷ್ಟು ಮಾತ್ರವಲ್ಲದೆ, ಈಗ ಅವರು ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಕೂಡ ಆಗಲಿದ್ದಾರೆ. ಪ್ರಾಸಂಗಿಕವಾಗಿ, ಅವರು ಭಾರತದ ಮೊದಲ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಅವರನ್ನು ಸೋಲಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದು ಮತ್ತಷ್ಟು ವಿಶೇಷವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Mon, 28 July 25