Pro Kabaddi League: ಪವನ್ ಪವರ್: ಹರ್ಯಾಣಕ್ಕೆ ಮಣ್ಣು ಮುಕ್ಕಿಸಿದ ಬೆಂಗಳೂರು ಬುಲ್ಸ್ಗೆ ಹ್ಯಾಟ್ರಿಕ್ ಜಯ
Bengaluru Bulls vs Haryana Steelers: ಬೆಂಗಳೂರು ಬುಲ್ಸ್ ತಂಡದ ಬಹುತೇಕ ರೇಡಿಂಗ್ ಮಾಡಿದ್ದು ಪವನ್ ಶೆರಾವತ್. ಮತ್ತೊಬ್ಬ ಪ್ರಮುಖ ರೇಡರ್ ಚಂದ್ರನ್ ರಂಜಿತ್ ಮಂಕಾಗಿ ಹೋದರೂ ಪವನ್ ನಿರೀಕ್ಷೆ ಹುಸಿ ಮಾಡಲಿಲ್ಲ. 42-28 ರಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧಿಸಿತು.
ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ (Pro Kabaddi League) ಗುರುವಾರದ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ ವಿರುದ್ಧ ಯು ಮುಂಬಾ ಅಬ್ಬರಿಸಿದರೆ, ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ (Bengaluru Bulls vs Haryana Steeler) ಭರ್ಜರಿ ಗೆಲುವು ಸಾಧಿಸಿತು. ವೈಟ್‌ಫೀಲ್ಡ್‌ನ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 42-28 ರಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧಿಸಿತು. ರೇಡರ್ ಪವನ್ (Pawan Sehrawat) 22 ಅಂಕಗಳನ್ನು ಗಳಿಸಿದರು. ಬೆಂಗಳೂರು ಬುಲ್ಸ್ ತಂಡದ ಬಹುತೇಕ ರೇಡಿಂಗ್ ಮಾಡಿದ್ದು ಪವನ್ ಶೆರಾವತ್. ಮತ್ತೊಬ್ಬ ಪ್ರಮುಖ ರೇಡರ್ ಚಂದ್ರನ್ ರಂಜಿತ್ ಮಂಕಾಗಿ ಹೋದರೂ ಪವನ್ ನಿರೀಕ್ಷೆ ಹುಸಿ ಮಾಡಲಿಲ್ಲ. ಸಮರ್ಥವಾಗಿ ನಿಭಾಯಿಸಿದ ಪವನ್ 29 ರೇಡಿಂಗ್ ಮಾಡಿ 22 ಅಂಕಗಳನ್ನ ಬಾಚಿಹಾಕಿದರು.
ಪವನ್ ಆರಂಭದಿಂದಲೇ ಪಾರಮ್ಯ ಮೆರೆದರು. ಇದರಿಂದಾಗಿ ಬೆಂಗಳೂರು ತಂಡವು ಅರ್ಧವಿರಾಮದ ವೇಳೆಗೆ ಬೆಂಗಳೂರು 19-13ರಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಎರಡು ಬಾರಿ ಆಲೌಟ್ ಪಾಯಿಂಟ್ಸ್ ಪಡೆಯಿತು. ನಂತರದ ಅವಧಿಯಲ್ಲಿಯೂ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ. ಬೆಂಗಳೂರು ಬುಲ್ಸ್ ತಂಡದ ಡಿಫೆನ್ಸ್ ಬಲಿಷ್ಠವಾಗಿತ್ತು. ರೇಡರ್ ಜಿ.ಬಿ. ಮೋರೆ ಡಿಫೆನ್ಸ್ನಲ್ಲಿ ತಮ್ಮ ನೈಪುಣ್ಯ ಮೆರೆದರು. ಅವರು ಗಳಿಸಿದ ಐದು ಅಂಕಗಳೆಲ್ಲವೂ ಟ್ಯಾಕಲ್ ಪಾಯಿಂಟ್ಗಳೇ ಆಗಿದ್ದವು. ಡಿಫೆಂಡರ್ ಮಹೇಂದರ್ ಸಿಂಗ್ 5 ಅಂಕ ಪಡೆದರು.
ಇನ್ನು ಹರ್ಯಾಣ ಸ್ಟೀಲರ್ಸ್ ತಂಡ ಇಂದು ಸಾಂಘಿಕ ಪ್ರದರ್ಶನ ತೋರಿದರೂ ಕ್ಷೇತ್ರ ರಕ್ಷಣೆಯಲ್ಲಿ ಎಡವಿತು. ವಿಕಾಸ್ ಕಂಡಾಲ 7 ಅಂಕ ಗಳಿಸಿದರು. ಜೈದೀಪ್, ರೋಹಿತ್ ಗುಲಿಯಾ, ಮೀತು ಪಟೇಲ್, ಆಶೀಶ್ ಒಂದಷ್ಟು ಅಂಕ ಗಳಿಸಿದರು. ಸ್ಟಾರ್ ಡಿಫೆಂಡರ್ ಸುರೇಂದರ್ ನಡ್ಡಾ ಒಳ್ಳೆಯ ಲಯದಲ್ಲಿರಲಿಲ್ಲ. ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳು ಇವತ್ತಿನ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿವೆ. ಬೆಂಗಳೂರು ಬುಲ್ಸ್ ಎರಡನೇ ಸ್ಥಾನಕ್ಕೆ ಏರಿದರೆ, ಯು ಮುಂಬಾ ಮೂರನೇ ಸ್ಥಾನಕ್ಕೆ ಏರಿತು.
ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಯು ಮುಂಬಾ 37-28 ಅಂಕಗಳಿಂದ ಜಯಭೇರಿ ಭಾರಿಸಿತು. ಯು ಮುಂಬಾ ಪರ ವಿ. ಅಜಿತ್ ಕುಮಾರ್ ಒಟ್ಟು 11 ಪಾಯಿಂಟ್ಸ್‌ನೊಂದಿಗೆ ಯಶಸ್ವಿ ರೈಡರ್ ಎನಿಸಿಕೊಂಡರೆ, ಅಭಿಷೇಕ್ ಸಿಂಗ್ 10 ಪಾಯಿಂಟ್ಸ್‌ನೊಂದಿಗೆ ಉತ್ತಮ ಸಾಥ್ ನೀಡಿದ್ರು. ಅಫ್ಘಾನಿಸ್ತಾನದ ಫಜೇಲ್ ಅತ್ರಾಚಲಿ 3 ಟ್ಯಾಕಲ್ ಪಾಯಿಂಟ್ಸ್ ಗಿಟ್ಟಿಸಿದರು. ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ 9 ರೈಡಿಂಗ್ ಪಾಯಿಂಟ್ಸ್, ವಿಶಾಲ್ 3 ಟ್ಯಾಕಲ್ ಪಾಯಿಂಟ್ಸ್, ಶೌಲ್ ಕುಮಾರ್ 2 ಟ್ಯಾಕಲ್ ಪಾಯಿಂಟ್ಸ್‌ನೊಂದಿಗೆ ಮಿಂಚಿದರು.
ಇಂದಿನ (ಡಿ. 31) ಪಂದ್ಯಗಳು:
ತಮಿಳ್ ತಲೈವಾಸ್ vs ಪುಣೇರಿ ಪಲ್ಟಾನ್, ಪಂದ್ಯ ಆರಂಭ: ಸಂಜೆ 7:30ಕ್ಕೆ
ಪಟ್ನಾ ಪೈರೇಟ್ಸ್ vs ಬೆಂಗಾಲ್ ವಾರಿಯರ್ಸ್, ಪಂದ್ಯ ಆರಂಭ: 8:30ಕ್ಕೆ
(Bengaluru Bulls outplayed Haryana Steelers 42-28 in the Vivo Pro Kabaddi League Season 8)