Uday Chowta: ಏಕಲವ್ಯ ಪ್ರಶಸ್ತಿ ವಿಜೇತ, ಮಾಜಿ ಕಬಡ್ಡಿ ಆಟಗಾರ ಉದಯ ಚೌಟ ನಿಧನ
ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆಯಲ್ಲಿ ವಾಸವಿದ್ದ ಉದಯ ಚೌಟ, ಬ್ಯಾಂಕ್ ಆಫ್ ಬರೋಡಾದ ಸುರತ್ಕಲ್ ಶಾಖೆಯಲ್ಲಿ ಉಪ ಪ್ರಬಂಧಕರಾಗಿ ಕೆಲಸ ಮಾಡುತ್ತಿದ್ದರು.
ಭಾರತೀಯ ಕಬಡ್ಡಿ (Kabaddi) ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಉದಯ ಚೌಟ (Uday Chowta) ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಉದಯ ಚೌಟ ಅವರು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಾಣಿಯವರು. ಶನಿವಾರ ಬೆಳಗಿನ ಜಾವ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. 2007ರ ದ್ವಿತೀಯ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಗೆಲುವು ಸಾಧಿಸಿರುವ ತಂಡದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಉದಯ ಚೌಟ ಪಡೆದಿದ್ದರು.
ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆಯಲ್ಲಿ ವಾಸವಿದ್ದ ಉದಯ ಚೌಟ, ಬ್ಯಾಂಕ್ ಆಫ್ ಬರೋಡಾದ ಸುರತ್ಕಲ್ ಶಾಖೆಯಲ್ಲಿ ಉಪ ಪ್ರಬಂಧಕರಾಗಿ ಕೆಲಸ ಮಾಡುತ್ತಿದ್ದರು. ಮಾಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುತ್ತೂರು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ಸಂತ ಫಿಲೋಮಿನ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುವ ಇವರು ವಿದ್ಯಾರ್ಥಿಯಾಗಿದ್ದಾಗಲೇ ಕ್ರೀಡಾಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ವಾಲಿಬಾಲ್ ಮತ್ತು ಕಬಡ್ಡಿ ಅಂದ್ರೆ ಅವರಿಗೆ ಅತೀವ ಪ್ರೀತಿ.
MS Dhoni: ಐಪಿಎಲ್ 2023 ರಲ್ಲಿ ಆಡ್ತೀರಾ? ಕೇಳಿದ್ದಕ್ಕೆ ಎಂಎಸ್ ಧೋನಿ ನೀಡದ ಉತ್ತರವೇನು ನೋಡಿ
ಕ್ರೀಡಾ ಕೂಟದಲ್ಲಿ 8 ತಿಂಗಳ ಕಾಲ ಏರ್ ಇಂಡಿಯಾ ಮತ್ತು 10 ತಿಂಗಳ ಕಾಲ ಕೆ.ಪಿ.ಟಿ.ಎಲ್. ಉದ್ಯೋಗದಲ್ಲಿದ್ದರು. ಉದಯ ಚೌಟ ಅವರು ನಾಲ್ಕು ವರ್ಷಗಳ ಕಾಲ ಅಂತರ ಕಾಲೇಜು ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಂಡು ಜಯ ದಾಖಲಿಸಿ ಅಂತರ ವಿವಿಗೆ ಮಂಗಳೂರು ವಿವಿ ಪ್ರತಿನಿಧಿಸಿದ್ದರು. ಜೂನಿಯರ್ ನ್ಯಾಷನಲ್, ಸೀನಿಯರ್ ನ್ಯಾಷನಲ್ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಹೆಗ್ಗಳಿಕೆ ಅವರದು. ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. 2004 ರಲ್ಲಿ ಭಾರತ– ಬಾಂಗ್ಲಾ ಟೆಸ್ಟ್ ಕಬಡ್ಡಿಯ 5 ಟೂರ್ನಿಯಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕ ದಾಖಲಿಸಿದ್ದರು. ಉತ್ತಮ ರೈಡರ್ ಆಗಿದ್ದರು.
1993ರಲ್ಲಿ ಜ್ಯೂನಿಯರ್ ನ್ಯಾಷನಲ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಇವರು 2000ದಿಂದ 2008ರ ವರೆಗೆ ರಾಷ್ಟ್ರೀಯ ತಂಡದಲ್ಲಿ ಇದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಸಂಘಟನಾ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2004ರಲ್ಲಿ ಭಾರತ-ಬಾಂಗ್ಲಾ ಟೆಸ್ಟ್ ಕಬಡ್ಡಿ ಪಂದ್ಯಾಟದಲ್ಲಿ 5 ಪಂದ್ಯಗಳನ್ನು ಜಯಿಸಿ ಉದಯ ಚೌಟ ಅವರು ಚಿನ್ನದ ಪದಕ ಪಡೆದಿದ್ದರು. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೆ ಕರ್ನಾಟಕ ಸರ್ಕಾರ ನೀಡುವ ಏಕಲವ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಪಡೆದ ಹೆಗ್ಗಳಿಕೆ ಅವರದ್ದು.
ಅಂತರರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ಮಿಂಚಿದ್ದ ಜಿಲ್ಲೆಯ ಕ್ರೀಡಾಪಟು ಉದಯ ಚೌಟ ಅವರ ನಿಧನದಿಂದ ತೀವ್ರ ಆಘಾತವಾಗಿದೆ. ಕಬಡ್ಡಿ ಕ್ರೀಡೆಗೆ ತುಂಬಲಾರದ ನಷ್ಟ ತಂದಿದೆ ಎಂದು ಕಬಡ್ಡಿ ತರಬೇತುದಾರ ಪುರುಷೋತ್ತಮ ಪೂಜಾರಿ ತಿಳಿಸಿದರು. ಇವರ ಅಕಾಲಿಕ ಮರಣಕ್ಕೆ ಕುಟುಂಬಸ್ಥರು, ಕಬಡ್ಡಿ ಅಭಿಮಾನಿಗಳು, ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:57 pm, Sat, 21 May 22