Novak Djokovic: ಕೋವಿಡ್ ಪಾಸಿಟಿವ್ ಇತ್ತು, ಆದ್ರೂ ಲಸಿಕೆ ಹಾಕಲಿಲ್ಲ: ಜೊಕೊವಿಚ್ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ

| Updated By: Vinay Bhat

Updated on: Jan 09, 2022 | 7:17 AM

ನೊವಾಕ್‌ ಜೊಕೊವಿಕ್‌ ಸರಿಯಾದ ದಾಖಲಾತಿಗಳನ್ನು ಒದಗಿಸುವಲ್ಲಿ ವಿಫಲರಾದ ಕಾರಣ ಅವರ ವೀಸಾ ತಿರಸ್ಕರಿಸಲಾಗಿದೆ. ಇದರ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಕೈಗೆತ್ತಿಕೊಳ್ಳಲಿದೆ. ಹೀಗಿರುವಾಗ ಇದೀಗ ಮತ್ತೊಂದು ಮಾಹಿತಿ ಬಹಿರಂಗವಾಗಿದೆ.

Novak Djokovic: ಕೋವಿಡ್ ಪಾಸಿಟಿವ್ ಇತ್ತು, ಆದ್ರೂ ಲಸಿಕೆ ಹಾಕಲಿಲ್ಲ: ಜೊಕೊವಿಚ್ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ
Novak Djokovic
Follow us on

ಟೆನಿಸ್​ ಲೋಕದ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌ (Novak Djokovic) ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿ ಆಡಲು ಹೋಗಿ ಈಗ ಸೆರೆಯಲ್ಲಿದ್ದಾರೆ. ಕೋವಿಡ್‌-19 (Covid 19) ಕಾರಣ ಆಸ್ಟ್ರೇಲಿಯಾದಲ್ಲಿ ಕಟ್ಟು ನಿಟ್ಟಿನ ನಿಯಮಗಳು ಜಾರಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನೊವಾಕ್‌ ಜೊಕೊವಿಕ್‌ ಸರಿಯಾದ ದಾಖಲಾತಿಗಳನ್ನು ಒದಗಿಸುವಲ್ಲಿ ವಿಫಲರಾದ ಕಾರಣ ಅವರ ವೀಸಾ ತಿರಸ್ಕರಿಸಲಾಗಿದೆ. ಇದರ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಕೈಗೆತ್ತಿಕೊಳ್ಳಲಿದೆ. ಹೀಗಿರುವಾಗ ಇದೀಗ ಮತ್ತೊಂದು ಮಾಹಿತಿ ಬಹಿರಂಗವಾಗಿದೆ. ನೊವಾಕ್ ಜೊಕೊವಿಚ್‌ ಅವರಿಗೆ ತಿಂಗಳ ಹಿಂದೆ ಕೋವಿಡ್-19 ಸೋಂಕು ತಗುಲಿತ್ತು ಎಂದು ವಕೀಲರು ಸಲ್ಲಿಸಿರುವ ದಾಖಲೆಗಳಿಂದ ಸಾಬೀತಾಗಿದೆ. ಹೀಗಿದ್ದರೂ ಅವರು ಲಸಿಕೆ ಪಡೆದುಕೊಂಡಿಲ್ಲ ಎಂದು ವರದಿಯಾಗಿದೆ.

ಈಗಾಗಲೇ ಜೊಕೊವಿಚ್ ಅವರ ವಿಸಾವನ್ನು ರದ್ದು ಮಾಡಲಾಗಿದೆ. ಆಸ್ಟ್ರೇಲಿಯಾದ ಅಧಿಕಾರಿಗಳು ಇದನ್ನು ಪುನರ್‌ಪರಿಶೀಲಿಸದೇ ಇದ್ದರೆ ಅಥವಾ ‍ಪೂರಕ ದಾಖಲೆಗಳನ್ನು ಸಲ್ಲಿಸದೇ ಇದ್ದರೆ ಈ ಬಾರಿಯ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ಆಡಲು ಅವಕಾಶ ಇರುವುದಿಲ್ಲ. ಕೋವಿಡ್‌ ನಿಯಮಗಳ ಪ್ರಕಾರ 3 ಆವೃತ್ತಿಗಳಲ್ಲಿ ಆಡುವ ಅಕವಾಶ ಕಳೆದುಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಜೊಕೊವಿಚ್ ಆಸ್ಟ್ರೇಲಿಯಾ ಅಧಿಕಾರಿಗಳ ಕ್ರಮದ ವಿರುದ್ಧ ಸವಾಲು ಹಾಕಿದ್ದಾರೆ. ಟೂರ್ನಿಯ ಆಯೋಜಕರು ತಮಗೆ ಡಿಸೆಂಬರ್ 30ರಂದು ಹಸಿರು ನಿಶಾನೆ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಟೆನಿಸ್ (Australian Open) ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಮತ್ತು ಕೋಚಿಂಗ್ ಹಾಗೂ ಸಹಾಯಕ ಸಿಬ್ಬಂದಿ ಎಲ್ಲರೂ ವ್ಯಾಕ್ಸಿನೇಟೆಡ್ ಆಗಿರಬೇಕು ಎಂಬ ನಿಯಮ ಇದೆ. ಆದರೆ, ಪ್ರಬಲ ವೈದ್ಯಕೀಯ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದೇ ಹೋದ ಸಂದರ್ಭಗಳಲ್ಲಿ ಮಾತ್ರ ಕಡ್ಡಾಯ ವ್ಯಾಕ್ಸಿನ್​ನಿಂದ ವಿನಾಯಿತಿ ನೀಡಲಾಗುತ್ತದೆ.

ವಿಶ್ವದ ನಂ.1 ಆಟಗಾರ ಹಾಗೂ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ದಾಖಲೆಯ 9 ಬಾರಿ ಟ್ರೋಫಿ ಗೆದ್ದಿರುವ ನೊವಾಕ್‌ಗೆ ಕೋವಿಡ್‌-19 ಲಸಿಕೆ ಪಡೆಯದೇ ಇದ್ದರೂ ವೈದ್ಯಕೀಯ ಕಾರಣ ಹಿನ್ನೆಲೆಯಲ್ಲಿ ಟೂರ್ನಿಗೆ ಪ್ರವೇಶ ಲಭ್ಯವಾಗಿತ್ತು. ಆದರೆ, ವೈದ್ಯಕೀಯ ಕಾರಣ ಕೊಟ್ಟು ಪಡೆಯಬೇಕಾದ ವೀಸಾ ತೆಗೆದುಕೊಳ್ಳದೇ ಇದ್ದ ಕಾರಣ ಈ ಗೊಂದಲಕ್ಕೆ ಸಿಲುಕಿದ್ದಾರೆ. ಆಸ್ಟ್ರೇಲಿಯಾದಲ್ಲಿ ಲಸಿಕೆಗಳಿಗೆ ಬಹಳ ಒತ್ತು ಕೊಡಲಾಗಿದೆ. ಅಲ್ಲಿನ ಬಹುತೇಕ ರಾಜ್ಯಗಳಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಬಹುತೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಅಂಥ ಆಸ್ಟ್ರೇಲಿಯಾ ದೇಶದಲ್ಲಿ ನಿಂತು ಲಸಿಕೆ ವಿರುದ್ಧ ಜೋಕೊವಿಚ್ ಮಾತನಾಡುತ್ತಿದ್ದಾರೆ ಎಂಬುದು ಅಲ್ಲಿನ ಸರ್ಕಾರದಲ್ಲಿರುವವರ ಆಕ್ರೋಶ.

ರೆನಾಟ ಒರಕೋವಗೂ ನಿರ್ಬಂಧ:

ಜೆಕ್ ಗಣರಾಜ್ಯದ ಮಹಿಳಾ ಟೆನಿಸ್ ಪಟು ರೆನಾಟ ವೊರಕೋವ ಅವರನ್ನು ಕೂಡ ಆಸ್ಟ್ರೇಲಿಯಾ ವಶಕ್ಕೆ ಪಡೆದಿರುವುದು ವರದಿಯಾಗಿದೆ. ಇ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಬಂದಿದ್ದ ವೊರಕೋವ ಅವರನ್ನು ಶುಕ್ರವಾರ ವಶಕ್ಕೆ ಪಡೆದು ಜೊಕೊವಿಚ್‌ ಇರುವ ಹೋಟೆಲ್‌ನಲ್ಲೇ ಇರಿಸಲಾಗಿದೆ. 38 ವರ್ಷದ ಆಟಗಾರ್ತಿಯನ್ನು ಆಸ್ಟ್ರೇಲಿಯಾದ ಗಡಿ ರಕ್ಷಣಾ ಪಡೆಯ ಅಧಿಕಾರಿಗಳು ವಶಕ್ಕೆ ಪಡೆದು ಮೆಲ್ಬರ್ನ್‌ನ ಪಾರ್ಕ್ ಹೋಟೆಲ್ ಕಟ್ಟಡದೊಳಗೆ ಕರೆದುಕೊಂಡು ಹೋಗಿರುವ ಚಿತ್ರಗಳು ಮತ್ತು ವಿಡಿಯೊಗಳು ಬಹಿರಂಗವಾಗಿವೆ.

Pro Kabaddi 2021: ಬೆಂಗಳೂರು ಬುಲ್ಸ್​ಗೆ ಯುಪಿ ಯೋಧಾರ ಸವಾಲು: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?