ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಫೆಡರರ್ ಆಸೆಗೆ ಅಡ್ಡಿಯಾದ ಪೋಲೆಂಡ್​ನ ಹುರ್ಕಾಜ್

| Updated By: Skanda

Updated on: Jul 08, 2021 | 2:45 PM

ಹುರ್ಕಾಜ್ ಅವರಿಗೆ ಫೆಡರರ್ ನೇರ ಸೆಟ್​ಗಳಲ್ಲಿ ಸೋತಿದ್ದು ಅಚ್ಚರಿಯೇ ಸರಿ. ಯಾಕೆಂದರೆ, 2002 ರಿಂದ ಈ ಟೂರ್ನಿಯಲ್ಲಿ ಅವರು ಯಾವತ್ತೂ ನೇರ ಸೆಟ್​ಗಳ ಪರಾಭವ ಕಂಡಿರಲಿಲ್ಲ. ವಿಂಬಲ್ಡನ್​ನಲ್ಲಿ ಅವರ ಇಂದಿನ ಸೋಲು ಒಂದು ಯುಗದ ಅಂತ್ಯದಂತೆ ಭಾಸವಾಯಿತು

ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಫೆಡರರ್ ಆಸೆಗೆ ಅಡ್ಡಿಯಾದ ಪೋಲೆಂಡ್​ನ ಹುರ್ಕಾಜ್
ರೋಜರ್ ಫೆಡರರ್
Follow us on

ವಿಂಬಲ್ಡನ್:  ಸುಮಾರು ಎರಡು ದಶಕಗಳಿಂದ ವಿಶ್ವದ ಆಗ್ರಮಾನ್ಯ ಟೆನಿಸ್ ಆಟಗಾರರಲ್ಲಿ ಒಬ್ಬರೆನಿಸಿಕೊಂಡು ತಮ್ಮ ಉತ್ಕೃಷ್ಟ ಕರೀಯರ್​ನಲ್ಲಿ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸ್ವಿಜರ್​ಲ್ಯಾಂಡ್​ನ ರೋಜರ್ ಫೆಡರರ್ ಅವರ ವಿಂಬಲ್ಡನ್ ಯಾತ್ರೆ ಕೇವಲ ಈ ವರ್ಷ ಮಾತ್ರವಲ್ಲ ಅವರು ಬದುಕಿನ ಉಳಿದ ಭಾಗಕ್ಕೂ ಕೊನೆಗೊಂಡಂತಾಗಿದೆ. 39 ವರ್ಷ ವಯಸ್ಸಿನ ಫೆಡರರ್ ಮುಂದಿನ ವರ್ಷ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುವ ಸಾಧ್ಯತೆ ಪ್ರಾಯಶಃ ಇಲ್ಲ. ಆದರೆ ಬ್ರಿಟನ್ನಿನ ಕ್ರಿಡಾಸಕ್ತರು ಈ ಲೆಜೆಂಡರಿ ಆಟಗಾರನ ಮನಮೋಹಕ ಅಟವನ್ನು ಬಹಳ ದಿನಗಳವರೆಗೆ ನೆನಪಿಲ್ಲಿಟ್ಟುಕೊಳ್ಳಲಿದ್ದಾರೆ. ವಿಂಬಲ್ಡನ್ ಗ್ರಾಸ್ ಕೋರ್ಟ್​ ಮೇಲೆ ಅವರು ನಿಜಕ್ಕೂ ಚಕ್ರಾಧಿಪತಿಯಂತೆ ಮೆರೆದರು. ಈ ವರ್ಷ ಅವರು ವಿಂಬಲ್ಡನ್ ಟ್ರೋಫಿ ಗೆದ್ದು ವೃತ್ತಪರ ಟೆನಿಸ್​ಗೆ ವಿದಾಯ ಹೇಳಬಹುದು ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರ ಆಸೆಯನ್ನು ಪೋಲೆಂಡ್​ ಯುವ ಆಟಗಾರ ಹ್ಯುಬರ್ಟ್ ಹರ್ಕಾಜ್ ಮಣ್ಣುಗೂಡಿಸಿದರು.

ಹರ್ಕಾಜ್ ಅವರಿಗೆ ಫೆಡರರ್ ನೇರ ಸೆಟ್​ಗಳಲ್ಲಿ ಸೋತಿದ್ದು ಅಚ್ಚರಿಯೇ ಸರಿ. ಯಾಕೆಂದರೆ, 2002 ರಿಂದ ಈ ಟೂರ್ನಿಯಲ್ಲಿ ಅವರು ಯಾವತ್ತೂ ನೇರ ಸೆಟ್​ಗಳ ಪರಾಭವ ಕಂಡಿರಲಿಲ್ಲ. ವಿಂಬಲ್ಡನ್​ನಲ್ಲಿ ಅವರ ಇಂದಿನ ಸೋಲು ಒಂದು ಯುಗದ ಅಂತ್ಯದಂತೆ ಭಾಸವಾಯಿತು. ಪಂದ್ಯವನ್ನು ನೋಡುತ್ತಿದ್ದವರ ಹೃದಯಗಳೂ ಭಾರವಾಗಿದ್ದವು.

ಬ್ರಿಟನ್ ಆಟಗಾರ ಆಂಡಿ ಮುರ್ರೆ ಮತ್ತು ಅಮೇರಿಕಾದ ವಿಲಿಯಮ್ಸ್ ಸಹೋದರಿಯರನ್ನು ಹಲವಾರು ವರ್ಷಗಳಿಂದ ವಿಂಬಲ್ಡನ್​ನಲ್ಲಿ ನೋಡುತ್ತಿರುವವರು, ಫೇಡರರ್​ ಇದೇ ಕೊನೆ ಬಾರಿ ಇಲ್ಲಿ ನೋಡಿದ್ದು ಅಂತ ಒಪ್ಪಿಕೊಳ್ಳಲು ತಯಾರಿಲ್ಲ. ತಮ್ಮ ನಿರ್ಣಯದ ಬಗ್ಗೆ ಅವರು ಇಷ್ಟರಲ್ಲೇ ಸುಳಿವು ನೀಡಬಹುದು. ಅವರ ಇತ್ತೀಚಿನ ಫಿಟ್​ನೆಸ್ ಗಮನಿಸುತ್ತಿದ್ದರೆ, ‘ಫೆಡ್ಡೀ ನಿಂಗೆ ವಯಸ್ಸಾಯ್ತೋ,’ ಅನ್ನಲೇಬೇಕಾಗಿದೆ.

ವಿಂಬಲ್ಡನ್ ಸೆಂಟರ್ ಕೋರ್ಟ್​ ಜೊತೆ ಫೆಡರರ್​ ಅವರದ್ದು ಅವಿನಾಭಾವ ಸಂಬಂಧ. ಇದೇ ಕೋರ್ಟ್​ನಲ್ಲಿ ಇಂದಿನ ಪಂದ್ಯ ಅವರು ನೇರ ಸೆಟ್​ಗಳಲ್ಲಿ ಸೋತಿದ್ದು ನಿಜವಾದರೂ, ಅದು ಹೀನಾಯ ಸೋಲೇನೂ ಅನಿಸಲಿಲ್ಲ. 6-3, 7-6 6-0 ಸ್ಕೋರ್​ಲೈನ್ ಪಂದ್ಯ ಏಕಪಕ್ಷೀಯವಾಗಿತ್ತು ಎಂಬ ಭಾವನೆ ಮೂಡಿಸುತ್ತದೆ. ಅದರೆ ಅವರ ಚಮತ್ಕಾರಿಕ ಮತ್ತು ನೋಡುಗರನ್ನು ಮಂತ್ರಮುಗ್ಧಗೊಳಿಸುವ ಆಟದ ಸೊಬಗು ಇಡೀ ಪಂದ್ಯದಲ್ಲಿ ಅಲ್ಲದಿದ್ದರೂ ಝಲಕ್​ಗಳಲ್ಲಿ ಕಂಡುಬಂತು. ಆರಡಿ ಐದಿಂಚು ಎತ್ತರದ ಹರ್ಕಾಜ್ ಇವತ್ತು ಮೈದಾನದಲ್ಲಿ ಆವೇಶಕ್ಕೊಳಗಾದವರಂತೆ ಆಡಿದರು. ಅವರಿಂದ ತಪ್ಪು ಘಟಿಸುವುದು ಸಾಧ್ಯವೇ ಇಲ್ಲವೇನೋ ಎಂಬ ಸನ್ನಿವೇಶ ಸೆಂಟರ್​ ಕೋರ್ಟ್​ನಲ್ಲಿತ್ತು.

ಎಂಟು ಬಾರಿ ವಿಂಬಲ್ಡನ್ ಚಾಂಪಿಯನ್​ಶಿಪ್​ ಗೆದ್ದಿರುವ ಫೆಡರರ್​ಗೆ ಈ ಟೂರ್ನಿಯಲ್ಲಿ ಇಂದಿನದು 119 ನೇ ಪಂದ್ಯವಾಗಿತ್ತು. ಅಷ್ಟು ಪಂದ್ಯಗಳಲ್ಲಿ ಸ್ವಿಸ್ ಆಟಗಾರ ಕೇವಲ 14 ಬಾರಿ ಮಾತ್ರ ಸೋಲು ಅನುಭವಿಸಿದ್ದಾರೆ ಅಂದರೆ ಅವರು ಯಾವ ಪರಿ ಇಲ್ಲಿ ಹೆಚ್ಚುಗಾರಿಕೆ ಮೆರೆದಿದ್ದಾರೆ ಅನ್ನೋದು ವೇದ್ಯವಾಗುತ್ತದೆ.

ಇದನ್ನೂ ಓದಿ: Wimbledon 2021: ಸುಲಭವಾಗಿ ಗೆದ್ದು, 10 ನೇ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ತಲುಪಿದ ನೊವಾಕ್ ಜೊಕೊವಿಕ್

Published On - 12:34 am, Thu, 8 July 21