ಎಂಟನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ನಲ್ಲಿ (Pro Kabaddi League) ಇನ್ನೂ ಖಾತೆ ತೆರೆಯದೆ ತೆಲುಗು ಟೈಟಾನ್ಸ್ ತಂಡ ತನ್ನ ಸೋಲಿನ ಪಯಣವನ್ನು ಮುಂದುವರೆಸಿದೆ. ಸೋಮವಾರದ ಮುಖಾಮುಖಿಯಲ್ಲಿ ಅದು ಬೆಂಗಾಲ್ ವಾರಿಯರ್ ಕೈಯಲ್ಲಿ 27-28 ಅಂತರದ ಆಘಾತಕ್ಕೆ ಸಿಲುಕಿತು. ಇದು 10 ಪಂದ್ಯಗಳಲ್ಲಿ ಟೈಟಾನ್ಸ್‌ಗೆ ಎದುರಾದ 8ನೇ ಸೋಲು. ಉಳಿದೆರಡು ಪಂದ್ಯ ಡ್ರಾ ಆಗಿತ್ತು. ಬಿ ಸಿ ರಮೇಶ್ ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ ತಂಡದ ಗೆಲುವಿನಲ್ಲಿ ಕ್ಯಾಪ್ಟನ್ ಮಣಿಂದರ್ ಸಿಂಗ್ ಮತ್ತೆ ಪ್ರಮುಖ ಪಾತ್ರ ವಹಿಸಿದರು. ಆದರೆ, ಅವರು 10 ಅಂಕಗಳನ್ನ ಗಳಿಸಲು 21 ರೇಡ್ಗಳು ಬೇಕಾಯಿತು. ಇದು ಅವರ ಸತತ 9ನೇ ಸುಪರ್10 ರೇಡ್. ಕರ್ನಾಟಕದ ಸುಕೇಶ್ ಹೆಗ್ಡೆ 9 ರೇಡ್ ಮಾಡಿ 5 ಅಂಕ ಗಳಿಸಿದರು.
ತೆಲುಗು ಟೈಟಾನ್ಸ್ ಪರ ರೇಡರ್ ರಜನೀಶ್ 11 ಅಂಕ ಗಳಿಸಿ ಸೈ ಎನಿಸಿದರು. ಆದರೆ, ಟೂರ್ನಿಯಲ್ಲಿ ತಂಡಕ್ಕೆ ಚೊಚ್ಚಲ ಗೆಲುವು ತಂದುಕೊಡಬಲ್ಲ ಆಟ ಬರಲಿಲ್ಲ. ತೆಲುಗು ಟೈಟಾನ್ಸ್ ಈ ಸೀಸನ್ನಲ್ಲಿ ಆಡಿರುವ 10 ಪಂದ್ಯಗಳಲ್ಲಿ ಒಂದೂ ಗೆಲುವು ಸಿಕ್ಕಿಲ್ಲ.
ಇತ್ತಂಡಗಳ ನಡುವೆ ನಡೆದ ಈ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮಧ್ಯಂತರಕ್ಕೆ ತೆಲುಗು ಟೈಟನ್ಸ್ 13 ಅಂಕ ಗಳಿಸಿದರೆ ಬೆಂಗಾಲ್ ವಾರಿಯರ್ಸ್ 14 ಅಂಕಗಳನ್ನು ಪಡೆದುಕೊಂಡು 1 ಅಂಕದ ಮುನ್ನಡೆಯನ್ನು ಸಾಧಿಸಿತ್ತು. ದ್ವಿತೀಯಾರ್ಧದ ಐದನೇ ನಿಮಿಷದಲ್ಲಿ ತೆಲುಗು ಟೈಟಾನ್ಸ್ ತಂಡದ ರಜನೀಶ್ ಮಾಡಿದ 3 ಅಂಕಗಳ ರೈಟ್ ತಂಡಕ್ಕೆ 4 ಅಂಕಗಳ ಮುನ್ನಡೆಯನ್ನು ತಂದುಕೊಟ್ಟಿತ್ತು. ಹೀಗೆ ಮುನ್ನಡೆಯನ್ನು ಸಾಧಿಸಿದ್ದ ತೆಲುಗು ಟೈಟಾನ್ಸ್ ತಂಡವನ್ನು ಬೆಂಗಾಲ್ ವಾರಿಯರ್ಸ್ ತಂಡ ಕಟ್ಟಿ ಹಾಕಿತು. ಪಂದ್ಯ ಮುಕ್ತಾಯವಾಗುವುದಕ್ಕೆ 2 ನಿಮಿಷಗಳು ಬಾಕಿ ಇದ್ದಾಗ ತೆಲುಗು ಟೈಟಾನ್ಸ್ ತಂಡದ ರಜನೀಶ್ ಅವರನ್ನು ಬೆಂಗಾಲ್ ವಾರಿಯರ್ಸ್ ತಂಡದ ರಣ್ ಸಿಂಗ್ ಟ್ಯಾಕಲ್ ಮಾಡಿದರು. ಈ ಮೂಲಕ ತೆಲುಗು ಟೈಟಾನ್ಸ್ ಆಲ್ ಔಟ್ ಆಗಿ ಬೆಂಗಾಲ್ ವಾರಿಯರ್ಸ್ ವಿರುದ್ಧ 1 ಅಂಕದ ಸೋಲನ್ನು ಅನುಭವಿಸಿತು.
ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಯುಪಿ ಯೋದ್ಧಾ 50-40 ರಿಂದ ಪುಣೇರಿಗೆ ಸೋಲುಣಿಸಿತು. ಸುರೇಂದರ್ ಗಿಲ್ ಮತ್ತು ಪ್ರದೀಪ್ ನರ್ವಾಲ್ ಮಿಂಚಿದರು. ಇಬ್ಬರೂ ಕ್ರಮವಾಗಿ 21 ಮತ್ತು 10 ಪಾಯಿಂಟ್ ಕಲೆ ಹಾಕಿದರು. ಪುಣೇರಿ ಪಲ್ಟನ್ ತಂಡಕ್ಕಾಗಿ ಅಸ್ಲಾಂ ಇನಾಮದಾರ್ ಮತ್ತು ಮೋಹಿತ್ ಗೋಯತ್ ಸೂಪರ್ ಟೆನ್ ಸಾಧನೆ ಮಾಡಿದರು. ಆದರೆ ಟ್ಯಾಕ್ಲಿಂಗ್‌ನಲ್ಲಿ ಆದ ವೈಫಲ್ಯಗಳಿಂದಾಗಿ ತಂಡ ಸೋಲಿನ ಬಲೆಯಲ್ಲಿ ಸಿಲುಕಿತು.
ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳೂ ಧಾರಾಳ ಪಾಯಿಂಟ್‌ಗಳನ್ನು ಕಲೆ ಹಾಕಿದವು. ಮೂರು ಪಾಯಿಂಟ್‌ಗಳೊಂದಿಗೆ ಪ್ರದೀಪ್ ನರ್ವಾಲ್ ಮೊದಲ ರೇಡ್‌ನಲ್ಲೇ ಮಿಂಚಿದರು. ಅಸ್ಲಾಂ ಮತ್ತು ಮೋಹಿತ್ ಅವರ ಸಾಧನೆಯಿಂದಾಗಿ ಯುಪಿ ಯೋದ್ಧಾ ಆಲೌಟಾಯಿತು. ಮೊದಲಾರ್ಧ 20-20ರಲ್ಲಿ ಸಮ ಆಯಿತು. ಆದರೆ ದ್ವಿತೀಯಾರ್ಧದಲ್ಲಿ ಯೋದ್ಧಾ ಭರ್ಜರಿ ಆಟವಾಡಿ 30 ಪಾಯಿಂಟ್ ಕಲೆ ಹಾಕಿತು. ಯುಪಿ ಯೋದ್ಧಾ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿದೆ. ಪುಣೇರಿ ಪಲ್ಟನ್ 10ನೇ ಸ್ಥಾನದಲ್ಲಿ ಮುಂದುವರಿದಿದೆ.
IPL 2022: ಹರಾಜಿಗೂ ಮುನ್ನ ಅಹಮದಾಬಾದ್ ತಂಡ ಸೇರಲಿದ್ದಾರೆ ಕೆಕೆಆರ್ನ ಸ್ಟಾರ್ ಬ್ಯಾಟರ್! ಯಾರು ಗೊತ್ತಾ?