Tokyo Paralympics: ಪ್ಯಾರಾಲಿಂಪಿಕ್ಸ್​ನ ಕೊನೆಯ ದಿನ ಚಿನ್ನದ ಪದಕ ಗೆದ್ದ 5 ತಿಂಗಳ ಗರ್ಭಿಣಿ

| Updated By: Vinay Bhat

Updated on: Sep 06, 2021 | 11:05 AM

Lora Webster: ಅಮೆರಿಕಾ ತಂಡದ ಪ್ರಮುಖ ಸದಸ್ಯೆಯಾಗಿರುವ ಲೋರಾ ವೆಬ್‌ಸ್ಟರ್ ಫೈನಲ್ ಪಂದ್ಯದಲ್ಲಿ 6 ಅಂಕವನ್ನೂ ಗೆದ್ದುಕೊಟ್ಟರು. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಜಯಿಸಿ ಸ್ಫೂರ್ತಿದಾಯಕ ಸಾಧನೆ ಮೆರೆದಿದ್ದಾರೆ.

Tokyo Paralympics: ಪ್ಯಾರಾಲಿಂಪಿಕ್ಸ್​ನ ಕೊನೆಯ ದಿನ ಚಿನ್ನದ ಪದಕ ಗೆದ್ದ 5 ತಿಂಗಳ ಗರ್ಭಿಣಿ
lora webster
Follow us on

ಟೋಕಿಯೊದಲ್ಲಿ 13 ದಿನಗಳ ಕಾಲ ನಡೆದ ಪ್ಯಾರಾಲಿಂಪಿಕ್ಸ್ (Tokyo Paralympics) ಕ್ರೀಡಾಕೂಟಕ್ಕೆ ಭಾನುವಾರ ತೆರೆಬಿದ್ದಿದೆ. ಟೋಕಿಯೊ ನಗರದ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಸಮಾರೋಪ ಸಮಾರಂಭದ ಮೂಲಕ ಈ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆಬಿದ್ದಿತು. ಇದಕ್ಕೂ ಮುನ್ನ ನಡೆದ ಸಿಟ್ಟಿಂಗ್ ವಾಲಿಬಾಲ್​ನ ಫೈನಲ್ ಪಂದ್ಯದಲ್ಲಿ ಅಮೆರಿಕ ತಂಡ ಚೀನಾ ವಿರುದ್ಧ 3-1ರಿಂದ ಗೆಲುವು ದಾಖಲಿಸಿತು. ಅಮೆರಿಕಾ (America) ತಂಡ ಗೆಲುವು ಸಾಧಿಸಲು ಪ್ರಮುಖ ಕಾರಣವಾಗಿದ್ದು ಐದು ತಿಂಗಳ ಗರ್ಭಿಣಿಯಾಗಿರುವ ಲೋರಾ ವೆಬ್‌ಸ್ಟರ್ (Lora Webster).

ಹೌದು, ಅಮೆರಿಕಾ ತಂಡದ ಪ್ರಮುಖ ಸದಸ್ಯೆಯಾಗಿರುವ ಲೋರಾ ವೆಬ್‌ಸ್ಟರ್ ಫೈನಲ್ ಪಂದ್ಯದಲ್ಲಿ 6 ಅಂಕವನ್ನೂ ಗೆದ್ದುಕೊಟ್ಟರು. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಜಯಿಸಿ ಸ್ಫೂರ್ತಿದಾಯಕ ಸಾಧನೆ ಮೆರೆದಿದ್ದಾರೆ.

 

ಲೋರಾ ವೆಬ್‌ಸ್ಟರ್ 11ನೇ ವಯಸ್ಸಿನಲ್ಲಿದ್ದಾಗ ಎಲುಬು ಕ್ಯಾನ್ಸರ್‌ನಿಂದ ಎಡಗಾಲು ಕಳೆದುಕೊಂಡಿದ್ದರು. ಲೋರಾಗೆ ಪ್ಯಾರಾಲಿಂಪಿಕ್ಸ್ ಪದಕ ಗೆಲುವು ಅಥವಾ ಗರ್ಭಿಣಿಯಾಗಿರುವಾಗಲೇ ಕ್ರೀಡಾಸ್ಪರ್ಧೆಯಲ್ಲಿ ಕಾಣಿಸಿಕೊಂಡಿದ್ದು ಕೂಡ ಇದೇ ಮೊದಲೇನಲ್ಲ. ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು ಈ ಹಿಂದೆಯೂ 4 ಪದಕ ಜಯಿಸಿದ್ದರು. 5 ವರ್ಷಗಳ ಹಿಂದೆ ರಿಯೋದಲ್ಲಿ ಚಿನ್ನ, 2012, 2016ರಲ್ಲಿ ಬೆಳ್ಳಿ ಮತ್ತು 2004ರಲ್ಲಿ ಕಂಚು ಜಯಿಸಿದ್ದರು. ಅಲ್ಲದೆ, ಈಗಾಗಲೆ 3 ಮಕ್ಕಳ ತಾಯಿಯಾಗಿರುವ ಲೋರಾ, 4ನೇ ಬಾರಿಗೆ ಗರ್ಭಿಣಿಯಾಗಿರುವ ನಡುವೆಯೇ ಸಿಟ್ಟಿಂಗ್ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, “ಪಂದ್ಯ ಆಡಲು ಇಳಿದಾಗ ನಾನು ಗರ್ಭಿಣಿ ಎಂಬುದನ್ನೇ ಮರೆತುಬಿಡುತ್ತೇನೆ. ಆದರೂ ಪಂದ್ಯದ ವೇಳೆ ಡೈವ್ ಮಾಡುವ ಸಂದರ್ಭ ಬಂದಾಗ ನಾನು ಸ್ವಲ್ಪ ಎಚ್ಚರ ವಹಿಸುತ್ತೇನೆ. ಆಗ ನಾನು ಹೊಟ್ಟೆಯನ್ನು ಮುಂದೆಕೊಟ್ಟು ಡೈವ್ ಮಾಡುವುದಿಲ್ಲ. ಆರೋಗ್ಯಕರ ಗರ್ಭ ಧರಿಸಿದ್ದರೆ ಈ ರೀತಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅಪಾಯಕಾರಿ ಅಲ್ಲ” ಎಂದು ಲೋರಾ ವೆಬ್‌ಸ್ಟರ್ ಹೇಳಿಕೊಂಡಿದ್ದಾರೆ.

13 ದಿನಗಳ ಕಾಲ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಕೊರೊನಾ ವೈರಸ್‌ನ ಮಧ್ಯೆ ಯಶಸ್ವಿಯಾಗಿ ನಡೆದ ಈ ಕ್ರೀಡಾಕೂಟದಲ್ಲಿ ದಾಖಲೆ ಸಂಖ್ಯೆಯ 4,405 ಕ್ರೀಡಾಪಟುಗಳು ಭಾಗಿಯಾಗಿದ್ದರು.

ಈ ಬಾರಿ ಭಾರತದ ಕ್ರೀಡಾಪಟುಗಳಂತು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಟ್ಟು 19 ಪದಕಗಳನ್ನು ಈ ಕ್ರೀಡಾಕೂಟದಲ್ಲಿ ಭಾರತ ಗೆದ್ದು ಬೀಗಿದೆ. ಐದು ಚಿನ್ನದ ಪದಕ ಗೆದ್ದಿದ್ದರೆ, 8 ಬೆಳ್ಳಿ ಪದಕ ಹಾಗೂ 6 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಭಾರತ ಪದಕಪಟ್ಟಿಯಲ್ಲಿ 24ನೇ ಸ್ಥಾನ ಸಂಪಾದಿಸಿ ದಾಖಲೆ ಬರೆಯಿತು.

India vs England: ಟೀಮ್ ಇಂಡಿಯಾ 2-1 ಮುನ್ನಡೆಗೆ ಅಡ್ಡಿ ಪಡಿಸುತ್ತಾನ ವರುಣ?: ಅಂತಿಮ ದಿನದ ಹವಾಮಾನ ವರದಿ ಇಲ್ಲಿದೆ

India vs England: ಟೀಮ್ ಇಂಡಿಯಾಕ್ಕೆ ಡಬಲ್ ಶಾಕ್: ಇಂದು ಫೀಲ್ಡ್​​ಗಿಳಿಯಲ್ಲ ಈ ಆಟಗಾರರು: 5ನೇ ಟೆಸ್ಟ್​ಗೂ ಅನುಮಾನ

(Tokyo Paralympics Lora Webster Wins 5th Paralympics Medal While 5 Months Pregnant With 4th Child)