ಸೌತ್ ಏಷ್ಯಯನ್ ಕುಸ್ತಿ ಚಾಂಪಿಯನ್ಶಿಪ್: ಭಾರತಕ್ಕೆ ಚಿನ್ನ ತಂದ ಉಮೇಶ್ ಜಮಾದಾರ್
ಸೌತ್ ಏಷ್ಯಯನ್ ಕುಸ್ತಿ ಚಾಂಪಿಯನ್ ಶೀಪ್ನಲ್ಲಿ ಭಾರತದಿಂದ ಪ್ರತಿನಿಧಿಸಿದ ಉಮೇಶ್ ಜಮಾದಾರ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಲೇಷಿಯಾ ಕುಸ್ತಿ ಪಟು ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಭಾರತಕ್ಕೆ ಚಿನ್ನ ತಂದಿದ್ದಾರೆ.
ದಾವಣಗೆರೆ: ಸೌತ್ ಏಷ್ಯಯನ್ ಕುಸ್ತಿ ಚಾಂಪಿಯನ್ಶಿಪ್ (South Asian Wrestling Championship)ನಲ್ಲಿ ಭಾರತದಿಂದ ಪ್ರತಿನಿಧಿಸಿದ ಉಮೇಶ್ ಜಮಾದಾರ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಥೈಲ್ಯಾಂಡ್ನಲ್ಲಿ ಇಂದು ನಡೆದ 65 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಉಮೇಶ್, ಮಲೇಷಿಯಾ ಕುಸ್ತಿ ಪಟು ವಿರುದ್ಧ 10-00 ಅಂತರದ ಭರ್ಜರಿ ಜಯಗಳಿಸಿ ಭಾರತಕ್ಕೆ ಚಿನ್ನದ ಪದಕ ತಂದರು. ಇವರು ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದ ನಿವಾಸಿಯಾಗಿದ್ದು, ಕಳೆದ ಆರು ವರ್ಷಗಳಿಂದ ದಾವಣಗೆರೆ ಕ್ರೀಡಾ ಹಾಸ್ಟಲ್ನಲ್ಲಿದ್ದುಕೊಂಡು ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ ಎರಡು ನ್ಯಾಷನಲ್ ಚಾಂಪಿಯನ್ ಶೀಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.
ಇದನ್ನೂ ಓದಿ: GT vs RR, IPL 2022 Final: ಐಪಿಎಲ್ 2022ಕ್ಕೆ ಇಂದು ತೆರೆ: ಯಾರಾಗಲಿದ್ದಾರೆ ಚಾಂಪಿಯನ್?
ಉಮೇಶ್ ಅವರು ಮದಾರಸಾಬ್ ಜಾತ್ರೆಯಲ್ಲಿ ಕುಸ್ತಿ ಆಡುವುದನ್ನ ನೋಡಿದ್ದ ಅಂದಿನ ಬಸವಕಲ್ಯಾಣ ಶಾಸಕ ಬಿ. ನಾರಾಯಣ ಹಾಗೂ ಡಾ.ಅಮರನಾಥ ನಾಯಕ ಅವರು ಗಮನಿಸಿದ್ದರು. ಅದರಂತೆ ಉಮೇಶ್ ಅವರಿಗೆ ಹೆಚ್ಚಿನ ತರಬೇತಿ ನೀಡುವ ನಿಟ್ಟಿನಲ್ಲಿ ದಾವಣಗೆರೆ ಕ್ರೀಡಾ ಹಾಸ್ಟೆಲ್ಗೆ ಸೇರಿದರು.
ಕ್ರೀಡಾ ಹಾಸ್ಟೆಲ್ಗೆ ಸೇರಿದ ನಂತರ ಉಮೇಶ್ ಜೀವನದ ಹಾದಿಯನ್ನೇ ಬದಲಾಯಿಸಿತು. ಉತ್ತಮ ತರಬೇತಿ ಸಿಗುತ್ತಿದ್ದ ಹಿನ್ನೆಲೆ ನಿರಂತರವಾಗಿ ದಿನಕ್ಕೆ ಹತ್ತು ಗಂಟೆಗಳ ಕಾಲ ಕಸರತ್ತು ಮಾಡತೊಡಗಿದರು. ಸದ್ಯ ಕಲಾ ವಿಭಾಗದಲ್ಲಿ ಪದವಿ ವ್ಯಾಸಾಂಗ ನಡೆಸುತ್ತಿರುವ ಅವರು ಪಿಯುಸಿಯಲ್ಲಿದ್ದಾಗಲೇ ರಾಷ್ಟ್ರೀಯ ಮಟ್ಟದ ಕುಸ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ದಾವಣಗೆರೆ ಕ್ರೀಡಾ ಹಾಸ್ಟೆಲ್ನ ಮ್ಯಾಟ್ ಮೇಲೆ ಕುಸ್ತಿ ಕಲಿತು ಅದನ್ನೆ ಕರಗತ ಮಾಡಿಕೊಂಡ ಉಮೇಶ್ ಇಂದು ಥೈಲ್ಯಾಂಡ್ನಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ. ಬಸಣ್ಣ ಜಮಾದಾರ ಎಂಬುವರು ಉಮೇಶ್ ಅವರ ಕುಸ್ತಿ ತರಬೇತುದಾರರಾಗಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Sun, 29 May 22