
ಇಂದು ಮುಂಜಾನೆ ನಿಧನರಾದ ದಿಲೀಪ್ ಕುಮಾರ್ ಅವರಿಗೆ ದೇಶದ ಎಲ್ಲ ಕ್ಷೇತ್ರದ ಗಣ್ಯರು, ಅವರ ಅಭಿಮಾನಿಗಳು ಗೌರವ ಅರ್ಪಿಸುತ್ತಿದ್ದಾರೆ. ಅವರ ಸಾವಿನಿಂದಾದ ನೋವು ವ್ಯಕ್ತಪಡಿಸುತ್ತಿದ್ದಾರೆ. ಹಾಗೇ, ಪಾಕಿಸ್ತಾನದ ಕ್ರಿಕೆಟರ್ ಶಾಹಿದ್ ಅಫ್ರಿದಿ ಕೂಡ ದಿಲೀಪ್ ಕುಮಾರ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿ ಗೌರವ ಸಲ್ಲಿಸಿದ್ದಾರೆ. ದಿಲೀಪ್ ಕುಮಾರ್ ಕಳೆದ ಕೆಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 7.30ರಹೊತ್ತಿಗೆ ಅವರು ನಿಧನರಾಗಿದ್ದಾರೆ.
ದಿಲೀಪ್ ಕುಮಾರ್ ಮೂಲತಃ ಮುಸ್ಲಿಂ ಕುಟುಂಬದಿಂದ ಬಂದವರು. ಅವರ ಮೊದಲ ಹೆಸರು ಮೊಹಮ್ಮದ್ ಯೂಸುಫ್ ಖಾನ್. ನಂತರ ಅವರು ನಿರ್ಮಾಪಕಿ ದೇವಿಕಾ ರಾಣಿಯ ಮಾತಿಗೆ ಬೆಲೆ ಕೊಟ್ಟು ದಿಲೀಪ್ ಕುಮಾರ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಇದೀಗ ಶಾಹೀದ್ ಅಫ್ರಿದಿ ಯೂಸುಫ್ ಖಾನ್ ಹೆಸರನ್ನು ಉಲ್ಲೇಖಿಸಿಯೇ ತಮ್ಮ ಗೌರವ ಸಲ್ಲಿಸಿದ್ದಾರೆ. ದಿಲೀಪ್ ಕುಮಾರ್ ಎಂಬ ಹ್ಯಾಷ್ಟ್ಯಾಗ್ ಬಳಸಿದ್ದಾರೆ.
ನಾವೆಲ್ಲ ಅಲ್ಲಾನಿಗೇ ಸೇರಿದವರು..ಮತ್ತು ಒಂದು ದಿನ ಅವನಿದ್ದಲ್ಲಿಗೇ ಹೋಗುತ್ತೇವೆ. ಯೂಸುಫ್ ಖಾನ್ ಸಾಹೀಬ್ರನ್ನು ಕಳೆದುಕೊಂಡಿದ್ದು ನಮಗೆಲ್ಲರಿಗೂ ನಿಜಕ್ಕೂ ನಷ್ಟ. ಅವರು ನಮ್ಮ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ. ಸೈರಾ ಬಾನು ಸಾಹೀಬಾರಿಗೆ ನನ್ನ ಸಾಂತ್ವನಗಳು ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಧವನ್ ಸೇರಿ ಹಲವರು ದಿಲೀಪ್ ಕುಮಾರ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಕೇರಳ ಮಾಡೆಲ್ ಅಂತಿದ್ರು, ಈಗ ಕರ್ನಾಟಕ ಮಾಡೆಲ್ ಆಗಿದೆ; ಸಚಿವ ಆರ್.ಅಶೋಕ್
Published On - 1:00 pm, Wed, 7 July 21