ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಆರನೇ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಕ್ರೀಡಾಕೂಟದ ಒಂಬತ್ತನೇ ದಿನ ಪುರುಷರ ಹೈಜಂಪ್-ಟಿ64 ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ 26 ನೇ ಪದಕ ಮತ್ತು ಆರನೇ ಚಿನ್ನದ ಪದಕವಾಗಿದೆ. ಪ್ರವೀಣ್ ಕುಮಾರ್ ಅವರು 2.08 ಮೀಟರ್ ಎತ್ತರ ಜಿಗಿಯುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಇದು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರತಕ್ಕೆ ಇದುವರೆಗೆ ಸಿಕ್ಕಿರುವ 11ನೇ ಪದಕವಾಗಿದೆ. ಈ ಚಿನ್ನದ ಸಾಧನೆಯೊಂದಿಗೆ ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್, ಪ್ಯಾರಾಲಿಂಪಿಕ್ಸ್‌ನ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ನಂತರ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಲ್ಲದೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಪದಕ ಗೆದ್ದ ಸಾಧನೆಯನ್ನೂ ಪ್ರವೀಣ್ ಮಾಡಿದರು. ಕಳೆದ ಬಾರಿ ಅಂದರೆ 2020 ರ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪ್ರವೀಣ್, ಈ ಬಾರಿ ಪದಕದ ಬಣ್ಣವನ್ನು ಬದಲಿಸುವಲ್ಲಿ ಯಶಸ್ವಿಯಾದರು. ಹಾಗೆಯೇ 2.08 ಮೀಟರ್ ಜಿಗಿಯುವ ಮೂಲಕ ಪ್ರವೀಣ್, ಹೊಸ ಏಷ್ಯನ್ ದಾಖಲೆಯನ್ನು ನಿರ್ಮಿಸಿದರು. ಪ್ರವೀಣ್ ಅವರ ಈ ಪದಕದೊಂದಿಗೆ ಪದಕಗಳ ಪಟ್ಟಿಯಲ್ಲಿ ಭಾರತ ಮತ್ತೆ 14ನೇ ಸ್ಥಾನಕ್ಕೆ ತಲುಪಿದೆ. ಉಳಿದಂತೆ ಈ ಈವೆಂಟ್ನಲ್ಲಿ ಅಮೆರಿಕದ ಡೆರೆಕ್ ಲೊಸಿಡೆಂಟ್ (2.06 ಮೀ) ಬೆಳ್ಳಿ ಪದಕ ಗೆದ್ದರೆ, ಇಬ್ಬರು ಆಟಗಾರರು ಕಂಚಿನ ಪದಕ ಗೆದ್ದರು. ಉಜ್ಬೇಕಿಸ್ತಾನ್‌ನ ತೈಮುರ್‌ಬೆಕ್ ಗಿಯಾಜೊವ್ ಮತ್ತು ಪೋಲೆಂಡ್‌ನ ಮಸಿಯೆಜ್ ಲೆಪಿಯಾಟೊ ಜಂಟಿಯಾಗಿ 2.03 ಮೀಟರ್ ಜಿಗಿತದೊಂದಿಗೆ ಮೂರನೇ ಸ್ಥಾನ ಪಡೆದು ಕಂಚು ಗೆದ್ದರು.
Play. PRA(WIN). Progress✅🫡
What an extraordinary performance from Para High Jumper Praveen Kumar!
He upgrades his #Tokyo2020 Silver to Gold with a tremendous Personal Best leap of 2.08m and boosts #TeamIndia’s rankings in the #ParisParalympics2024 medals tally.
Savour… pic.twitter.com/yJ9VQdSZio
— SAI Media (@Media_SAI) September 6, 2024
ಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಪ್ರವೀಣ್ ಕುಮಾರ್ ಎತ್ತರ ಜಿಗಿತದಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಕಳೆದ ಮೂರು ವರ್ಷಗಳು ಅವರ ಪಾಲಿಗೆ ಅದ್ಭುತವಾಗಿದೆ. 2021 ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದಿದ್ದ ಪ್ರವೀಣ್, ಆ ನಂತರ 2023 ರಲ್ಲಿ ಹ್ಯಾಂಗ್ಝೌ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಈಗ ಪ್ರವೀಣ್ ಪ್ಯಾರಿಸ್‌ನಲ್ಲೂ ಹ್ಯಾಂಗ್‌ಝೌ ಪ್ರದರ್ಶನವನ್ನು ಪುನರಾವರ್ತಿಸಿದ್ದಾರೆ.
ಪ್ರವೀಣ್ ಕುಮಾರ್ ಗೆದ್ದ ಚಿನ್ನದ ಪದಕದೊಂದಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಭಾರತ ಇತಿಹಾಸ ನಿರ್ಮಿಸಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 5 ಚಿನ್ನದ ಪದಕಗಳನ್ನು ಒಳಗೊಂಡಂತೆ ಒಟ್ಟು 19 ಪದಕಗಳನ್ನು ಗೆದ್ದಿತ್ತು. ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೆ 26 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ 6 ಚಿನ್ನದ ಪದಕಗಳು ಸೇರಿದ್ದು, ಪ್ರವೀಣ್ಗೂ ಮೊದಲು ಅವನಿ ಲಖೇರಾ, ನಿತೇಶ್ ಕುಮಾರ್, ಸುಮಿತ್ ಅಂತಿಲ್, ಹರ್ವಿಂದರ್ ಸಿಂಗ್, ಧರಂಬೀರ್ ಭಾರತಕ್ಕೆ ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Fri, 6 September 24