ವಿನೇಶ್ ಫೋಗಟ್ ಬೆನ್ನಿಗೆ ನಿಂತ ಪ್ರಧಾನಿ; ಭಾರತದ ಮುಂದಿರುವ ಆಯ್ಕೆಗಳ ಬಗ್ಗೆ ಪಿಟಿ ಉಷಾ ಜೊತೆ ಮೋದಿ ಚರ್ಚೆ

| Updated By: ಪೃಥ್ವಿಶಂಕರ

Updated on: Aug 07, 2024 | 2:21 PM

Paris Olympics 2024: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಅಧಿಕ ತೂಕದ ಕಾರಣ ಫೈನಲ್ ಪಂದ್ಯಕ್ಕೂ ಮುನ್ನ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ. ಇದೀಗ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ವಿನೇಶ್ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.

ವಿನೇಶ್ ಫೋಗಟ್ ಬೆನ್ನಿಗೆ ನಿಂತ ಪ್ರಧಾನಿ; ಭಾರತದ ಮುಂದಿರುವ ಆಯ್ಕೆಗಳ ಬಗ್ಗೆ ಪಿಟಿ ಉಷಾ ಜೊತೆ ಮೋದಿ ಚರ್ಚೆ
ವಿನೇಶ್ ಫೋಗಟ್, ಪ್ರಧಾನಿ ಮೋದಿ
Follow us on

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಅಧಿಕ ತೂಕದ ಕಾರಣ ಫೈನಲ್ ಪಂದ್ಯಕ್ಕೂ ಮುನ್ನ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ. ಇದೀಗ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ವಿನೇಶ್ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ. ಇದರ ಜೊತೆಗೆ ಭಾರತ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷರಾಗಿರುವ ಪಿಟಿ ಉಷಾ ಅವರೊಂದಿಗೆ ಈ ಬಗ್ಗೆ ಚರ್ಚಿಸಿರುವ ಮೋದಿ, ವಿನೇಶ್‌ರ ಅನರ್ಹತೆಯನ್ನು ಪ್ರತಿಭಟಿಸುವಂತೆ ಸೂಚನೆ ನೀಡಿರುವುದಲ್ಲದೆ, ಭಾರತದ ಮುಂದಿರುವ ಆಯ್ಕೆಗಳೇನು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ

ಇನ್ನು ತಮ್ಮ ಎಕ್ಸ್ ಖಾತೆಯಲ್ಲಿ ವಿನೇಶ್ ಫೋಗಟ್​ ಅವರ ಮನೋಬಲ ಹೆಚ್ಚಿಸುವ ಪೋಸ್ಟ್ ಮಾಡಿರುವ ಮೋದಿ, ‘ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್. ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ. ಇಂದಿನ ಆಘಾತದಿಂದ ನೋವಾಗಿದೆ. ನಾನು ಅನುಭವಿಸುತ್ತಿರುವ ಹತಾಶೆಯ ಭಾವನೆಯನ್ನು ಈ ಪದಗಳು ವ್ಯಕ್ತಪಡಿಸಬಹುದು ಎಂದು ಬಯಸುತ್ತೇನೆ. ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು ನಿಮ್ಮ ಸ್ವಭಾವ. ನಾವೆಲ್ಲರೂ ನಿಮ್ಮ ಪರವಾಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ವಿರೋಧ ಪಕ್ಷ ಹೇಳಿದ್ದೇನು?

ವಿನೇಶ್ ಅನರ್ಹತೆಗೆ ಸಂಬಂಧಿಸಿದಂತೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ವಿನೇಶ್ ಫೋಗಟ್ ಫೈನಲ್‌ನಲ್ಲಿ ಆಡಲು ಸಾಧ್ಯವಾಗದಿರಲು ತಾಂತ್ರಿಕ ಕಾರಣಗಳ ಬಗ್ಗೆ ಚರ್ಚಿಸಲಾಗಿದೆ ಮತ್ತು ಇದರ ಹಿಂದಿನ ಸತ್ಯ ಯಾವುದು ಮತ್ತು ನಿಜವಾದ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ .

ಇದೇ ವೇಳೆ ಎಎಪಿ ಸಂಸದ ಸಂಜಯ್ ಸಿಂಗ್, ಇದು ವಿನೇಶ್‌ಗೆ ಮಾಡಿದ ಅವಮಾನವಲ್ಲ ದೇಶಕ್ಕೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಇಡೀ ವಿಶ್ವದಲ್ಲೇ ಇತಿಹಾಸ ಸೃಷ್ಟಿಸಲು ಹೊರಟಿದ್ದ ವಿನೇಶ್​ಗೆ, 100 ಗ್ರಾಂ ಅಧಿಕ ತೂಕ ತೋರಿಸಿ ಆಕೆಯನ್ನು ಅನರ್ಹಗೊಳಿಸಿದ್ದು ಘೋರ ಅನ್ಯಾಯ. ವಿನೇಶ್ ಜೊತೆ ಇಡೀ ದೇಶ ನಿಂತಿದೆ. ಭಾರತ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಮತ್ತು ವಿಷಯವನ್ನು ಒಪ್ಪಿಕೊಳ್ಳದಿದ್ದರೆ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಬೇಕು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:56 pm, Wed, 7 August 24