Vinesh Phogat: ವಿನೇಶ್ ಫೋಗಟ್ ಮೇಲ್ಮನವಿ; ಮತ್ತೆ ಗಡುವು ವಿಸ್ತರಣೆ, ಈ ದಿನದಂದು ತೀರ್ಪು ಪ್ರಕಟ
Vinesh Phogat: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಿದ್ದರ ವಿರುದ್ಧವಾಗಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಆ ಮೇಲ್ಮನವಿಯ ತೀರ್ಪು ಇಂದು ಅಂದರೆ ಆಗಸ್ಟ್ 13 ರಂದು ಹೊರಬೀಳಬೇಕಿತ್ತು. ಆದರೆ ಇದೀಗ ಈ ಪ್ರಕರಣದ ನಿರ್ಧಾರವನ್ನು ಮತ್ತೊಮ್ಮೆ ಮುಂದೂಡಲಾಗಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಖಚಿತಪಡಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಿದ್ದರ ವಿರುದ್ಧವಾಗಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಆ ಮೇಲ್ಮನವಿಯ ತೀರ್ಪು ಇಂದು ಅಂದರೆ ಆಗಸ್ಟ್ 13 ರಂದು ಹೊರಬೀಳಬೇಕಿತ್ತು. ಆದರೆ ಇದೀಗ ಈ ಪ್ರಕರಣದ ನಿರ್ಧಾರವನ್ನು ಮತ್ತೊಮ್ಮೆ ಮುಂದೂಡಲಾಗಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಖಚಿತಪಡಿಸಿದೆ. ಐಒಎ ನೀಡಿರುವ ಮಾಹಿತಿ ಪ್ರಕಾರ, ಕ್ರೀಡಾ ನ್ಯಾಯಾಲಯವು ಇಂದಿನ ಬದಲು ಆಗಸ್ಟ್ 16 ರಂದು ರಾತ್ರಿ 9:30 ಕ್ಕೆ ತೀರ್ಪು ನೀಡಲಿದೆ ಎಂದು ತಿಳಿದುಬಂದಿದೆ.
ಆಗಸ್ಟ್ 16 ರಂದು ತೀರ್ಪು
ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ಕ್ರೀಡಾ ನ್ಯಾಯಾಲಯ ನಿರ್ಧರಿಸಬೇಕಿದೆ. ಈ ಕುರಿತು ಈಗಾಗಲೇ ವಿಚಾರಣೆ ಪೂರ್ಣಗೊಂಡಿದೆ. ಈ ಹಿಂದೆ ಆಗಸ್ಟ್ 10 ರಂದು ನಿರ್ಧಾರ ಹೊರಬೀಳಬೇಕಿತ್ತು. ಆದರೆ ಅದನ್ನು ಆಗಸ್ಟ್ 13ಕ್ಕೆ ಮುಂದೂಡಲಾಗಿತ್ತು. ಈಗ ಮತ್ತೆ ಗಡುವನ್ನು ವಿಸ್ತರಣೆ ಮಾಡಲಾಗಿದ್ದು, ಆಗಸ್ಟ್ 16 ರಂದು ರಾತ್ರಿ 9:30 ಕ್ಕೆ ತೀರ್ಪು ಹೊರಬೀಳಬಹುದು ಎನ್ನಲಾಗಿದೆ.
ನಿವೃತ್ತಿ ಘೋಷಿಸಿದ್ದ ವಿನೇಶ್
ವಾಸ್ತವವಾಗಿ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಫೈನಲ್‌ಗೂ ಮುನ್ನ ನಡೆಸಿದ ತೂಕ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ತೂಕದ ಮಿತಿಗಿಂತ ಸ್ವಲ್ಪ ಹೆಚ್ಚು ತೂಕ ಹೊಂದಿದ್ದರಿಂದ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದರು. ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದ ವಿನೇಶ್, ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು.
ಆ ಬಳಿಕ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನೇಶ್, ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ ವಿನೇಶ್ ಫೋಗಟ್ ಕೂಡ ಕೋರ್ಟ್ಗೆ ಹಾಜರಾಗಿದ್ದು, ನ್ಯಾಯಾಲಯದ ಮುಂದೆ ತನಗೆ ಜಂಟಿ ಬೆಳ್ಳಿ ಪದಕ ನೀಡುವಂತೆ ಮನವಿ ಮಾಡಿದ್ದರು.
ಮನವಿಯಲ್ಲಿರುವುದೇನು?
ವಿನೇಶ್ ಫೋಗಟ್ ಅವರು ಸೆಮಿಫೈನಲ್‌ನಲ್ಲಿ ಜಯಗಳಿಸುವವರೆಗೆ ಅವರ ತೂಕವು ನಿಗದಿತ ಮಿತಿಯಲ್ಲಿತ್ತು. ಆದ್ದರಿಂದ ವಿನೇಶ್ ಅವರಿಗೆ ಕನಿಷ್ಠ ಬೆಳ್ಳಿ ಪದಕವನ್ನು ನೀಡಬೇಕು ಎಂದು ಪ್ರಸಿದ್ಧ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಸಿಎಎಸ್‌ನಲ್ಲಿ ವಿನೇಶ್ ಪರ ವಾದಿಸಿದ್ದಾರೆ. ಅಲ್ಲದೆ ಈ ಪ್ರಕರಣದ ನಿರ್ಧಾರ ವಿನೇಶ್ ಪರವಾಗಿ ಬರಲಿದೆ ಎಂಬ ಭರವಸೆಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆ ವ್ಯಕ್ತಪಡಿಸಿದೆ. ಒಂದು ವೇಳೆ ವಿನೇಶ್ ಪರವಾಗಿ ತೀರ್ಪು ಬಂದರೆ ಅವರಿಗೆ ಬೆಳ್ಳಿ ಪದಕ ಸಿಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:11 pm, Tue, 13 August 24