ಭಾರತದ ಮಾಜಿ ಆಲ್ರೌಂಡರ್ ರೋಜರ್ ಬಿನ್ನಿ ಸ್ವಲ್ಪ ಹಳಬರಿಗೆ ಬಹಳ ಚೆನ್ನಾಗಿ ನೆನಪಿರುತ್ತಾರೆ. 1983 ರಲ್ಲಿ ಕಪಿಲ್ ದೇವ್ ಅವರ ಡೇರ್ ಡೆವಿಲ್ಸ್ ವಿಶ್ವಕಪ್ (ಪ್ರುಡೆನ್ಶಿಯಲ್ ಕಪ್) ಗೆದ್ದಾಗ ಆ ಡೆವಿಲ್ಗಳಲ್ಲಿ ಬಿನ್ನಿ ಒಬ್ಬರಾಗಿದ್ದರಲ್ಲದೆ, ಭಾರತ ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್ಗಳ ಪಟ್ಟ ಧರಿಸಲು ಬಹಳ ಮಹತ್ತರವಾದ ಕಾಣಿಕೆ ನೀಡಿದ್ದರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ (18) ಪಡೆದ ಶ್ರೇಯಸ್ಸು ಅವರದ್ದು; ಕೇವಲ ಭಾರತದ ಪರ ಮಾತ್ರ ಅಲ್ಲ, ಟೂನಿಯಲ್ಲಿ ಭಾಗವಹಿಸಿದ ಎಲ್ಲ ದೇಶಗಳ ಬೌಲರ್ಗಳ ಪೈಕಿ ಈ ಕನ್ನಡಿಗನೇ ಗರಿಷ್ಠ ವಿಕೆಟ್ ಪಡೆದಿದ್ದು. 1979 ರಿಂದ 1987ರವರಗೆ ಭಾರತಕ್ಕಾಗಿ ಅಡಿದ ಬಿನ್ನಿ 2000 ರಲ್ಲಿ ಭಾರತದ ಅಂಡರ್-19 ಟೀಮ್ ವಿಶ್ವಕಪ್ ಗೆದ್ದಾಗ ಅದರ ಕೋಚ್ ಆಗಿದ್ದರು. ನಂತರದ ವರ್ಷಗಳಲ್ಲಿ (2012) ಅವರು ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಾಗಿ ಸಹ ಕಾರ್ಯ ನಿರ್ವಹಿಸಿದರು. ಭಾರತವನ್ನು ಪ್ರತಿನಿಧಿಸಿದ ಮೊದಲ ಆಂಗ್ಲೋ-ಇಂಡಿಯನ್ ಕ್ರಿಕೆಟರ್ ಎಂಬ ಖ್ಯಾತಿಯೂ ಬಿನ್ನಿ ಅವರದ್ದು.
ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ಗೆ ಸುಲಭವಾಗಿ ಶರಣಾಗಿದ್ದು ಎಲ್ಲ ಭಾರತೀಯರಂತೆ ಬಿನ್ನಿ ಅವರಿಗೂ ಕೋಪ ತರಿಸಿದೆ. ಭಾರತದ ಬೌಲರ್ಗಳು ಕಳಪೆಮಟ್ಟದ ಬೌಲಿಂಗ್ ಪ್ರದರ್ಶನ ನೀಡಿದರು ಎಂದು ಇಂಗ್ಲಿಷ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಿನ್ನಿ ಹೇಳಿದ್ದಾರೆ. ಇಂಗ್ಗಿಷ್ ಕಂಡೀಶನ್ಗಳಲ್ಲಿ ಹೇಗೆ ಬೌಲ್ ಮಾಡಬೇಕೆನ್ನುವುದನ್ನು ಅವರಿಗಿಂತ ಅಧಿಕಾರಯುತವಾಗಿ ಯಾರು ಮಾತಾಡಬಲ್ಲರು?
ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 217 ರನ್ಗಳಿಗೆ ಅಲೌಟ್ ಅದ ನಂತರ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳನ್ನು ಕಡಿಮೆ ಮೊತ್ತಕ್ಕೆ ಔಟ್ ಮಾಡುವ ಗುರುತರ ಜವಾಬ್ದಾರಿ ಬೌಲರ್ಗಳ ಮೇಲಿತ್ತು ಅದರೆ ಅವರು ಕಳಾಹೀನ ಪ್ರದರ್ಶನ ದಾಳಿ ನಡೆಸಿ ತೀವ್ರ ನಿರಾಶೆಗೊಳಿಸಿದರು ಎಂದು ಬಿನ್ನಿ ಹೇಳಿದ್ದಾರೆ. ಭಾರತದ ವೇಗದ ಬೌಲರ್ಗಳು ಆಫ್ಸ್ಟಂಪ್ ಹೊರಗಡೆ ಶಾರ್ಟ್ ಎಸೆತಗಳನ್ನು ಬೌಲ್ ಮಾಡಿದ್ದು, ನ್ಯೂಜಿಲೆಂಡ್ ಆರಂಭ ಆಟಗಾರರಿಗೆ ಅವುಗಳನ್ನು ಆಡದೆ ಬಿಡಲು ಮತ್ತು ಇನ್ನಿಂಗ್ಸ್ ಕಟ್ಟಲು ನೆರವಾಯಿತು ಎಂದು ಅವರು ಹೇಳಿದ್ದಾರೆ.
ನ್ಯೂಜಿಲೆಂಡ್ ಓಪನರ್ಗಳು-ಟಾಮ್ ಲಾಥಮ್ ಮತ್ತು ಡೆವೊನ್ ಕಾನ್ವೇ ಮೊದಲ ವಿಕೆಟ್ಗೆ 70 ರನ್ ಕಲೆ ಹಾಕಲು ಭಾರತೀಯ ವೇಗದ ಬೌಲರ್ಗಳ ನೀರಸ, ಮೊನಚುರಹಿತ ಮತ್ತು ನಿಯಂತ್ರಣರಹಿತ ಬೌಲಿಂಗ್ ಕಾರಣವಾಯಿತು ಎಂದು ಬಿನ್ನಿ ಹೇಳಿದ್ದಾರೆ.
‘ರವಿವಾರದಂದು (ಟೆಸ್ಟ್ ಪಂದ್ಯದ ಮೂರನೇ ದಿನ) ಭಾರತದ ಬೌಲರ್ಗಳು ಬೌಲ್ ಮಾಡುತ್ತಿದ್ದುದನ್ನು ನೋಡುವುದು ನಾಚಿಕೆಗೇಡಿನ ಸಂಗತಿಯಾಗಿತ್ತು. ಇಂಗ್ಲೆಂಡ್ ಪಿಚ್ಗಳ ಮೇಲೆ ಬೌಲ್ ಮಾಡುವ ರೀತಿ ಅದಲ್ಲ. ಅಂಥ ದಾಳಿ ಎದುರಾಳಿಗಳಿಗೆ ತೊಂದರೆ ನೀಡಬಲ್ಲದೆ? ಇದೆಂಥ ಬೌಲಿಂಗ್ ಪ್ರದರ್ಶನ? ಅವರು ಟೆಸ್ಟ್ ಮ್ಯಾಚ್ ಆಡೋದಿಕ್ಕೆ ಬಂದಿದ್ದರು, ತಮಾಷೆಗಲ್ಲ,’ ಎಂದು ಬಿನ್ನಿ ಹೇಳಿದ್ದಾರೆ.
ವೇಗದ ಬೌಲರ್ಗಳು ಅದರಲ್ಲೂ ವಿಶೇಷವಾಗಿ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮ ಪಂದ್ಯದ ನಾಲ್ಕನೇ ದಿನ ಉತ್ತಮವಾಗಿ ದಾಳಿ ನಡೆಸಿ ನ್ಯೂಜಲೆಂಡ್ ಸ್ಕೋರ್ 160/6 ಗೆ ಕುಸಿಯುವಂತೆ ಮಾಡಿದರಾದರೂ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಬೇಗ ಔಟ್ ಮಾಡಲು ವಿಫಲರಾದ ಕಾರಣ ಅವರಿಗೆ 32 ರನ್ಗಳ ಮುನ್ನಡೆ ಸಿಕ್ಕಿತು.
ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ವೇಗದ ಬೌಲರ್ಗಳು ದಾಳಿ ನಡೆಸುವಾಗ ರಕ್ಷಣಾತ್ಮಕ ನೀತಿ ಅನುಸರಿಸಿದ್ದು ರೋಜರ್ ಬಿನ್ನಿಯನ್ನು ಕೆರಳಿಸಿದೆ. ಪಿಚ್ ಅರ್ಧಭಾಗ ಬ್ಯಾಟ್ಸ್ಮನ್ಗೆ ಸೇರಿದ್ದರೆ, ಬೌಲರ್ ಬೌಲ್ ಮಾಡುವ ತುದಿಯ ಅರ್ಧ ಭಾಗ ಬೌಲರ್ಗೆ ಸೇರಿದ್ದಾಗಿರುತ್ತದೆ ಎಂದು ಬಿನ್ನಿ ಹೇಳುತ್ತಾರೆ. ಇಂಗ್ಲೆಂಡ್ನಲ್ಲಿ ಆಡುವಾಗ ಬೌಲರ್ಗಳು ತಮ್ಮ ಅರ್ಧಭಾಗದಲ್ಲಿ ಬೌಲ್ ಮಾಡದೆ ಬ್ಯಾಟ್ಸ್ಮನ್ನ ಅರ್ಧಭಾಗದಲ್ಲಿ ಬೌಲ್ ಮಾಡಬೇಕು ಎಂದು ಬಿನ್ನಿ ಹೇಳುತ್ತಾರೆ.
ಬೌಲರ್ ಯಾವಾಗಲೂ ಬ್ಯಾಟ್ಸ್ಮನ್ನ ಹಾಫ್ನಲ್ಲಿ ಬೌಲ್ ಮಾಡಬೇಕು, ತನ್ನ ಹಾಫ್ನಲ್ಲಿ ಅಲ್ಲವೇ ಅಲ್ಲ. ಬ್ಯಾಟ್ಸ್ಮನ್ ಹೊಡೆತ ಬಾರಿಸುವಂತೆ ಪ್ರೇರೇಪಿಸಬೇಕು. ಕಡಿಮೆ ಅಂತರದ ಎಸೆತಗಳನ್ನು ಬೌಲ್ ಮಾಡಿದಾಗ ಬಾಲು ಹೆಚ್ಚು ಸ್ವಿಂಗ್ ಆಗುತ್ತದೆ. ವಿಕೆಟ್ ಪಡೆಯಬೇಕಾದರೆ ನಿಮ್ಮ ದಾಳಿ ಆಕ್ರಮಣಕಾರಿಯಾಗಿರಬೇಕು. ರಕ್ಷಣಾತ್ಮವಾಗಿ ದಾಳಿ ನಡೆಸಿದರೆ ನಿಮಗೆ ವಿಕೆಟ್ಗಳು ದಕ್ಕುವುದಿಲ್ಲ,’ ಎಂದು ಬಿನ್ನಿ ಹೇಳಿದ್ದಾರೆ.
ಕರ್ನಾಟಕದ ಆರಂಭ ಆಟಗಾರರಾಗಿದ್ದ ಬಿನ್ನಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಗುತ್ತಿತ್ತು. ಬಾರತದ ಪರ ಆಡಿದ 27ಟೆಸ್ಟ್ಗಳಲ್ಲಿ ಅವರು 5 ಅರ್ಧ ಶತಕಗಳೊಂದಿಗೆ 839 ರನ್ ಗಳಿಸಿದರು. ಅಜೇಯ 83 ಅವರ ಗರಿಷ್ಠ ಸ್ಕೋರ್ ಆಗಿತ್ತು. ಟೆಸ್ಟ್ಗಳಲ್ಲಿ ಅವರು ಪಡೆದ ವಿಕೆಟ್ಗಳ ಸಂಖ್ಯೆ 47 ಮತ್ತು 6/56 ಅವರ ಬೆಸ್ಟ್ ಬೌಲಿಂಗ್ ಪರ್ಫಾಮನ್ಸ್ . 67 ಒಡಿಐ ಪಂದ್ಯಗಳಲ್ಲಿ 77 ವಿಕೆಟ್ (4/29 ಅತ್ಯುತ್ತಮ ಪ್ರದರ್ಶನ) ಪಡೆದ ಅವರು 629 ರನ್ ಗಳಿಸಿದರು, ಅಜೇಯ 57 ಅವರ ಗರಿಷ್ಠ ಸ್ಕೋರ್ ಆಗಿತ್ತು.
ಇದನ್ನೂ ಓದಿ: WTC Final: ಜಡೇಜಾ ಆಲ್ರೌಂಡರ್ ಕೋಟಾದಲ್ಲಿ ಆಯ್ಕೆಯಾಗಿರಲಿಲ್ಲ! ಟೀಂ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಸಂಜಯ್ ಮಂಜ್ರೇಕರ್