ಫುಟ್ಬಾಲ್ ವಿಶ್ವಕಪ್‌ಗೆ (FIFA World Cup 2022) ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 20 ರಿಂದ ಕತಾರ್‌ನಲ್ಲಿ (Qatar) ಪ್ರಾರಂಭವಾಗುವ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಲು ಬಹುತೇಕ ಎಲ್ಲಾ ತಂಡಗಳು ಕತಾರ್ ತಲುಪಿವೆ. ಇದೇ ವೇಳೆ ಪೋಲೆಂಡ್ ತಂಡ ವಿಶೇಷ ಭದ್ರತೆಯೊಂದಿಗೆ ಕತಾರ್ ತಲುಪಿದೆ. ಎಫ್16 ಯುದ್ಧ ವಿಮಾನದ ರಕ್ಷಣೆಯಲ್ಲಿ ಪೋಲೆಂಡ್ ತಂಡವನ್ನು ವಿಶ್ವಕಪ್‌ಗಾಗಿ ಕತಾರ್‌ಗೆ ಕರೆದೊಯ್ಯಲಾಯಿತು. ವಾಸ್ತವವಾಗಿ, ಕೆಲವು ದಿನಗಳ ಹಿಂದೆ ಪೋಲೆಂಡ್ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಬಿಗಿ ಭದ್ರತೆಯಲ್ಲಿ ಕತಾರ್‌ಗೆ ಕಳುಹಿಸಿಕೊಡಲಾಗಿದೆ. ಪೋಲೆಂಡ್ ತಂಡವು ಈ ಭದ್ರತೆಯ ವೀಡಿಯೊವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ಎರಡು ಯುದ್ಧ ವಿಮಾನಗಳು ವಿಮಾನದ ಹಿಂದೆ ಹಾರುತ್ತಿರುವುದನ್ನು ಕಾಣಬಹುದಾಗಿದೆ.
ನವೆಂಬರ್ 22 ರಂದು ಮೊದಲ ಪಂದ್ಯ
ಪೋಲೆಂಡ್ ಮಾಧ್ಯಮ ವರದಿಗಳ ಪ್ರಕಾರ, ಪೋಲೆಂಡ್‌ನ ವಾಯುಪ್ರದೇಶದಿಂದ ಹೊರಡುವವರೆಗೂ ಯುದ್ಧ ವಿಮಾನಗಳು ಫುಟ್ಬಾಲ್ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನದ ಹಿಂದೆಯೇ ಸಾಗಿದ್ದವು ಎಂದು ವರದಿಯಾಗಿದೆ. ನವೆಂಬರ್ 22 ರಂದು ಪೋಲೆಂಡ್ ತಂಡ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ.
Do południowej granicy Polski eskortowały nas samoloty F16! ✈️ Dziękujemy i pozdrawiamy panów pilotów! ?? pic.twitter.com/7WLuM1QrhZ
— Łączy nas piłka (@LaczyNasPilka) November 17, 2022
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮ
ವಾಸ್ತವವಾಗಿ, ಕೆಲವು ದಿನಗಳ ಹಿಂದೆ ಪೋಲೆಂಡ್‌ನ ಹಳ್ಳಿಯ ಮೇಲೆ ಕ್ಷಿಪಣಿ ದಾಳಿ ನಡೆದಿತ್ತು. ಈ ಕ್ಷಿಪಣಿ ದಾಳಿಯಲ್ಲಿ ಹಳ್ಳಿಯ ಇಬ್ಬರು ಸಾವನ್ನಪ್ಪಿದ್ದರು. ಪೋಲೆಂಡ್ ನ್ಯಾಟೋ ಸದಸ್ಯ ರಾಷ್ಟ್ರವಾಗಿರುವುದರಿಂದ ರಷ್ಯಾ, ಪೋಲೆಂಡ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪ ಹೊರಿಸಿತ್ತು. ಆದರೆ ದಾಳಿ ಬಳಿಕ ಹೊರಬಂದ ಪ್ರಾಥಮಿಕ ತನಿಖಾ ವರದಿ ಪ್ರಕಾರ, ಅಮೆರಿಕ ಕೂಡ ಇತರ ನ್ಯಾಟೊ ಸದಸ್ಯ ದೇಶಗಳಂತೆ ಇದು ಉಕ್ರೇನ್ ಹಾರಿಬಿಟ್ಟ ರಾಕೆಟ್ನಿಂದ ಸಂಭವಿಸಿದ ಸ್ಫೋಟ ಎಂದು ಒಪ್ಪಿಕೊಂಡಿದೆ. ಪ್ರಾಥಮಿಕ ತನಿಖೆಗಳ ನಂತರ ಈ ಮಾಹಿತಿಯನ್ನು ಮೊದಲು ಪೊಲೆಂಡ್ ಬಹಿರಂಗಪಡಿಸಿತ್ತು. ಉಕ್ರೇನ್ ಗಡಿಯ ಪೊಲೆಂಡ್ನ ಹಳ್ಳಿಯಲ್ಲಿ ಕ್ಷಿಪಣಿ ದಾಳಿಯಿಂದಾಗಿ ಮಂಗಳವಾರ (ನ 15) ಇಬ್ಬರು ಮೃತಪಟ್ಟಿದ್ದರು. ಈ ವೇಳೆ ರಷ್ಯಾ ಉಕ್ರೇನ್ನಲ್ಲಿರುವ ಮೂಲಸೌಕರ್ಯ ವ್ಯವಸ್ಥೆಯ ಮೇಲೆ ವ್ಯಾಪಕ ದಾಳಿ ನಡೆಸಿತ್ತು.
ಕ್ಷಿಪಣಿ ದಾಳಿ ರಷ್ಯಾದಿಂದ ನಡೆದಿಲ್ಲ
ಉಕ್ರೇನ್ ಗಡಿಯಾಚೆ ಸಂಭವಿಸಿದ ಸ್ಫೋಟವು ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟುಹಾಕಿತ್ತು. ಆದರೆ ಕೆಲ ಹೊತ್ತಿನ ನಂತರ ಈ ಸ್ಫೋಟಕ್ಕೆ ರಷ್ಯಾದಿಂದ ಹಾರಿಬಂದ ಕ್ಷಿಪಣಿ ಕಾರಣವಲ್ಲ ಎಂಬುದು ದೃಢಪಟ್ಟ ನಂತರ ಹಲವು ದೇಶಗಳು ನಿಟ್ಟುಸಿರು ಬಿಟ್ಟಿದ್ದವು. ರಷ್ಯಾದಿಂದ ಬರುತ್ತಿದ್ದ ಕ್ಷಿಪಣಿಯನ್ನು ತಡೆಗಟ್ಟಲು ಉಕ್ರೇನ್ ಹಾರಿಬಿಟ್ಟ ಬರಾಜ್ (ಕ್ಷಿಪಣಿಗಳನ್ನು ಆಗಸದಲ್ಲಿಯೇ ತಡೆಯುವ ಯುದ್ಧೋಪಕರಣ) ಪೊಲೆಂಡ್ ಗಡಿಯೊಳಗೆ ಬಂದಿರಬಹುದು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿತ್ತು.
ಸಿ ಗುಂಪಿನಲ್ಲಿ ಪೋಲೆಂಡ್
ಪೋಲೆಂಡ್ ತಂಡದ ಬಗ್ಗೆ ಹೇಳುವುದಾದರೆ, ಈ ತಂಡ ವಿಶ್ವಕಪ್‌ನಲ್ಲಿ ಮೆಕ್ಸಿಕೊ, ಅರ್ಜೆಂಟೀನಾ, ಸೌದಿ ಅರೇಬಿಯಾ ಜೊತೆಗೆ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಪೋಲೆಂಡ್ ಮೆಕ್ಸಿಕೋ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ. ಆ ಬಳಿಕ 4 ದಿನಗಳ ನಂತರ ಸೌದಿ ಅರೇಬಿಯಾ ಎದುರು ಸೆಣಸಾಡಲಿದೆ. ಹಾಗೆಯೇ ನವೆಂಬರ್ 30 ರಂದು ಪೋಲೆಂಡ್ ತನ್ನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ.