ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಡೆಯುತ್ತಿರುವ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಬುಧವಾರದಂದು ಅದೇ ಮೊಟೆರಾ ಮೈದಾನದಲ್ಲಿ ನಡೆಯಲಿದೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ರಜೆ ಪಡೆದು ಸರಣಿಯಿಂದ ಹೊರಬಿದ್ದಿದ್ದು, ಸೀಮಿತ ಓವರ್ಗಳ ಸರಣಿಗೂ ಅವರು ವಾಪಸ್ಸಾಗುವ ಸಾಧ್ಯತೆ ಇಲ್ಲ. ಅ ವೈಯಕ್ತಿಕ ಕಾರಣ ಏನು ಅನ್ನುವುದು ಬೆಳಕಿಗೆ ಬಂದಿದೆ. ವಿಷಯ ಏನು ಗೊತ್ತಾ? ಯುವತಿಯೊಬ್ಬಳಿಗೆ ಕ್ಲೀನ್ ಬೌಲ್ಡ್ ಅಗಿರುವ ಯಾರ್ಕರ್ ಪರಿಣಿತ ಇಷ್ಟರಲ್ಲೇ ಚತುರ್ಭುಜರಾಗಲಿದ್ದಾರೆ! ಹೌದು, ನೀವು ಓದಿದ್ದು ನಿಜ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೂಲವೊಂದರ ಪ್ರಕಾರ ಮದುವೆ ತಯಾರಿಗೋಸ್ಕರವೇ ಬುಮ್ರಾ ರಜೆಗೆ ಅರ್ಜಿ ಗುಜರಾಯಿಸಿ ಸರಣಿಯಿಂದ ಹೊರಬಂದಿದ್ದಾರೆ.
ಸುದ್ದಿ ಸಂಸ್ಥೆಯೊಂದರ ಜೊತೆ ಮಾತಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಬುಮ್ರಾ ಇಷ್ಟರಲ್ಲೇ ಮದುವೆಯಾಗುತ್ತಿರುವುದನ್ನು ಖಚಿತಪಡಿಸಿದ್ದು ವಿವಾಹ ಮಹೋತ್ಸವ ತಯಾರಿ ಸಲುವಾಗಿಯೇ ರಜೆ ಪಡೆದಿದ್ದಾರೆಂದು ಹೇಳಿದ್ದಾರೆ.
‘ತಾವು ಮದುವೆಯಾಗುತ್ತಿರುವ ವಿಷಯವನ್ನು ಬುಮ್ರಾ ಬಿಸಿಸಿಐಗೆ ತಿಳಿಸಿದ್ದಾರೆ. ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಕುಟಂಬದವರಿಗೆ ನೆರವಾಗಲೆಂದು ಅವರು ರಜೆ ಪಡೆದಿದ್ದಾರೆ.’ ಅಂತ ಹೆಸರು ಹೇಳಿಕೊಳ್ಳಲಿಚ್ಛಿಸದ ಮಂಡಳಿಯ ಅಧಿಕಾರಿ ಹೇಳಿದ್ದಾರೆ.
27-ವರ್ಷದ ಬುಮ್ರಾ ಈಗ ಇಂಗ್ಲೆಂಡ್ ವಿರುದ್ಧ ಜಾರಿಯಲ್ಲಿರುವ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡು 4 ವಿಕೆಟ್ ಪಡೆದಿದ್ದಾರೆ. ಚೆನೈಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅಹಮದಾಬಾದಿನಲ್ಲಿ ನಡೆದ ಮೂರನೇ ಟೆಸ್ಟ್ಗೆ ವಾಪಸ್ಸಾದ ಅವರು, ಭಾರತದ ಸ್ಪಿನ್ನರ್ಗಳು ಪಾರಮ್ಯ ಮೆರೆದ ಆ ಪಂದ್ಯದಲ್ಲಿ ಅವರು ಒಂದೂ ವಿಕೆಟ್ ಪಡೆಯದೆ ಹೋದರು.
ನಿರಂತರವಾಗಿ ಕ್ರಿಕೆಟ್ ಆಡುತ್ತಿರುವುದರಿಂದ ವರ್ಕ್ಲೋಡನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗುವ ದೃಷ್ಟಿಯಿಂದ ಅವರನ್ನು ಇಂಗ್ಲೆಂಡ್ ವಿರುದ್ಧ ನಡೆಯಲಿರುವ 5-ಪಂದ್ಯಗಳ ಟಿ20 ಸರಣಿಯಿಂದ ಕೈಬಿಡಲಾಗಿದೆ ಎಂದು ಮಂಡಳಿ ತಿಳಿಸಿತ್ತು.
ಭಾರತ 4-ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ರಿಂದ ಮುಂದಿದೆ. ಅತಿಥೇಯರು ಕೊನೆಯ ಪಂದ್ಯವನ್ನು ಗೆದ್ದರೆ ಇಲ್ಲವೇ ಡ್ರಾ ಮಾಡಿಕೊಂಡರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡುವ ಅರ್ಹತೆ ಗಿಟ್ಟಿಸಲಿದ್ದಾರೆ. ಒಂದು ಪಕ್ಷ ಭಾರತ ಸೋತರೆ, ಆಸ್ಟ್ರೇಲಿಯಾ ಕ್ವಾಲಿಫೈ ಆಗಲಿದೆ. ನ್ಯೂಜಿಲೆಂಡ್ ಈಗಾಗಲೇ ಫೈನಲ್ ತಲುಪಿದ್ದು, ಆ ಪಂದ್ಯವು ಫೆಬ್ರುವರಿಯಲ್ಲಿ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: India vs England: ಅಂತಿಮ ಟೆಸ್ಟ್ನಿಂದ ಹೊರಗುಳಿದ ಬುಮ್ರಾ.. ಟಿ20, ಏಕದಿನ ಸರಣಿಯಲ್ಲೂ ಕಣಕ್ಕಿಳಿಯುವುದು ಡೌಟ್
Published On - 10:59 pm, Tue, 2 March 21