India vs England: T20 ಸರಣಿಗಾಗಿ ಕಾರಿನಲ್ಲಿ ಅಹಮದಾಬಾದ್​ಗೆ 11 ಗಂಟೆಗಳ ಪ್ರಯಾಣ ಮಾಡಿದ ಶಿಖರ್​ ಧವನ್​, ಶ್ರೇಯಸ್ ಅಯ್ಯರ್​!

India vs England: ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಕಾರಿನಲ್ಲಿ 11 ಗಂಟೆಗಳ ಪ್ರಯಾಣವನ್ನು ಮುಗಿಸಿ ಅಹಮದಾಬಾದ್​ಗೆ ತಲುಪಿದ್ದಾರೆ.

India vs England: T20 ಸರಣಿಗಾಗಿ ಕಾರಿನಲ್ಲಿ ಅಹಮದಾಬಾದ್​ಗೆ 11 ಗಂಟೆಗಳ ಪ್ರಯಾಣ ಮಾಡಿದ ಶಿಖರ್​ ಧವನ್​, ಶ್ರೇಯಸ್ ಅಯ್ಯರ್​!
ಶ್ರೇಯಸ್ ಅಯ್ಯರ್, ಶಿಖರ್​ ಧವನ್​
Follow us
ಪೃಥ್ವಿಶಂಕರ
|

Updated on:Mar 03, 2021 | 10:51 AM

ಅಹಮದಾಬಾದ್​: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮಾರ್ಚ್​ 8 ರಂದು ಮುಕ್ತಾಯವಾಗಲಿದ್ದು, ಮಾರ್ಚ್ 12 ರಿಂದ ಐದು ಪಂದ್ಯಗಳ ಟಿ 20 ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ, ಟೀಂ ಇಂಡಿಯಾದ ಆಟಗಾರರು ಈ ಸರಣಿಯ ಸೀಮಿತ ಓವರ್‌ಗಳ ಸ್ವರೂಪಕ್ಕಾಗಿ ಅಹಮದಾಬಾದ್​ಗೆ ಬಂದಿಳಿಯಲು ಆರಂಭಿಸಿದ್ದಾರೆ. ಇದರ ಫಲವಾಗಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಕಾರಿನಲ್ಲಿ 11 ಗಂಟೆಗಳ ಪ್ರಯಾಣವನ್ನು ಮುಗಿಸಿ ಅಹಮದಾಬಾದ್​ಗೆ ತಲುಪಿದ್ದಾರೆ. ಧವನ್ ದೆಹಲಿ ಮತ್ತು ಶ್ರೇಯಸ್ ಮುಂಬೈ ಪ್ರತಿನಿಧಿಸುತ್ತಿದ್ದ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದರು. ಹೀಗಾಗಿ ಟಿ20 ಸರಣಿಗಾಗಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಜೈಪುರದಿಂದ ಅಹಮದಾಬಾದ್​ಗೆ ಕಾರಿನ ಮೂಲಕ ಪ್ರಯಾಣ ಬೆಳೆಸಿದ್ದಾರೆ.

ಜೈಪುರದಿಂದ ಅಹಮದಾಬಾದ್‌ಗೆ ಸುಮಾರು 678 ಕಿ.ಮೀ ಪ್ರಯಾಣವನ್ನು ಕಾರಿನಲ್ಲಿ ಮುಗಿಸಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶ್ರೇಯಸ್ ಅಯ್ಯರ್ ಬರೆದುಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಧವನ್ ಅವರೊಂದಿಗಿನ ತಮ್ಮ ಚಿತ್ರವನ್ನು ಹಂಚಿಕೊಂಡ ಅಯ್ಯರ್, ಅಹಮದಾಬಾದ್​ಗೆ 11 ಗಂಟೆಗಳ ಡ್ರೈವ್, ಈ ನಗು ಎಷ್ಟು ದಿನ ಹೀಗೆ ಉಳಿಯಲಿದೆ ಎಂದು ನೋಡೋಣ ಎಂದು ಬರೆದುಕೊಂಡಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯ ಆರಂಭಿಕ ಕೆಲವು ಪಂದ್ಯಗಳಲ್ಲಿ ವಿಫಲವಾದ ನಂತರ, ಧವನ್ ಇತ್ತೀಚೆಗೆ 118 ಎಸೆತಗಳಲ್ಲಿ 153 ರನ್‌ಗಳ ಬಿಗ್​ ಇನ್ನಿಂಗ್ಸ್ ಆಡುವ ಮೂಲಕ ಮಹಾರಾಷ್ಟ್ರ ವಿರುದ್ಧ 330 ರನ್ ಗಳಿಸಲು ತಂಡಕ್ಕೆ ನೆರವಾಗಿದ್ದರು. ಹಾಗೆಯೇ ಶ್ರೇಯಸ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ್ದಾರೆ. ಮೊದಲು ಮಹಾರಾಷ್ಟ್ರ ವಿರುದ್ಧ ಅಜೇಯ 103 ರನ್ ಗಳಿಸಿದರೆ, ನಂತರ ರಾಜಸ್ಥಾನ್ ವಿರುದ್ಧ 116 ರನ್ ಗಳಿಸಿದರು.

ಟಿ-20 ಸರಣಿಗೆ ಟೀಂ ಇಂಡಿಯಾ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಮಾರ್ಚ್ 12 ರಿಂದ ಆರಂಭವಾಗಲಿದೆ. ಸರಣಿಯ ಎಲ್ಲಾ ಪಂದ್ಯಗಳು ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟಿ20 ಸರಣಿಗೆ ಟೀಂ ಇಂಡಿಯಾದ ಆಟಗಾರರು: ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಇಶಾನ್ ಕಿಶನ್, ಯುಜ್ವೇಂದ್ರ ಚಹಲ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ತಿವಾಟಿಯಾ, ಟಿ.ನಟರಾಜನ್, ಭುವನೇಶ್ವರ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ, ಶಾರ್ದುಲ್ ಠಾಕೂರ್.

ಇದನ್ನೂ ಓದಿ: India vs England: ಗಾಯದಿಂದ ಚೇತರಿಸಿಕೊಂಡ ಟೀಂ ಇಂಡಿಯಾ ಆಲ್‌ರೌಂಡರ್ ಜಡೇಜಾ.. T20 – ಏಕದಿನ ಸರಣಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆ?

Published On - 10:05 am, Wed, 3 March 21