India vs England: ಅಂತಿಮ ಟೆಸ್ಟ್‌ನಲ್ಲಿ ಪಿಚ್ ಯಾರಿಗೆ ಹೆಚ್ಚು ನೆರವಾಗಲಿದೆ? ಹವಾಮಾನ ಮುನ್ಸೂಚನೆ ಏನು? ಇಲ್ಲಿದೆ ಮಾಹಿತಿ
India vs England: 3ನೇ ಟೆಸ್ಟ್ ಪಂದ್ಯದಂತೆ ಈ ಪಂದ್ಯದಲ್ಲೂ ಎಲ್ಲಾ ಐದು ದಿನಗಳಲ್ಲಿ ಅಹಮದಾಬಾದ್‌ನಲ್ಲಿ ಬಿಸಿಲು ಇರಲಿದೆ. ಸರಾಸರಿ ತಾಪಮಾನ 37.5 ಡಿಗ್ರಿ ಸೆಲ್ಸಿಯಸ್ ಇರಲಿದ್ದು. ಯಾವುದೇ ಮಳೆ ಅಡಚಣೆಗಳು ಸಂಭವಿಸುವ ಸಾಧ್ಯತೆಗಳಿಲ್ಲ.
ಅಹಮದಾಬಾದ್: ಮಾರ್ಚ್ 4 ರ ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪೇಟಿಎಂ ಟೆಸ್ಟ್ ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಎರಡು ದಿನಗಳಲ್ಲಿ ಮುಕ್ತಾಯವಾದ ವಿವಾದಾತ್ಮಕ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ಭರ್ಜರಿ ಜಯ ಗಳಿಸಿ, ಅಂತಿಮ ಟೆಸ್ಟ್ಗೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ.
3ನೇ ಟೆಸ್ಟ್‌ನ ಮೊದಲ ದಿನ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರು ಇಂಗ್ಲೆಂಡ್ ತಂಡವನ್ನು 112 ರನ್‌ಗಳಿಗೆ ಆಲ್ಔಟ್ ಮಾಡಿದರು. ನಂತರ ಟೀಂ ಇಂಡಿಯಾ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಅವರ ಅಮೋಘ ಪ್ರದರ್ಶನ ಟೀಂ ಇಂಡಿಯಾ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸುವಂತೆ ಮಾಡಿತು. ಹಾಗಿದ್ದರೂ, ಇಂಗ್ಲೆಂಡ್ನ ಜ್ಯಾಕ್ ಲೀಚ್ ಮತ್ತು ಜೋ ರೂಟ್ ಅವರ ಅದ್ಭುತ ಬೌಲಿಂಗ್ ಟೀಂ ಇಂಡಿಯಾದ ಕುಸಿತಕ್ಕೆ ಕಾರಣವಾಯಿತು. ಪರಿಣಾಮವಾಗಿ ದಿ ಮೆನ್ ಇನ್ ಬ್ಲೂಸ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 33 ರನ್‌ಗಳ ಮುನ್ನಡೆ ಸಾಧಿಸಿತು.
ಆದರೆ 2ನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಪ್ರತಾಪ ತೋರಿ, ಇಂಗ್ಲೆಂಡ್ ತಂಡವನ್ನು ಕೇವಲ 81 ರನ್ ಗಳಿಗೆ ಆಲ್ಔಟ್ ಮಾಡಿತು. ನಂತರ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಉತ್ತಮ ಆಟವಾಡಿ ಎಂಟು ಓವರ್‌ಗಳಲ್ಲಿ 49 ರನ್‌ಗಳ ಗುರಿ ತಲುಪಿ ಭಾರತಕ್ಕೆ ಜಯ ತಂದುಕೊಟ್ಟರು.
ಆ ಫಲಿತಾಂಶದೊಂದಿಗೆ, ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಇದೆ. ಆದರೆ ಇಂಗ್ಲೆಂಡ್ ಫೈನಲ್ನಿಂದ ಹೊರನಡೆಯಿತು. ಹೀಗಾಗಿ ಇಂಗ್ಲೆಂಡ್ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಗೊಳಿಸಲು ನೋಡುತ್ತದೆ.
ಹವಾಮಾನ ವರದಿ.. 3ನೇ ಟೆಸ್ಟ್ ಪಂದ್ಯದಂತೆ ಈ ಪಂದ್ಯದಲ್ಲೂ ಎಲ್ಲಾ ಐದು ದಿನಗಳಲ್ಲಿ ಅಹಮದಾಬಾದ್‌ನಲ್ಲಿ ಬಿಸಿಲು ಇರಲಿದೆ. ಸರಾಸರಿ ತಾಪಮಾನ 37.5 ಡಿಗ್ರಿ ಸೆಲ್ಸಿಯಸ್ ಇರಲಿದ್ದು. ಯಾವುದೇ ಮಳೆ ಅಡಚಣೆಗಳು ಸಂಭವಿಸುವ ಸಾಧ್ಯತೆಗಳಿಲ್ಲ.
ಪಿಚ್ ವರದಿ.. ನಾಲ್ಕನೇ ಟೆಸ್ಟ್‌ನ ವಿಕೆಟ್ , ಸ್ಪಿನ್ನರ್‌ಗಳಿಗೆ ನೆರವಾಗಲಿದೆ ಕಳೆದ ಪಂದ್ಯವಾದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಪಿಚ್, ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಿತ್ತು. ಇದರಿಂದಾಗಿ 2 ತಂಡಗಳಲ್ಲೂ ಸ್ಪಿನ್ನರ್‌ಗಳು ಮಿಂಚಿದರು. ಟೀಂ ಇಂಡಿಯಾ ಪಾಳಯದಲ್ಲಿ ಅಶ್ವಿನ್ ಹಾಗೂ ಅಕ್ಷರ್ ಇಂಗ್ಲೆಂಡ್ ಆಟಗಾರರನ್ನು ಇನ್ನಿಲ್ಲದಂತೆ ಕಾಡಿದ್ದರು. ಹಾಗೆಯೇ ಇಂಗ್ಲೆಂಡ್ ತಂಡದಲ್ಲಿ ಲೀಚ್ ಹಾಗೂ ನಾಯಕ ರೂಟ್ ತಮ್ಮ ಕೈಚಳಕ ತೋರಿದ್ದರು. ಅಂತಿಮ ಟೆಸ್ಟ್‌ನಲ್ಲಿ ಪಿಚ್, ಹೆಚ್ಚು ಟರ್ನ್ ಆಗುವ ಸಾಧ್ಯತೆಯಿಲ್ಲದಿದ್ದರೂ, ನಾಲ್ಕನೇ ಟೆಸ್ಟ್‌ನ ವಿಕೆಟ್ ಮತ್ತೊಮ್ಮೆ ಸ್ಪಿನ್ನರ್‌ಗಳಿಗೆ ನೆರವಾಗಲಿದೆ ಎಂದು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ. ಚೆಂಡು ಮೊದಲನೇ ದಿನದಿಂದ ಬಲಕ್ಕೆ ತಿರುಗಲು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಹೀಗಾಗಿ 2 ತಂಡಗಳಲ್ಲೂ ಹೆಚ್ಚಾಗಿ ಸ್ಪಿನ್ನರ್‌ಗಳನ್ನ ಕಾಣಬಹುದಾಗಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಕೇವಲ ಒಬ್ಬ ಸ್ಪಿನ್ನರ್ ಜೊತೆಗೆ ಕಣಕ್ಕಿಳಿದಿತ್ತು. ಹೀಗಾಗಿ ಪಿಚ್ ಹೆಚ್ಚಾಗಿ ಸ್ಪಿನ್ನರ್‌ಗಳಿಗೆ ನೆರವಾಗುವುದನ್ನ ಗಮನಿಸಿದ ರೂಟ್ ಬೌಲಿಂಗ್ಗೆ ಇಳಿದಿದ್ದರು. ಅದರ ಪ್ರತಿಫಲವನ್ನು ಪಡೆದರು. ಆದರೆ ಜಾಣ್ಮೆಯ ನಡೆ ಪ್ರದರ್ಶಿಸಿದ ಟೀಂ ಇಂಡಿಯಾ ಮೂವರು ಸ್ಪಿನ್ನರ್‌ಗಳನ್ನ ಕಣಕ್ಕಿಳಿಸಿ ಪಂದ್ಯವನ್ನ ಗೆದ್ದುಕೊಂಡಿತ್ತು.
Published On - 3:29 pm, Wed, 3 March 21