Road Safety World Series 2021: ನಿವೃತ್ತಿ ಬಳಿಕವೂ ನಿಂತಿಲ್ಲ ಸಚಿನ್​- ಸೆಹ್ವಾಗ್​ ಘರ್ಜನೆ.. ವೀರೂ ಅಬ್ಬರಕ್ಕೆ ಬಾಂಗ್ಲಾ ಲೆಜೆಂಡ್ಸ್​ ಉಡೀಸ್

| Updated By: ಸಾಧು ಶ್ರೀನಾಥ್​

Updated on: Mar 06, 2021 | 11:59 AM

Road Safety World Series 2021:ಬಾಂಗ್ಲಾದೇಶ ಲೆಜೆಂಡ್ಸ್ ನೀಡಿದ್ದ 110 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಸೆಹ್ವಾಗ್‌ ಅವರ ಬಿರುಗಾಳಿಯ ಅರ್ಧಶತಕದಿಂದಾಗಿ 10.1 ಓವರ್‌ಗಳಲ್ಲಿ ಗುರಿ ಮುಟ್ಟಿತು.

Road Safety World Series 2021: ನಿವೃತ್ತಿ ಬಳಿಕವೂ ನಿಂತಿಲ್ಲ ಸಚಿನ್​- ಸೆಹ್ವಾಗ್​ ಘರ್ಜನೆ.. ವೀರೂ ಅಬ್ಬರಕ್ಕೆ ಬಾಂಗ್ಲಾ ಲೆಜೆಂಡ್ಸ್​ ಉಡೀಸ್
ವಿರೇಂದ್ರ ಸೆಹ್ವಾಗ್​, ಸಚಿನ್​ ತೆಂಡೂಲ್ಕರ್​
Follow us on

ಛತ್ತೀಸ್​ಗಡ್: ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ನಡುವೆ ನಡೆದ ರಸ್ತೆ ಸುರಕ್ಷತೆ ವಿಶ್ವ ಸರಣಿಯ ಮೊದಲ ಪಂದ್ಯ ಪ್ರೇಕ್ಷಕರಿಗೆ ಹಬ್ಬದೂಟ ನೀಡಿದೆ. ಛತ್ತೀಸ್​ಗಡ್​ನ ರಾಜಧಾನಿ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ಪರ ಆಡುತ್ತಿರುವ ವೀರೇಂದ್ರ ಸೆಹ್ವಾಗ್ ಒಂದು ವರ್ಷದ ಬಳಿಕ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಸುರಿಸಿದ್ದಾರೆ. ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಇಂಡಿಯಾ ಲೆಜೆಂಡ್ಸ್, ಬಾಂಗ್ಲಾದೇಶ ಲೆಜೆಂಡ್ಸ್ ವಿರುದ್ಧ 10 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿದೆ.

ಸೆಹ್ವಾಗ್‌ ಸಿಡಿಲಬ್ಬರದ ಅರ್ಧಶತಕ
ಬಾಂಗ್ಲಾದೇಶ ಲೆಜೆಂಡ್ಸ್ ನೀಡಿದ್ದ 110 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಸೆಹ್ವಾಗ್‌ ಅವರ ಬಿರುಗಾಳಿಯ ಅರ್ಧಶತಕದಿಂದಾಗಿ 10.1 ಓವರ್‌ಗಳಲ್ಲಿ ಗುರಿ ಮುಟ್ಟಿತು. ಸೆಹ್ವಾಗ್ 35 ಎಸೆತಗಳಲ್ಲಿ 10 ಬೌಂಡರಿ ಮತ್ತು ಐದು ಸಿಕ್ಸರ್ ಸಹಾಯದಿಂದ ಅಜೇಯ 80 ರನ್ ಗಳಿಸಿದರು. ಅವರು 228.57 ಸ್ಟ್ರೈಕ್ ರೆಟ್​ನಲ್ಲಿ ಬ್ಯಾಟಿಂಗ್​ ಮಾಡಿದ್ದು, ಅವರ ಅಬ್ಬರಕ್ಕೆ ಕನ್ನಡಿ ಹಿಡಿದಂತಿತ್ತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 26 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ ಔಟಾಗದೆ 33 ರನ್ ಗಳಿಸಿದರು.

ಸಚಿನ್​ ಸೌಮ್ಯ ಆಟ
ಸೆಹ್ವಾಗ್ ತಮ್ಮ ಇನ್ನಿಂಗ್ಸ್ ಅನ್ನು ಅವರ ಎಂದಿನ ಶೈಲಿಯಲ್ಲಿ ಪ್ರಾರಂಭಿಸಿದರು. ಮೊಹಮ್ಮದ್ ರಫೀಕ್ ಅವರ ಮೊದಲ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 19 ರನ್ ಗಳಿಸಿದರು. ನಂತರ ಮೊಹಮ್ಮದ್ ಷರೀಫ್ ಅವರ ಓವರ್‌ನಲ್ಲಿ 1 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಸಚಿನ್ ತೆಂಡೂಲ್ಕರ್ ಕೂಡ ನಾನೇನೂ ಕಮ್ಮಿ ಇಲ್ಲ ಎಂಬಂತೆ ಬೌಂಡರಿಯೊಂದಿಗೆ ತಮ್ಮ ಖಾತೆ ತೆರೆದರು.

ಆಲಂ ‌ಗೀರ್ ಕಬೀರ್ ಓವರ್‌ನಲ್ಲಿ ಸಚಿನ್​ ಎರಡು ಬೌಂಡರಿ ಬಾರಿಸಿದರು. ಹೀಗಾಗಿ ಇಂಡಿಯಾ ಲೆಜೆಂಡ್ಸ್ ನಾಲ್ಕು ಓವರ್‌ಗಳಲ್ಲಿ 51 ರನ್ ಗಳಿಸಿತು. ಈ ಪೈಕಿ ಸೆಹ್ವಾಗ್ ಅವರದ್ದೇ 39 ರನ್​ಗಳಿದ್ದವು. ತಮ್ಮ ಎಂದಿನ ಆಟವನ್ನು ಮುಂದುವರೆಸಿದ ಸೆಹ್ವಾಗ್ ಆಲಂ ‌ಗೀರ್ ಕಬೀರ್ ಅವರ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿ, ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.


ಸಿಕ್ಸರ್ ಬಾರಿಸಿ ಜಯ ತಂದುಕೊಟ್ಟ ವೀರೂ
ನಂತರ ಖಲೀದ್ ಮೆಹಮೂದ್ ಓವರ್‌ನಲ್ಲಿ ಸೆಹ್ವಾಗ್ ಮತ್ತು ಸಚಿನ್ ಮೂರು ಬೌಂಡರಿ ಬಾರಿಸಿದರು. ಒಂಬತ್ತನೇ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಭಾರತವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ ಸೆಹ್ವಾಗ್​, ಖಾಲಿದ್ ಮೆಹಮೂದ್ ಅವರ ಚೆಂಡನ್ನು ಸಿಕ್ಸರ್​ಗೆ ಅಟ್ಟುವ ಮೂಲಕ, ಇಂಡಿಯಾ ಲೆಜೆಂಡ್ಸ್​ಗೆ ಜಯ ತಂದುಕೊಟ್ಟರು.

ಅಲ್ಪ ಮೊತ್ತಕ್ಕೆ ಕುಸಿದ ಬಾಂಗ್ಲಾದೇಶ ತಂಡ
ಇದಕ್ಕೂ ಮೊದಲು ಬಾಂಗ್ಲಾದೇಶ ತಂಡವನ್ನು 109 ರನ್‌ಗಳಿಗೆ ಕಟ್ಟಿಹಾಕಲಾಯಿತು. ಟಾಸ್​ ಗೆದ್ದ ಬಾಂಗ್ಲಾ ತಂಡ ಉತ್ತಮವಾದ ಪ್ರಾರಂಭ ಪಡೆಯಿತು. ಆದರೆ ನಂತರದಲ್ಲಿ ಇಂಡಿಯಾ ಲೆಜೆಂಡ್ಸ್​ನ ಪ್ರಜ್ಞಾನ್ ಓಜಾ ಮತ್ತು ಯುವರಾಜ್ ಸಿಂಗ್ ಅವರ ಅದ್ಭುತ ಬೌಲಿಂಗ್ ಬಾಂಗ್ಲಾದೇಶ ತಂಡವನ್ನು ಇನ್ನಿಲ್ಲದಂತೆ ಕಾಡಿತು. ಆರಂಭಿಕ ನಜೀಮ್​ದ್ದಿನ್ ಅವರ 49 ರನ್​ಗಳ ಅಬ್ಬರದ ಬ್ಯಾಟಿಂಗ್​ ಬಿಟ್ಟರೆ, ಇನ್ನ್ಯಾವ ಆಟಗಾರನೂ ಅಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಬಾಂಗ್ಲಾದೇಶ ತಂಡ ಅಲ್ಪ ರನ್​ಗಳಿಗೆ ಆಲ್​ಔಟ್​ ಆಯಿತು.


ಈ ಸರಣಿಯ ಎಲ್ಲಾ ಪಂದ್ಯಗಳು ಛತ್ತೀಸ್​ಗಡ್​ನ ರಾಜಧಾನಿ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ.

ಇದನ್ನೂ ಓದಿ:India vs England 4th Test Day 3: ಜೊತೆ ಆಟಗಾರರ ನೆರವಿಲ್ಲದೆ ಶತಕ ವಂಚಿತರಾದ ಸುಂದರ್