VIDEO: ಚಾಂಪಿಯನ್ಸ್ ಟ್ರೋಫಿಯನ್ನೇ ಮರೆತು ತೆರಳಿದ ರೋಹಿತ್ ಶರ್ಮಾ
Champions trophy 2025: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 49 ಓವರ್ಗಳಲ್ಲಿ 254 ರನ್ ಬಾರಿಸಿ 4 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಮೂಲಕ 3ನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಮರೆವಿಗೂ ರೋಹಿತ್ ಶರ್ಮಾಗೆ ಅವಿನಾಭಾವ ಸಂಬಂಧ. ಈ ಹಿಂದೆ ಪಂದ್ಯದ ಟಾಸ್ ವೇಳೆ ಹಲವು ಬಾರಿ ತಮ್ಮ ಮರೆವನ್ನು ಪ್ರದರ್ಶಿಸಿದ್ದರು. ಅದರಲ್ಲೂ ಆಡುವ ಬಳಗದಲ್ಲಿ ಯಾರಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳುವುದೇ ಹಿಟ್ಮ್ಯಾನ್ ಪಾಲಿನ ದೊಡ್ಡ ಸವಾಲು. ಈ ಮರೆವು ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆದಿದೆ. ಅದು ಚಾಂಪಿಯನ್ಸ್ ಟ್ರೋಫಿಯನ್ನೇ ಮರೆಯುವಷ್ಟು.
ಹೌದು, ನ್ಯೂಝಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟ್ರೋಫಿಯೊಂದಿಗೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ಸುದ್ದಿಗೋಷ್ಠಿಯಲ್ಲಿ ಮುಗಿಸಿ ಹೊರಡುವಾಗ ಚಾಂಪಿಯನ್ಸ್ ಟ್ರೋಫಿಯನ್ನೇ ಮರೆತಿದ್ದಾರೆ. ತಕ್ಷವೇ ಪ್ರತಿಕಾಗೋಷ್ಠಿಯಲ್ಲಿದ್ದ ಸಿಬ್ಬಂದಿಯೊಬ್ಬರು ಟ್ರೋಫಿಯನ್ನು ಎತ್ತಿಕೊಂಡು ಹೋಗಿ ಟೀಮ್ ಇಂಡಿಯಾ ನಾಯಕನ ಕೈಗೆ ಕೊಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರೋಹಿತ್ ಶರ್ಮಾ, ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಹೊಂದುತ್ತಿಲ್ಲ. ದಯವಿಟ್ಟು ಇಂತಹ ವದಂತಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯುವುದನ್ನು ಹಿಟ್ಮ್ಯಾನ್ ಖಚಿತಪಡಿಸಿದ್ದಾರೆ.