Rohit Sharma: ಟಿ20 ವಿಶ್ವಕಪ್​ ಬಳಿಕ ಎರಡೂ ತಂಡಗಳಿಗೆ ರೋಹಿತ್ ಶರ್ಮಾ ನಾಯಕ

| Updated By: ಝಾಹಿರ್ ಯೂಸುಫ್

Updated on: Oct 20, 2021 | 2:58 PM

Virat Kohli vs Rohit Sharma: ಈ ಹಿಂದೆ ಟಿ20 ವಿಶ್ವಕಪ್​ ಬಳಿಕ ನಾಯಕತ್ವದಿಂದ ಕೆಳಗಿಳಿಯುವುದಾಗಿ ಕೊಹ್ಲಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಏಕದಿನ ತಂಡದ ಕಪ್ತಾನ ಸ್ಥಾನದಿಂದಲೂ ಕೊಹ್ಲಿ ಕೆಳಗಿಳಿಯಲಿದ್ದಾರೆ ಎನ್ನಲಾಗಿತ್ತು.

Rohit Sharma: ಟಿ20 ವಿಶ್ವಕಪ್​ ಬಳಿಕ ಎರಡೂ ತಂಡಗಳಿಗೆ ರೋಹಿತ್ ಶರ್ಮಾ ನಾಯಕ
Virat kohli-Rohit Sharma
Follow us on

ಟಿ20 ವಿಶ್ವಕಪ್ (T20 World Cup 2021)​ ಬಳಿಕ ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಮುಂದಿನ ನಾಯಕ ಯಾರೆಂಬುದನ್ನು ಬಿಸಿಸಿಐ (BCCI) ಇನ್ನೂ ಕೂಡ ಸ್ಪಷ್ಟಪಡಿಸಿಲ್ಲ. ಇದಾಗ್ಯೂ ಪ್ರಸ್ತುತ ತಂಡದ ಉಪನಾಯಕ ರೋಹಿತ್ ಶರ್ಮಾ (Rohit Sharma), ಕೆಎಲ್ ರಾಹುಲ್ (KL Rahul) ಹಾಗೂ ರಿಷಭ್ ಪಂತ್ (Rishabh Pant) ಹೆಸರುಗಳು ನಾಯಕರ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಇದೀಗ ಟಿ20 ವಿಶ್ವಕಪ್ ಟೀಮ್ ಇಂಡಿಯಾವನ್ನು ಸೀಮಿತ ಓವರ್​ಗಳಲ್ಲಿ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಅಂದರೆ ಟಿ20 ಹಾಗೂ ಏಕದಿನ ತಂಡಕ್ಕೆ ಹಿಟ್​ಮ್ಯಾನ್ ನಾಯಕರಾಗಲಿದ್ದು, ವಿರಾಟ್ ಕೊಹ್ಲಿಗೆ ಟೆಸ್ಟ್​ ಕ್ರಿಕೆಟ್​ ನಾಯಕತ್ವ ಮಾತ್ರ ವಹಿಸಲು ಬಿಸಿಸಿಐ ಚಿಂತಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಟಿ20 ವಿಶ್ವಕಪ್​ ಬೆನ್ನಲ್ಲೇ ಭಾರತ ತಂಡವು ನ್ಯೂಜಿಲೆಂಡ್ ವಿರುದ್ದ ಸರಣಿ ಆಡಲಿದ್ದು, ಹೀಗಾಗಿ ಅನುಭವಿ ನಾಯಕ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲು ಬಿಸಿಸಿಐ ಆಸಕ್ತಿ ಹೊಂದಿದೆ. ಏಕೆಂದರೆ ಹಿಟ್​ಮ್ಯಾನ್ ಭಾರತದ 111 ಟಿ20 ಪಂದ್ಯ ಹಾಗೂ 227 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್​ನಲ್ಲೂ ಮುಂಬೈ ಇಂಡಿಯನ್ಸ್​ ತಂಡವನ್ನು ಮುನ್ನಡೆಸಿ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿ ಟಿ20 ಹಾಗೂ ಏಕದಿನ ಕ್ರಿಕೆಟ್​ಗೆ ಏಕ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಟಿ20 ನಾಯಕತ್ವ ತ್ಯಜಿಸಿದ ಬೆನ್ನಲ್ಲೇ, ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದಲೂ ಕೆಳಗಿಳಸಲಾಗುತ್ತೆ ಎಂದು ವರದಿಯಾಗಿದೆ.

ಅಷ್ಟೇ ಅಲ್ಲದೆ ಈ ಬಾರಿಯ ಟಿ20 ವಿಶ್ವಕಪ್​ ಬೆನ್ನಲ್ಲೇ ಭಾರತ ಎರಡು ಐಸಿಸಿ ಟೂರ್ನಿಗಳನ್ನು ಆಡಬೇಕಿದೆ. ಅಂದರೆ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಟಿ20 ವಿಶ್ವಕಪ್ ಹಾಗೂ 2023 ರಲ್ಲಿ ಏಕದಿನ ವಿಶ್ವಕಪ್ ಆಡಲಿದೆ. ಇದಕ್ಕಾಗಿ ಈಗಾಗಲೇ ತಂಡವನ್ನು ಕಟ್ಟಲು ಬಿಸಿಸಿಐ ಪ್ಲ್ಯಾನ್ ರೂಪಿಸಿದ್ದು, ಅದರಂತೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಹೊಸ ಪಡೆಯನ್ನು ಸಜ್ಜುಗೊಳಿಸಲು ಭಾರತೀಯ ಕ್ರಿಕೆಟ್ ಬೋರ್ಡ್​ ಮುಂದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಟಿ20 ಹಾಗೂ ಏಕದಿನ ತಂಡದ ಜವಾಬ್ದಾರಿಯನ್ನು ರೋಹಿತ್ ಶರ್ಮಾಗೆ ವಹಿಸಲು ನಿರ್ಧರಿಸಲಾಗಿದೆ.

ಈ ಹಿಂದೆ ಟಿ20 ವಿಶ್ವಕಪ್​ ಬಳಿಕ ನಾಯಕತ್ವದಿಂದ ಕೆಳಗಿಳಿಯುವುದಾಗಿ ಕೊಹ್ಲಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಏಕದಿನ ತಂಡದ ಕಪ್ತಾನ ಸ್ಥಾನದಿಂದಲೂ ಕೊಹ್ಲಿ ಕೆಳಗಿಳಿಯಲಿದ್ದಾರೆ ಎನ್ನಲಾಗಿತ್ತು. ಇದೀಗ ಇದನ್ನು ಪುಷ್ಠೀಕರಿಸುವಂತೆ ಸೀಮಿತ ಓವರ್​ಗಳ ಕ್ರಿಕೆಟ್​ಗೆ ಏಕ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ ಎಂಬ ವರದಿ ಮಹತ್ವ ಪಡೆದುಕೊಂಡಿದೆ. ಒಟ್ಟಿನಲ್ಲಿ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾವನ್ನು ಮುಂದಿನ ದಿನಗಳಲ್ಲಿ ಯಾರು ಮುನ್ನಡೆಸಲಿದ್ದಾರೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.

ಇದನ್ನೂ ಓದಿ: T20 World Cup 2021: ಕೆಎಲ್ ರಾಹುಲ್​ ಆರಂಭಿಕನಲ್ವಾ: ಕೊಹ್ಲಿ ಸಜ್ಜಾಗಿರಲು ಹೇಳಿದ್ದು ಯಾರಿಗೆ?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(Rohit Sharma To Be Named India’s ODI And T20I Captain)