ಶ್ರೀಲಂಕಾದ ವಿರುದ್ಧ ಇಂದು ಕೊನೆಗೊಂಡ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ಗೆ 7 ವಿಕೆಟ್ಗಳ ಭರ್ಜರಿ ಜಯ ದೊರಕಿಸುವಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಬಾರಿಸಿದ ದ್ವಿಶತಕದೊಂದಿಗೆ ಪ್ರಮುಖ ಪಾತ್ರ ನಿರ್ವಹಿದ ನಾಯಕ ಜೋ ರೂಟ್ ತಮ್ಮ ರಾಷ್ಟ್ರಕ್ಕೆ ಅತಿಹೆಚ್ಚು ಟೆಸ್ಟ್ಗಳನ್ನು ಗೆದ್ದುಕೊಟ್ಟ ನಾಯಕರ ಪೈಕಿ ಎರಡನೆ ಸ್ಥಾನವನ್ನು ಌಂಡ್ರ್ಯೂ ಸ್ಟ್ರಾಸ್ ಮತ್ತು ಅಲಸ್ಟೇರ ಕುಕ್ರೊಂದಿಗೆ ಹಂಚಿಕೊಡಿದ್ದಾರೆ.
ರೂಟ್ ನಾಯಕನಾಗಿ ಗಾಲ್ ಮೈದಾನದಲ್ಲಿ ಇವತ್ತು ಸಾಧಿಸಿದ್ದು 24ನೇ ಗೆಲುವಾಗಿದೆ. ಸ್ಟ್ರಾಸ್ ಮತ್ತು ಅಲಸ್ಟೇರ್ ಕುಕ್ ಸಹ ಅಷ್ಟೇ ಸಂಖ್ಯೆಯ ಟೆಸ್ಟ್ಗಳನ್ನು ಇಂಗ್ಲೆಂಡ್ಗೆ ಗೆದ್ದುಕೊಟ್ಟಿದ್ದಾರೆ. 26 ಟೆಸ್ಟ್ಗಳನ್ನು ಗೆದ್ದಿರುವ ಮೈಕೆಲ್ ವಾನ್ ಈ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. ರೂಟ್ ಇನ್ನೆರಡು ಟೆಸ್ಟ್ಗಳನ್ನು ಗೆದ್ದರೆ, ವಾನ್ ದಾಖಲೆಯನ್ನೂ ಸರಿಗಟ್ಟಲಿದ್ದಾರೆ. ಕ್ರಿಕೆಟ್ ಪರಿಣಿತರ ಪ್ರಕಾರ 30-ವರ್ಷ ವಯಸ್ಸಿನ ರೂಟ್ಗೆ ಅದು ಇಷ್ಟರಲ್ಲೇ ಸಾಧ್ಯವಾಗಲಿದೆ.
‘ಅಲ್ಪ ಪ್ರಮಾಣದ ತಯಾರಿಯೊಂದಿಗೆ ಇಲ್ಲಿಗೆ (ಶ್ರೀಲಂಕಾ) ಆಗಮಿಸಿದ ನಮ್ಮ ಟೀಮು ನೀಡಿರುವ ಅಮೋಘ ಪ್ರದರ್ಶನ ಬಹಳ ತೃಪ್ತಿ ಮತ್ತು ಸಂತೋಷವನ್ನು ನೀಡಿದೆ. ನಿನ್ನೆ ನಮ್ಮ ಪ್ರದರ್ಶನ ಮತ್ತೂ ಅದ್ಭುತವಾಗಿತ್ತು. ನಮ್ಮ ಇಬ್ಬರು ಸ್ಪಿನ್ನರ್ಗಳಿಬ್ಬರು 5-ವಿಕೆಟ್ ಪಡೆಯುವ ಸಾಧನೆ ಮಾಡಿದ್ದು ಹೆಮ್ಮೆಪಟ್ಟುಕೊಳ್ಳುವ ಸಂಗತಿ. ಯಾಕೆಂದರೆ ಕಳೆದ ವರ್ಷದಲ್ಲಿ ಅವರು ಬಹಳ ಕಡಿಮೆ ಪ್ರಮಾಣದ ಕ್ರಿಕೆಟ್ ಆಡಿದ್ದರು’ ಎಂದು ಪಂದ್ಯದ ನಂತರ ರೂಟ್ ಹೇಳಿದರು.
‘ಉಪಖಂಡದಲ್ಲಿ ಕ್ರಿಕೆಟ್ ಆಡುವುದು ಕಷ್ಟದ ಕೆಲಸವೇ, ಆದರೆ ಯಾವುದೇ ಬಗೆಯ ತಯಾರಿಯಿಲ್ಲದೆ ಈ ರೀತಿಯ ಪ್ರದರ್ಶನ ನೀಡಿ ಟೆಸ್ಟ್ ಗೆಲ್ಲುವುದು ನಮ್ಮ ಆಟಗಾರರ ಮನೋಬಲದ ಪ್ರತೀಕವಾಗಿದೆ. ಸರಣಿಯಲ್ಲಿ ನಮಗೆ ಉತ್ತಮ ಆರಂಭ ಸಿಕ್ಕಿದೆ. ಸ್ಪಿನ್ನರ್ಗಳ ಸಾಧನೆಯನ್ನು ಎಷ್ಟು ಹೊಗಳಿದರೂ ಸಾಲದು. ಮುಂದಿನ ದಿನಗಳಲ್ಲಿ ನಮ್ಮ ಈ ಗುಂಪು ಮತ್ತೂ ರೋಮಾಂಚಕ ಪ್ರದರ್ಶನಗಳನ್ನು ನೀಡಲಿದೆ. ಬಹಳ ಪ್ರಮುಖ ಅಂಶವೇನೆಂದರೆ ಮುಂದಿನ ಎಲ್ಲ ಪಂದ್ಯಗಳಲ್ಲಿ ನಾವು ಇದೇ ತೆರನಾದ ಪ್ರದರ್ಶನವನ್ನು ಕಾಯ್ದುಕೊಳ್ಳಲು ಉತ್ಸುಕರಾಗಿದ್ದೇವೆ’ ಎಂದು ರೂಟ್ ಹೇಳಿದರು.
ತಮ್ಮ ಬ್ಯಾಟಿಂಗ್ ಫಾರ್ಮ್ ಬಗ್ಗೆಯೂ ಮಾತಾಡಿದ ರೂಟ್ ಲಂಕಾದ ಸ್ಪಿನ್ನರ್ಗಳನ್ನು ಎದುರಿಸುವಾಗ ಪಾದಗಳ ಚಲನೆ ಬಹಳ ಚೆನ್ನಾಗಿತ್ತು ಎಂದು ಹೇಳಿದರು.
‘ಬಯೊ-ಬಬಲ್ ಶಿಷ್ಟಾಚಾರ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಾವು ಒಂದು ತಂಡವಾಗಿ ಎದುರಿಸುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ಒಂದೆಡೆ ಇರುವುದು ಬಹಳ ಖುಷಿ ನೀಡುತ್ತಿದೆ. ವೈಯಕ್ತಿಕ ಪ್ರದರ್ಶನ ಕುರಿತು ಹೇಳುವುದಾದರೆ ನನ್ನ ಮನಸ್ಥಿತಿ ಮತ್ತು ಫುಟ್ವರ್ಕ್ ಅದ್ಭುತವಾಗಿದ್ದವು. ಪಾದಗಳ ಚಲನೆ ಉತ್ತವಾಗಿದ್ದರೆ ಬಾಲನ್ನು ಸರಿಯಾಗಿ ಕನೆಕ್ಟ್ ಮಾಡಲು ಸಾಧ್ಯವಾಗುತ್ತದೆ. ಉತ್ತಮ ಫುಟ್ವರ್ಕ್ನಿಂದಾಗಿಯೇ ಎಚ್ಚರಿಕೆ-ಮಿಶ್ರಿತ ಆಕ್ರಮಣಕಾರಿ ಆಟವಾಡಲು ನನಗೆ ಸಾಧ್ಯವಾಗಿದ್ದು. ನನ್ನ ಏಕಾಗ್ರತೆ ಯಾವ ಹಂತದಲ್ಲೂ ವಿಚಲಿತಗೊಳ್ಳಲಿಲ್ಲ. ನನ್ನ ಸಾಮರ್ಥ್ಯದ ಬಗ್ಗೆ ಟೀಕೆಗಳು ಕೇಳಿ ಬರಲಾರಂಭಿಸಿದ್ದವು. ಆದರೆ, ಗಾಲ್ನಲ್ಲಿ ಬಿಗ್ ಇನ್ನಿಂಗ್ಸ್ ಆಡಿದ್ದು ಟೀಕಾಕಾರನ್ನು ನಿಶಬ್ದವಾಗಿಸಿದೆ ಎಂದು ಭಾವಿಸುತ್ತೇನೆ’ ಎಂದು ರೂಟ್ ಹೇಳಿದರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಶ್ರೀಲಂಕಾ ನೆಲದಲ್ಲಿ ಸತತ 5 ಟೆಸ್ಟ್ಗಳನ್ನು ಜಯಿಸಿದಂತಾಗಿದೆ. ಗೆಲುವಿನ ಸರಪಳಿ ಶುರುವಾಗಿದ್ದು 2012ರಲ್ಲಿ. ಆ ಸರಣಿಯನ್ನು ಇಂಗ್ಲೀಷರು 1-1ರಿಂದ ಸಮ ಮಾಡಿಕೊಂಡಿದ್ದರು. ಆಮೇಲೆ 2018ರಲ್ಲಿ ಇಂಗ್ಲೆಂಡ್ ಅತಿಥೇಯರನ್ನು 3-0 ಅಂತರದಿಂದ ಸೋಲಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಸೋಮವಾರದ ಗೆಲುವು ಐದನೆಯದ್ದಾಗಿದೆ.
Published On - 9:57 pm, Mon, 18 January 21