ಎರಡನೇ ದಿನದಾಟದಲ್ಲಿ ಇನ್ನೂ ಸಮಯ ಬಾಕಿಯಿರುವಂತೆಯೇ ಭಾರತ ಪ್ರವಾಸಿ ಇಂಗ್ಲೆಂಡನ್ನು 10 ವಿಕೆಟ್ಗಳಿಂದ ಸೋಲಿಸಿದ ನಂತರ ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿನ ಪಿಚ್ ಬಗ್ಗೆ ಟೀಕೆಗಳು ಶುರುವಾಗಿವೆ. ಟೆಸ್ಟ್ ಕ್ರಿಕೆಟ್ಗೆ ಅಯೋಗ್ಯವಾದ ಪಿಚ್ ಎಂದು ಇಂಗ್ಲೆಂಡ್ ಮಾಜಿ ಆಟಗಾರರಾದ ಮೈಕೆಲ್ ವಾನ್, ಅಲಸ್ಟೇರ್ ಕುಕ್ ಮತ್ತು ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಅವರ ಟೀಕೆಗಳಿಗೆ ಭಾರತದ ಕೆಲವು ಮಾಜಿ ಮತ್ತು ಹಾಲಿ ಆಟಗಾರರು ತಕ್ಕ ಉತ್ತರ ನೀಡಿರುವುದೇನೋ ನಿಜ ಅದರೆ ಬ್ರಿಟಿಷರು ಲೆಜೆಂಡ್ ಎಂದು ಪರಿಗಣಿಸುವ ಮತ್ತು ನಿಸ್ಸಂದೇಹವಾಗಿ ವಿಶ್ವದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಸರ್ ಜೆಫ್ರಿ ಬಾಯ್ಕಾಟ್ ಮೊಟೆರಾ ಪಿಚ್ ಅನ್ನು ಸಮರ್ಥಿಸಿಕೊಂಡಿದ್ದಾರೆ. ಪಿಚ್ಗಳನ್ನು ನಿರ್ದಿಷ್ಟವಾಗಿ ಹೀಗೆಯೇ ತಯಾರಿಸಬೇಕು ಅಂತ ಯಾವುದೇ ನಿಯಮವಿಲ್ಲ ಎಂದು ಬಾಯ್ಕಾಟ್ ಹೇಳಿದ್ದಾರೆ.
ಪ್ರಸಕ್ತ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು 227 ರನ್ಗಳ ಭಾರಿ ಅಂತರದಿಂದ ಸೋತ ಮೇಲೆ ಟೀಮ್ ಇಂಡಿಯಾ ನಂಬಲಸದಳ ರೀತಿಯಲ್ಲಿ ಬೌನ್ಸ್ ಬ್ಯಾಕ್ ಮಾಡಿ ನಂತರದ ಎರಡು ಟೆಸ್ಟ್ಗಳನ್ನು ಅಷ್ಟೇ ಸುಲಭವಾಗಿ ಗೆದ್ದು 4-ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಭಾರತದ ಸ್ಪಿನ್ದ್ವಯರಾದ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರ ಮಾರಕ ದಾಳಿಯೆದುರು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ತಮ್ಮ ಶಸ್ತ್ರಗಳನ್ನು ಚೆಲ್ಲಿ ಕಂಗಾಲಾಗಿದ್ದಾರೆ. ಎರಡು ಮತ್ತು ಮೂರನೇ ಟೆಸ್ಟ್ಗಳ 4 ಇನ್ನಿಂಗ್ಸ್ಗಳಲ್ಲಿ ಇಂಗ್ಲೆಂಡ್ಗೆ ಒಮ್ಮೆಯೂ 200 ರನ್ ದಾಟಲಾಗಿಲ್ಲ.
ಮೊಟೆರಾದಲ್ಲಿ ನಡೆದ 3ನೇ ಟೆಸ್ಟ್ ಎರಡನೇ ದಿನವೇ ಕೊನೊಗೊಂಡರೂ ಬಾಯ್ಕಾಟ್ ಪಿಚ್ ಪರವಾಗಿ ಮಾತಾಡಿದ್ದಾರೆ. ಕ್ರಿಕೆಟ್ ಆಡುವ ಯಾವುದೇ ಒಂದು ರಾಷ್ಟ್ರ ಪಿಚ್ಗಳನ್ನು ನಿರ್ದಿಷ್ಟವಾದ ರೀತಿಯಲ್ಲಿ ತಯಾರು ಮಾಡಬೇಕು ಅಂತ ಕ್ರಿಕೆಟ್ ನಿಯಮಾವಳಿಗಳ ಪುಸ್ತಕದಲ್ಲಿ ಬರೆದಿಲ್ಲ ಎಂದು ಅವರು ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
‘ಯಾವ ತೆರನಾದ ಪಿಚ್ ತಯಾರಿಸಬೇಕೆಂದು ನಿಯಮಾವಳಿಗಳ ಪುಸ್ತಕದಲ್ಲಿ ಹೇಳಿಲ್ಲ. ಪಿಚ್ನ ಮೊದಲ ಪ್ರಯೋಜನ ಪಡೆದುಕೊಳ್ಳುವ ಅವಕಾಶ ನಮಗೆ ಸಿಕ್ಕಿತ್ತು. ಆದರೆ, ವಾಸ್ತವ ಸಂಗತಿಯೇನೆಂದರೆ ಅವರು ನಮಗಿಂತ ಚೆನ್ನಾಗಿ ಆಡಿದರು, ವಿಷಯ ಬಹಳ ಸರಳವಾಗಿದೆ,’ ಎಂದು ಬಾಯ್ಕಾಟ್ ಟ್ವೀಟ್ ಮಾಡಿದ್ದಾರೆ.
There is nothing in the rules that says what type of pitch should be prepared. We had first choice of the surface and they were better than us. Simple. https://t.co/vOkBNEZgUm
— Sir Geoffrey Boycott (@GeoffreyBoycott) February 25, 2021
ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಮೈಕೆಲ್ ವಾನ್ ಮೊಟೆರಾದ ಪಿಚ್ ಟೆಸ್ಟ್ ಕ್ರಿಕೆಟ್ಗೆ ಲಾಯಕ್ಕಾಗಿರಲಿಲ್ಲ ಎಂದು ಹೇಳಿದ್ದಾರೆ. ‘ಟೆಸ್ಟ್ ಪಂದ್ಯ ಮನರಂಜನೆ ಒದಗಿಸಿದ್ದು ನಿಜವಾದರೂ ಅಲ್ಲಿನ ಪಿಚ್ ಮಾತ್ರ ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಲಾಯಕ್ಕಾಗಿರಲಿಲ್ಲ. ಎರಡನೇ ದಿನವಂತೂ ಬೌಲರ್ಗಳು ಲಾಟರಿ ಹೊಡೆದರು.’ ಎಂದು ವಾನ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ವಾನ್, ‘ನಾವು ಮುಂದೆಯೂ ಈ ಬಗೆಯ ಪಿಚ್ಗಳಲ್ಲಿ ಆಡುವುದಾರೆ, ಪಂದ್ಯ 5 ದಿನಗಳ ಕಾಲ ನಡೆಯುವಂತಾಗಲು ನನ್ನಲ್ಲೊಂದು ಉಪಾಯವಿದೆ. ಪ್ರತಿ ಟೀಮಿಗೆ ಮೂರು ಇನ್ನಿಂಗ್ಸ್ಗಳನ್ನು ಆಡುವ ಅವಕಾಶ ನೀಡಬೇಕು’ ಎಂದಿದ್ದಾರೆ.
If we are going to see these pitches … I have an answer to how it could work … Give the Teams 3 innings !!! ?? #INDvENG
— Michael Vaughan (@MichaelVaughan) February 25, 2021
‘ಕುಣಿಯಲು ಗೊತ್ತಿರದವಳು ನೆಲ ಡೊಂಕು’ ಅಂದಿರುವ ಹಾಗಿದೆ ವಾನ್ ಅವರಂಥ ಮಾಜಿ ಕ್ರಿಕೆಟಿಗರು ಮಾಡುವ ವಾದ. ಅಸಲಿಗೆ, ಬ್ರಿಟಷರಲ್ಲಿ ಯಾಕೆ ಈ ಬಗೆಯ ಕೋಪ, ಪರಿತಾಪ, ಹತಾಷೆ ಉಂಟಾಗುತ್ತಿದೆಯೆಂದರೆ, ಜೂನ್ನಲ್ಲಿ ನಡೆಯುವ ಚೊಚ್ಚಲು ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಗಿಟ್ಟಿಸುವಲ್ಲಿ ಇಂಗ್ಲೆಂಡ್ ವಿಫಲವಾಗಿದೆ. ನ್ಯೂಜಿಲೆಂಡ್ ಈಗಾಗಲೇ ಫೈನಲ್ ತಲುಪಿದ್ದು, ಅದರೊಂದಿಗೆ ಸೆಣಸುವ ಅವಕಾಶ ಈಗ ಭಾರತ ಮತ್ತು ಆಸ್ಟ್ರೇಲಿಯಾಗೆ ಮಾತ್ರ ಇದೆ, ಪ್ರಸಕ್ತ ಸರಣಿಯ ಕೊನೆ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡರೂ ಅರ್ಹತೆ ಗಿಟ್ಟಿಸುತ್ತದೆ, ಅದರೆ, ಒಂದು ಪಕ್ಷ ಭಾರತ ಸೋತರೆ, ಅಸ್ಟ್ರೇಲಿಯಾ ಕ್ವಾಲಿಫೈ ಅಗಲಿದೆ.
Published On - 7:52 pm, Fri, 26 February 21