SAFF Championship 2023: ಫೈನಲ್​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Jul 01, 2023 | 10:49 PM

SAFF Championship Semifinal: ರತ ತಂಡವು ಮೊದಲಾರ್ಧದಲ್ಲಿ ಗುರಿಯತ್ತ ಚೆಂಡನ್ನು ಬಾರಿಸಿದ್ದು ಕೇವಲ 2 ಬಾರಿ ಮಾತ್ರ. ಅತ್ತ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ್ದ ಲೆಬನಾನ್ ಅತ್ಯುತ್ತಮ ಪಾಸ್​ಗಳ ಮೂಲಕ ಭಾರತದ ಗೋಲಿನತ್ತ ದಾಳಿ ಮಾಡುವ ಪ್ರಯತ್ನ ಮಾಡಿದ್ದರು.

SAFF Championship 2023: ಫೈನಲ್​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ
Team India
Follow us on

SAFF Championship 2023: ಸೌತ್ ಏಷ್ಯಾನ್ ಫುಟ್​ಬಾಲ್ ಫೆಡರೇಷನ್ ಚಾಂಪಿಯನ್​ಶಿಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಲೆಬನಾನ್ ವಿರುದ್ಧ ಗೆದ್ದು ಭಾರತ ತಂಡವು (Team India) ಫೈನಲ್​ಗೆ ಪ್ರವೇಶಿಸಿದೆ. ನಿಗದಿತ ಸಮಯದೊಳಗೆ ಗೋಲು ದಾಖಲಾದ ಹಿನ್ನಲೆ ಫಲಿತಾಂಶ ನಿರ್ಧಾರಕ್ಕಾಗಿ ಪೆನಾಲ್ಟಿ ಶೂಟ್​ಔಟ್​ನ ಮೊರೆ ಹೋಗಬೇಕಾಯಿತು. ಪೆನಾಲ್ಟಿ ಶೂಟೌಟ್​ನಲ್ಲಿ 4-2 ಅಂತರದಿಂದ ಗೆಲ್ಲುವ ಮೂಲಕ ಭಾರತ ತಂಡವು ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇದಕ್ಕೂ ಮುನ್ನ ನಡೆದ ಪಂದ್ಯಾಟವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತೀಯ ಆಟಗಾರರು ಯಶಸ್ವಿಯಾಗಿದ್ದರು. ಆದರೆ ಲೆಬನಾನ್​ ರಕ್ಷಣಾ ಬೇಲಿಯನ್ನು ಭೇದಿಸಿ ಗೋಲುಗಳಿಸಲು ಸಾಧ್ಯವಾಗಲೇ ಇಲ್ಲ.

ಪರಿಣಾಮ ಭಾರತ ತಂಡವು ಮೊದಲಾರ್ಧದಲ್ಲಿ ಗುರಿಯತ್ತ ಚೆಂಡನ್ನು ಬಾರಿಸಿದ್ದು ಕೇವಲ 2 ಬಾರಿ ಮಾತ್ರ. ಅತ್ತ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ್ದ ಲೆಬನಾನ್ ಅತ್ಯುತ್ತಮ ಪಾಸ್​ಗಳ ಮೂಲಕ ಭಾರತದ ಗೋಲಿನತ್ತ ದಾಳಿ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಪ್ರತಿರೋಧ ತೋರುವಲ್ಲಿ ಭಾರತೀಯ ಡಿಫೆಂಡರ್​ಗಳು ಯಶಸ್ವಿಯಾಗಿದ್ದರು.

ಮೊದಲಾರ್ಧವು 0-0 ಅಂತರದಿಂದ ಮುಕ್ತಾಯಗೊಂಡ ಪಂದ್ಯವು ದ್ವಿತಿಯಾರ್ಧದಲ್ಲಿ ಮತ್ತಷ್ಟು ರೋಚಕತೆ ಪಡೆಯಿತು. ಸೆಕೆಂಡ್ ಹಾಫ್​ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಟೀಮ್ ಇಂಡಿಯಾ ಪರ ನಾಯಕ ಸುನಿಲ್ ಛೆಟ್ರಿ, ಸಹಾಲ್ ಸಮದ್ ಹಾಗೂ ಆಶಿಕ್ ಅತ್ಯುತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು.

ಆದರೆ ಲೆಬನಾನ್​​ ಪರ ಅತ್ಯುತ್ತಮ ಡಿಫೆನ್ಸ್ ಪ್ರದರ್ಶಿಸಿದ ಶೌರ್ ಹಾಗೂ ಮೆಲ್ಕಿಯನ್ನು ವಂಚಿಸಿ ಚೆಂಡನ್ನು ಬಲೆಯೊಳಗೆ ತಲುಪಿಸುವಲ್ಲಿ ಎಡವಿದರು. ಪರಿಣಾಮ ದ್ವಿತಿಯಾರ್ಧದಲ್ಲೂ ಕೂಡ ಯಾವುದೇ ಗೋಲುಗಳು ದಾಖಲಾಗಲಿಲ್ಲ.
ಇನ್ನು ಇಂಜುರಿ ಟೈಮ್​ನಲ್ಲಿ ಉದಾಂತ್​ ನೀಡಿದ ಅತ್ಯುತ್ತಮ ಪಾಸ್ ಅನ್ನು ಸುನಿಲ್ ಛೆಟ್ರಿ ಗೋಲು ಬಲೆಯತ್ತ ಬಾರಿಸಿದರೂ ಲೆಬನಾನ್ ಗೋಪ್ ಕೀಪರ್ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಇನ್ನು ನಿಗದಿತ ಸಮಯದೊಳಗೆ ಉಭಯ ತಂಡಗಳಿಂದ ಗೋಲು ದಾಖಲಾದ ಕಾರಣ ಹೆಚ್ಚುವರಿ 30 ನಿಮಿಷಗಳನ್ನು ನೀಡಲಾಯಿತು. ಈ ವೇಳೆಯೂ ಎರಡೂ ತಂಡಗಳು ಗೋಲುಗಳಿಸಲು ವಿಫಲವಾಯಿತು. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಪೆನಾಲ್ಟಿ ಶೂಟೌಟ್​ ನೀಡಲಾಯಿತು.

ಪೆನಾಲ್ಟಿ ಶೂಟೌಟ್​ನಲ್ಲಿ ಪ್ರಥಮ ಗೋಲು ದಾಖಲಿಸಿ ಸುನಿಲ್ ಛೆಟ್ರಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಆದರೆ ಲೆಬನಾನ್ ಪರ ಹಸನ್ ಮತೂಕ್ ವಿಫಲರಾದರು. 2ನೇ ಅವಕಾಶದಲ್ಲಿ ಭಾರತದ ಪರ ಅನ್ವರ್ ಅಲಿ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಿದರು. ಅತ್ತ ಲೆಬನಾನ್​ ಪರ ವಾಲಿದ್ ಶೌರ್ ಕೂಡ ಚೆಂಡನ್ನು ಗುರಿ ಮುಟ್ಟಿಸಿ ಅಂತರವನ್ನು 2-1 ಕ್ಕೆ ತಂದು ನಿಲ್ಲಿಸಿದರು.

ಮೂರನೇ ಅವಕಾಶದಲ್ಲಿ ಭಾರತದ ಪರ ಮಹೇಶ್ ಸಿಂಗ್ ಗೋಲು ದಾಖಲಿಸಿದರೆ, ಲೆಬನಾನ್ ಪರ ಮೊಹಮ್ಮದ್ ಸಾದಿಕ್ ವಿಫಲರಾದರು. ಇನ್ನು 4ನೇ ಅವಕಾಶದಲ್ಲಿ ಉದಾಂತ್ ಸಿಂಗ್ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಿ ಭಾರತದ ಗೆಲುವನ್ನು ಬಹುತೇಕ ಖಚಿತಪಡಿಸಿದರು. ಅತ್ತ ಖಲೀಲ್ ಖೆಡರ್ 4ನೇ ಅವಕಾಶದಲ್ಲಿ ವಿಫಲರಾಗುವುದರೊಂದಿಗೆ  4-2 ಅಂತರದಿಂದ ಭಾರತ ತಂಡವು ಜಯ ಸಾಧಿಸಿತು.

ಇದನ್ನೂ ಓದಿ: SAFF Championship 2023: ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ

ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡವು ಫೈನಲ್​ಗೆ ಪ್ರವೇಶಿಸಿದೆ. ಜುಲೈ 4 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಕುವೈತ್ ತಂಡಗಳು ಮುಖಾಮುಖಿಯಾಗಲಿದೆ.