ಬಾಲ್ ಟೆಂಪರಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರು ತನಿಖೆಗೆ ಆದೇಶ.. ಆಸಿಸ್ ಬೌಲರ್‌ಗಳಿಗೆ ಶುರುವಾಯ್ತು ನಡುಕ
ಪ್ರಮುಖ ಆರೋಪಿಯಾಗಿದ್ದ ಬ್ಯಾನ್‌ಕ್ರಾಫ್ಟ್ ಅವರ ವಿವಾದಿತ ಹೇಳಿಕೆಯ ನಂತರ ಪ್ರಕರಣವನ್ನು ಮರು ತನಿಖೆ ನಡೆಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಸ್ಯಾಂಡ್ ಪೇಪರ್ ಬಳಸಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಂದಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬ್ಯಾನ್‌ಕ್ರಾಫ್ಟ್ ಅವರ ವಿವಾದಿತ ಹೇಳಿಕೆಯ ನಂತರ ಪ್ರಕರಣವನ್ನು ಮರು ತನಿಖೆ ನಡೆಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಈ ಮೂಲಕ 2018ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದಿದ್ದ ಕ್ರಿಕೆಟ್ ಜಗತ್ತಿನ ಕಪ್ಪು ಚುಕ್ಕೆಯ ಘಟನೆ ಮತ್ತೆ ಬೆಳಕಿಗೆ ಬರಲಿದೆ. ಹರಿಣಗಳ ನಾಡಿಗೆ ಪ್ರವಾಸ ಹೋಗಿದ್ದ ಸ್ಟೀವ್ ಸ್ಮಿತ್ ನಾಯಕತ್ವದ ಆಸಿಸ್ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಈ ವೇಳೆ ಕೇಪ್‌ಟೌನ್‌ನಲ್ಲಿ ನಡೆದಿದ್ದ 3ನೇ ಟೆಸ್ಟ್ ವೇಳೆ ಬಾಲ್ ಟೆಂಪರಿಂಗ್ ಪ್ರಕರಣ ನಡೆದಿತ್ತು.
ಅಂದು ನಡೆದಿದ್ದ ಘಟನೆ ಕೇಪ್‌ಟೌನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ 3ನೇ ಟೆಸ್ಟ್ ಪಂದ್ಯದ ವೇಳೆ ಆಸಿಸ್ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಹೀಗಾಗಿ ಪೂರ್ವ ನಿಯೋಜನೆಯಂತೆ ಆಸಿಸ್ ತಂಡದ ಯುವ ಆಟಗಾರ ಬ್ಯಾನ್‌ಕ್ರಾಫ್ಟ್ ಅಂದಿನ ಪಂದ್ಯದಲ್ಲಿ ಬಳಸಲಾಗಿದ್ದ ಬಾಲ್ ಅನ್ನು ಸ್ಯಾಂಡ್ ಪೇಪರ್‌ನಿಂದ ತಿಕ್ಕಿ ವಿರೂಪಗೊಳಿಸಿದ್ದರು. ಇದು ಮೈದಾನದಲ್ಲಿದ್ದ ವಿಡಿಯೋ ಕ್ಯಾಮರದಲ್ಲಿ ಸೆರೆಯಾಗಿತ್ತು. ತನಿಖೆ ನಡೆದಾಗ ಈ ಘಟನೆಯ ರುವಾರಿಗಳಾಗಿ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸಿಕ್ಕಿಬಿದ್ದಿದ್ದರು. ಹೀಗಾಗಿ ಸ್ಟೀವ್ ಮತ್ತು ಡೇವಿಡ್‌ಗೆ 12 ತಿಂಗಳು, ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳು ನಿಷೇಧ ಶಿಕ್ಷೆಯಾಗಿತ್ತು. ಈ ಕಳ್ಳಾದ ಹೊರತಾಗಿಯೂ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1ರಿಂದ ದಕ್ಷಿಣ ಆಫ್ರಿಕಾ ಗೆದ್ದಿತ್ತು.
ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಮುಂಚೆಯೇ ತಿಳಿದಿತ್ತು ಆ ಘಟನೆಯ 3 ವರ್ಷಗಳ ನಂತರ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಈಗ ತಮ್ಮ ಮೌನವನ್ನು ಮುರಿದಿದ್ದಾರೆ ಮತ್ತು ಇಡೀ ಘಟನೆಯನ್ನು ವಿವರಿಸಿದ್ದಾರೆ. ಆ ಘಟನೆಯಲ್ಲಿ ಬ್ಯಾನ್‌ಕ್ರಾಫ್ಟ್ ಈ ಹಿಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ಜೊತೆಗೆ ಅಂದು ನಡೆದಿದ್ದ ಘಟನೆಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಅಂದು ಮೈದಾನದಲ್ಲಿ ಏನು ನಡೆದಿತ್ತೋ ಅದರ ಬಗ್ಗೆ ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಮುಂಚೆಯೇ ತಿಳಿದಿತ್ತು ಎಂದು ಅವರು ಹೇಳಿದರು. ವಾಸ್ತವವಾಗಿ, ಪಂದ್ಯದ ಸಮಯದಲ್ಲಿ, ಬ್ಯಾನ್‌ಕ್ರಾಫ್ಟ್ ಚೆಂಡನ್ನು ವಿರೋಪಗೊಳಿಸಿ ಮರಳು ಕಾಗದವನ್ನು ತನ್ನ ಪ್ಯಾಂಟ್‌ನಲ್ಲಿ ಇಟ್ಟುಕೊಂಡಿದ್ದರು, ಅದರ ಚಿತ್ರಗಳನ್ನು ಮೈದಾನದಲ್ಲಿದ್ದ ಕ್ಯಾಮೆರಾದಿಂದ ಸೆರೆಹಿಡಿಯಲಾಗಿತ್ತು.
ಇತರ ಬೌಲರ್‌ಗಳಿಗೆ ಆತಂಕ ಬ್ಯಾನ್‌ಕ್ರಾಫ್ಟ್ ಹೇಳಿಕೆಯು ಹೊಸ ತಿರುವು ಪಡೆದುಕೊಂಡಿರುವುದಲ್ಲದೆ. ಅಂದು ತಂಡದಲ್ಲಿದ್ದ ಇತರ ಬೌಲರ್‌ಗಳಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ. ಮೂರು ವರ್ಷಗಳ ನಂತರ, ಪ್ರಕರಣ ಮತ್ತೆ ವಿವಾದ ಸೃಷ್ಟಿಸಿರುವುದರಿಂದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಪ್ಯಾಟ್ ಕಮ್ಮಿನ್ಸ್, ನಾಥನ್ ಲಿಯಾನ್ ಮತ್ತು ಮಿಚೆಲ್ ಮಾರ್ಷ್ ಅವರನ್ನು ತೊಂದರೆಗೆ ಸಿಲುಕಿಸಿದೆ. ಇವರುಗಳನ್ನು ನಿಷೇಧಿಸಬಹುದು ಅಥವಾ ಇತರ ರೀತಿಯ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದು. ಏಕೆಂದರೆ ಈ ಆಟಗಾರರು 2018 ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಬೌಲರ್ ಆಗಿದ್ದರು.
ಬಾಲ್ ಟೆಂಪರಿಂಗ್ ನಂತರ 2019 ರ ಆಶಸ್‌ನಲ್ಲಿ ಕಳೆದುಹೋದ ಅವಕಾಶ ಬಾಲ್-ಟೆಂಪರಿಂಗ್ ಘಟನೆಯ ನಂತರ, 2019 ರಲ್ಲಿ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಗೆ ಮರಳಲು ಬ್ಯಾನ್‌ಕ್ರಾಫ್ಟ್‌ಗೆ ಅವಕಾಶ ಸಿಕ್ಕಿತು. ಆ ಸರಣಿಯ 2 ಪಂದ್ಯಗಳಲ್ಲಿ ಕೇವಲ 44 ರನ್ ಗಳಿಸಲಷ್ಟೇ ಅವರಿಗೆ ಸಾಧ್ಯವಾಯಿತು. ಅಂದಿನಿಂದ, ಅವರು ಮತ್ತೆ ತಂಡದಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅವರು ಬಿಗ್ ಬ್ಯಾಷ್‌ನಲ್ಲಿ ಪರ್ತ್ ಸ್ಕಾರ್ಚರ್ಸ್ ಪರ ಆಡುತ್ತಲೇ ಇದ್ದರು.
ನಾನು ತಂಡಕ್ಕೆ ಮರಳುವ ಬಾಗಿಲುಗಳನ್ನು ಮುಚ್ಚಿದೆ – ಬ್ಯಾನ್‌ಕ್ರಾಫ್ಟ್ ಬ್ಯಾನ್‌ಕ್ರಾಫ್ಟ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್‌ನಲ್ಲಿ ಡರ್ಹಾಮ್ ಪರ ಆಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಪುನರಾಗಮನದ ಬಗ್ಗೆ, ಇನ್ನು ಮುಂದೆ ಇದರ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ ಎಂದು ಬ್ಯಾನ್‌ಕ್ರಾಫ್ಟ್ ಹೇಳಿದರು. ನಾನು ಟಾರ್ಗೆಟ್ ಆಗಿದ್ದೇನೆ, ತಂಡದ ಬಾಗಿಲು ತೆರೆದಿದೆ, ಆದರೆ ಅದನ್ನು ನಾನೇ ಮುಚ್ಚಿದ್ದೇನೆ ಎಂದರು. ಜೊತೆಗೆ ಅದರ ಬಗ್ಗೆ ಯೋಚಿಸುವುದರಿಂದ ನಾನು ಮಾನಸಿಕ ಒತ್ತಡಕ್ಕೆ ಸಿಲುಕಲು ಬಯಸುವುದಿಲ್ಲ. ನಾನು ಉತ್ತಮವಾಗಿ ಆಡುವುದನ್ನು ಮುಂದುವರಿಸಿದರೆ, ನನ್ನ ಬ್ಯಾಟ್‌ನೊಂದಿಗೆ ನಾನು ರನ್ ಗಳಿಸುತ್ತಿದ್ದರೆ, ಖಂಡಿತವಾಗಿಯೂ ನನಗೆ ಮತ್ತೆ ಅವಕಾಶಗಳು ಸಿಗಲಿವೆ ಎಂದು ಬ್ಯಾನ್‌ಕ್ರಾಫ್ಟ್ ಹೇಳಿದರು.