India vs Australia Test Series 2020 | ಪೂಜಾರಾರನ್ನು ‘ಸ್ಟೀವ್’ ಅಂತ ಕರೆದು ಅಸಭ್ಯತೆ ಮೆರೆದ ಶೇನ್ ವಾರ್ನ್

ವಾರ್ನ್ ಅವರ ಕಾಮೆಂಟ್ ಕೇಳಿಸಿಕೊಂಡಿರುವ ಅನೇಕ ಭಾರತೀಯರು ಟ್ವೀಟ್​ಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಟೀವ್ ಪದ ಬಳಕೆ ವೃತ್ತಿಪರತೆಗೆ ವಿರುದ್ಧವಾದದ್ದು, ಹೀಯಾಳಿಸುವಂಥದ್ದು, ಜನಾಂಗೀಯವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

India vs Australia Test Series 2020 | ಪೂಜಾರಾರನ್ನು ‘ಸ್ಟೀವ್’ ಅಂತ ಕರೆದು ಅಸಭ್ಯತೆ ಮೆರೆದ ಶೇನ್ ವಾರ್ನ್
ಶೇನ್ ವಾರ್ನ್
ಅರುಣ್​ ಕುಮಾರ್​ ಬೆಳ್ಳಿ

Updated on: Dec 17, 2020 | 10:41 PM

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್​ಗಳಲ್ಲೊಬ್ಬರೆಂದು ಪರಿಗಣಿಸಲ್ಪಡುವ ಆಸ್ಟ್ರೇಲಿಯಾದ ಶೇನ್ ವಾರ್ನ್​ಗೆ ನಾಲಿಗೆ ಮೇಲಿನ ಹಿಡಿತ ತಪ್ಪಿದಂತೆ ಕಾಣುತ್ತಿದೆ. ಭಾರತದ ಮೂರನೇ ಕ್ರಮಾಂಕದ ಬ್ಯಾಟ್ಸ್​ಮನ್ ಚೇತೇಶ್ವರ್ ಪೂಜಾರಾ ಅವರನ್ನು ‘ಸ್ಟೀವ್’ ಎಂದು ಕರೆದು ಅಸಭ್ಯತೆಯನ್ನು ಪ್ರದರ್ಶಿಸಿ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೊಗಾಗಿದ್ದಾರೆ.

ಇಂಗ್ಲೀಷರು ‘ಸ್ಟೀವ್’ ಪದವನ್ನು ಸಾಮಾನ್ಯವಾಗಿ ಕಪ್ಪು ಮತ್ತು ಕಂದು ವರ್ಣದ ಜನರಿಗೆ ಉಪಯೋಗಿಸುತ್ತಾರೆ. ಇಂಗ್ಲೆಂಡ್​ನಲ್ಲಿ ಏಷ್ಯನ್ ಮೂಲದ ಟ್ಯಾಕ್ಸಿ ಡ್ರೈವರ್​ಗಳನ್ನು ಮತ್ತು ರೆಸ್ಟುರಾಗಳಲ್ಲಿ ಕೆಲಸ ಮಾಡುವವರನ್ನು ಈ ಪದದಿಂದ ಉಲ್ಲೇಖಿಸಲಾಗುತ್ತದೆ.

ಚೇತೇಶ್ವರ್ ಪೂಜಾರಾ ಇಂಗ್ಲಿಷ್ ಕೌಂಟಿ ಸೀಸನ್​ನಲ್ಲಿ ಯಾರ್ಕ್​ಶೈರ್ ಕ್ಲಬ್ ಆಡುತ್ತಾರೆ. ಆ ಕ್ಲಬ್ಬಿನ ಆಡಳಿತ ವರ್ಗದ ಅಧಿಕಾರಿಗಳಿಗೆ ತಮ್ಮ ಹೆಸರು ಉಚ್ಚರಿಸಲು ಕಷ್ಟವಾಗಿದ್ದರಿಂದ ‘ಸ್ಟೀವ್’ ಎಂದು ಕರೆಯಲಾರಂಭಿಸಿದ್ದರು ಅಂತ ಖುದ್ದು ಪೂಜಾರಾ ಅವರೇ 2018 ರಲ್ಲಿ ಹೇಳಿದ್ದರು.

ಚೇತೇಶ್ವರ ಪೂಜಾರಾ

ಅದೇ ಕ್ಲಬ್​ಗೆ ಆಡುತ್ತಿದ್ದ ಇತರ ಏಷ್ಯನ್ ಆಟಗಾರರು ಮತ್ತು ಆಡಳಿತ ಮಂಡಳಿಯಲ್ಲಿದ್ದ ಕೆಲವರು ‘ಸ್ಟೀವ್’ ಪದವು ತೆಗಳಿಕೆ, ಮೂದಲಿಕೆ ಅಂತ ಪರಿಗಣಿಸಿ ಕ್ಲಬ್​ನಿಂದ ಸಂಬಂಧ ಕಡಿದುಕೊಂಡರು.

ತಮ್ಮ ಕ್ರಿಕೆಟಿಂಗ್ ಕರೀಯರ್​ನ ಹಲವಾರು ವರ್ಷಗಳನ್ನು ಇಂಗ್ಲೆಂಡಿನ ಕ್ಲಬ್​ಗಳಿಗೆ ಆಡುತ್ತಾ ಕಳೆದಿರುವ ವಾರ್ನ್​ಗೆ ‘ಸ್ಟೀವ್’ ಪದದ ಅರ್ಥ ಚೆನ್ನಾಗಿ ಗೊತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಕ್ರಿಕೆಟ್ ಸರಣಿಯ ಪ್ರಸರಣದ ಹಕ್ಕನ್ನು ಪಡೆದಿರುವ ಆಸ್ಟ್ರೇಲಿಯಾದ ಫಾಕ್ಸ್ ಕ್ರಿಕೆಟ್ ಚ್ಯಾನೆಲ್​ಗೆ ಅವರು ಕಾಮೆಂಟೇಟರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಮೊದಲ ದಿನದಾಟದ ಒಂದು ಸಂದರ್ಭದಲ್ಲಿ ಅವರನ್ನು ಪೂಜಾರಾ ಅವರನ್ನು ‘ಸ್ಟೀವ್’ ಎಂದು ಸಂಬೋಧಿಸಿದರು.

ಜೊತೆ ಕಾಮೆಂಟೇಟರ್​ನೊಂದಿಗೆ ವಾರ್ನ್​

ಅವರು ನೆನಪಿಟ್ಟುಕೊಳ್ಳಬೇಕಿರುವ ಸಂಗತಿಯೇನೆಂದರೆ, ಹಿಂದೊಮ್ಮೆ, ದಕ್ಷಿಣ ಆಫ್ರಿಕಾದ ಕ್ರಿಕೆಟರ್ ಹಶೀಮ್ ಅಮ್ಲಾ ಅವರನ್ನು ‘ಭಯೋತ್ಪಾದಕ’ನಂತೆ ಕಾಣುತ್ತಾರೆ ಎಂದು ವೀಕ್ಷಕ ವಿವರಣೆ ನೀಡುವಾಗ ಹೇಳಿದ್ದಕ್ಕೆ ಇತ್ತೀಚಿಗಷ್ಟೇ ಭಾರತದಲ್ಲಿ ನಿಧನರಾದ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್​ಮನ್ ಮತ್ತು ಖ್ಯಾತ ಕಾಮೆಂಟೇಟರ್ ಕೂಡ ಆಗಿದ್ದ ಡೀನ್ ಜೋನ್ಸ್ ಕೆಲಸ ಕಳೆದುಕೊಂಡಿದ್ದರು. ಅವರನ್ನು ಒಂದು ನಿರ್ದಿಷ್ಟ ಅವಧಿಯವರೆಗೆ ಕಾಮೆಂಟರಿ ನೀಡದಂತೆ ನಿಷೇಧಿಸಲಾಗಿತ್ತು. ಅಂಥ ಸ್ಥಿತಿ ವಾರ್ನ್​ಗೂ ಬಂದರೆ ಆಶ್ಚರ್ಯವಿಲ್ಲ.

ವಾರ್ನ್ ಅವರ ಕಾಮೆಂಟ್ ಕೇಳಿಸಿಕೊಂಡಿರುವ ಅನೇಕ ಭಾರತೀಯರು ಟ್ವೀಟ್​ಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದಾರ್ಥ್ ವೈದ್ಯನಾಥನ್ ಎನ್ನುವವರು, ಸ್ಟೀವ್ ಪದ ಬಳಕೆ ವೃತ್ತಿಪರತೆಗೆ ವಿರುದ್ಧವಾದದ್ದು, ಹೀಯಾಳಿಸುವಂಥದ್ದು, ಜನಾಂಗೀಯವಾದದ್ದು ಅಂತ ತಮ್ಮ ಟ್ವೀಟ್​ನಲ್ಲಿ ಹೇಳಿ, ಪೂಜಾರಾ ಅವರ ಹೆಸರಿನ ಸರಿಯಾದ ಉಚ್ಚಾರಣೆ ಕಲಿತುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಹಿಮನೀಶ್ ಗಂಜೂ ಎನ್ನುವವರು, ಪೂಜಾರಾ ಅವರನ್ನು ಯಾರ್ಕ್​ಶೈರ್​ನವರು ಬಳಸುತ್ತಿದ್ದ ನಿಕ್​ನೇಮ್​ನಿಂದ ಸಂಬೋಧಿಸುವುದನ್ನು ನಿಲ್ಲಿಸಿ ಅಂತ ಹೇಳಿದ್ದಾರೆ.

Published On - 10:19 pm, Thu, 17 December 20

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us