ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವದ ಚರ್ಚೆ ಮತ್ತೆ ಶುರುವಾಗಿದೆ. ಆಸಿಸ್ ಸರಣಿ ಗೆದ್ದ ಬೆನ್ನಲ್ಲೆ, ರಹಾನೆಗೆ ಟೆಸ್ಟ್ ತಂಡದ ನಾಯಕತ್ವ ನೀಡಿ ಎನ್ನುವ ಕೂಗು ಕೇಳಿಬಂದಿದೆ.
ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಬೆನ್ನಲ್ಲೇ, ಈಗ ಟೀಂ ಇಂಡಿಯಾ ನಾಯಕತ್ವದ ಚರ್ಚೆ ಶುರುವಾಗಿದೆ. ನಾಯಕ ಅಜಿಂಕ್ಯಾ ರಹಾನೆ ನೇತೃತ್ವದಲ್ಲಿ ಭಾರತದ ಯುವ ಆಟಗಾರರ ತಂಡ, ಸರಣಿ ಗೆದ್ದು ಇತಿಹಾಸವನ್ನ ಬರೆದಿತ್ತು. ಹೀಗಾಗಿ ರಹಾನೆ ಕೂಡ, ಯಶಸ್ಸಿನ ಪಾಲುದಾರರಾಗಿದ್ದಾರೆ. ಅಲ್ಲದೆ, ರಹಾನೆ ಸೋಲಿಲ್ಲದ ನಾಯಕನಾಗಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ನಂತರ ವಿರಾಟ್, ಪಿತೃತ್ವ ರಜೆಯ ಹಿನ್ನಲೆ ಭಾರತಕ್ಕೆ ವಾಪಸ್ ಆಗಿದ್ದರು. ಈ ವೇಳೆ ಅಜಿಂಕ್ಯಾ ರಹಾನೆ ಉಳಿದ ಮೂರು ಪಂದ್ಯಗಳಲ್ಲಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. ಅಲ್ಲದೇ, ಸರಣಿ ಗೆಲ್ಲುವಹಾಗೇ ಮಾಡಿದ್ದರು. ಇದೆ ಈಗ ಭಾರತೀಯ ಕ್ರಿಕೆಟ್ ತಂಡದಲ್ಲಿ ನಾಯಕತ್ವದ ಚರ್ಚೆ ಹುಟ್ಟುಹಾಕಿದೆ.
ವಿರಾಟ್ ಕೊಹ್ಲಿಯ ಅಗ್ರೆಸ್ಸಿವ್ ಕ್ಯಾಪ್ಟನ್ಸಿ ತಂಡಕ್ಕೆ ಸಕ್ಸಸ್ ತಂದುಕೊಟ್ಟಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಅದ್ರಲ್ಲೂ ಈಗಿರುವ ತಂಡದ ಎಲ್ಲಾ ಆಟಗಾರರು ವಿರಾಟ್ ನಾಯಕತ್ವದಲ್ಲಿ ಬೆಳೆದಿದ್ದಾರೆ. ಇದ್ರ ನಡುವೆಯೇ, ಶಾಂತಸ್ವಭಾವ ರಹಾನೆ ನಾಯಕನಾಗಲಿ ಅನ್ನೋ ಮಾತುಗಳು ಕೇಳಿಬರುತ್ತಿದೆ. ಅಡಿಲೇಡ್ ಟೆಸ್ಟ್ನಲ್ಲಿ ಕೇವಲ 36ರನ್ಗೆ ಟೀಂ ಇಂಡಿಯಾ ಆಲೌಟ್ ಆಗಿದ್ದಾಗ, ಯುವ ಆಟಗಾರರಲ್ಲಿ ಸ್ಫೂರ್ತಿ ತುಂಬಿ, ತಂಡವನ್ನ ಯಶಸ್ಸಿನತ್ತ ಕೊಂಡೊಯ್ದದದ್ದು, ಮುಂಬೈಕರ್ ರಹಾನೆ. ಹೀಗಾಗಿ, ವಿರಾಟ್ಗೆ ಏಕದಿನ, ಟಿ-ಟ್ವೆಂಟಿ ಮಾದರಿಯ ನಾಯಕತ್ವವನ್ನ ಕೊಟ್ಟು, ರಹಾನೆಯನ್ನ ಟೆಸ್ಟ್ ತಂಡದ ಸಾರಥಿಯನ್ನಾಗಿ ಮಾಡಲಿ ಅನ್ನೂ ಕೂಗು ಕೇಳಿಬರ್ತಿದೆ.
ವಿರಾಟ್ vs ರಹಾನೆ ಟೆಸ್ಟ್ ನಾಯಕನಾಗಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ ಸಾಧನೆ ನೋಡೋದಾದ್ರೆ, ವಿರಾಟ್ ಕೊಹ್ಲಿ 56ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ 33ಗೆಲುವು, 13ಸೋಲು, 10ಡ್ರಾ ಸಾಧಿಸಿರೋ ಭಾರತ 58.92ಸರಾಸರಿಯಲ್ಲಿ ಪಂದ್ಯಗಳನ್ನ ಗೆದ್ದಿದೆ. ಇನ್ನೂ ಅಜಿಂಕ್ಯಾ ರಹಾನೆ 5ಪಂದ್ಯಗಳನ್ನ ತಂಡವನ್ನ ಮುನ್ನಡೆಸಿದ್ದು 4ಗೆಲುವು ಸಾಧಿಸಿದೆ. ಹೀಗಾಗಿ ಶೇ.80ರ ಸರಾಸರಿಯಲ್ಲಿ ರಹಾನೆ ಕ್ಯಾಪ್ಟನ್ಸಿಯಲ್ಲಿ ಭಾರತ ಗೆದ್ದಿದೆ.
ಇನ್ನೂ ಟೆಸ್ಟ್ ತಂಡಕ್ಕೆ ರಹಾನೆ ಯಾಕೆ ಉತ್ತಮ ನಾಯಕ ಅನ್ನೋದನ್ನ ಇಶಾಂತ್ ಶರ್ಮಾ ಕೂಡ ಈ ಹಿಂದೆ ತಿಳಿಸಿದರು. ರಹಾನೆ ಬೌಲರ್ಗಳ ನಾಯಕ. ರಹಾನೆ ಬೌಲರ್ಗಳನ್ನ ಕೊಹ್ಲಿಗಿಂತ ಹೆಚ್ಚು ನಂಬುತ್ತಾರೆ. ಅಲ್ಲದೇ, ಎದುರಾಳಿ ತಂಡ ಎಷ್ಟೇ ದೊಡ್ಡ ಮೊತ್ತ ಕಲೆಹಾಕಿದ್ರೂ ತಾಳ್ಮೆ ಕಳೆದುಕೊಳ್ಳದೇ, ರಹಾನೆ ಬೌಲರ್ಗಳಿಗೆ ಟಿಪ್ಸ್ ನೀಡಿ ಹುರಿದುಂಬಿಸ್ತಾರೆ. ಆದ್ರೆ, ಕೊಹ್ಲಿ ಬೌಲರ್ಗಳಿಗೆ ಟಿಪ್ಸ್ ನೀಡದೇ, ಸೈಲೆಂಟ್ ಆಗಿ ಬಿಡುತ್ತಾರೆ.
ಒಟ್ಟನಲ್ಲಿ ಈಗಾಗಲೇ ಇಂಗ್ಲೆಂಡ್ ಸರಣಿಗೆ ತಂಡವನ್ನ ಪ್ರಕಟಿಸಲಾಗಿದ್ದು, ಕೊಹ್ಲಿ ನಾಯಕ, ರಹಾನೆ ಉಪನಾಯಕನಾಗಿದ್ದಾರೆ. ಆದ್ರೆ, ಕೊಹ್ಲಿ ಹಾಗೂ ರಹಾನೆ ನಡುವಿನ ನಾಯಕತ್ವದ ಚರ್ಚೆ ಈಗ ಅಪ್ರಸ್ತುತ ಅನ್ನಿಸೋದ್ರಲ್ಲಿ ಅತಿಶಯೋಕ್ತಿಯಲ್ಲ.