ಸೂಪರ್ ಲೀಗ್ ಕೇರಳ ಫುಟ್ಬಾಲ್ ಟೂರ್ನಿಗೆ ಅದ್ಧೂರಿ ಚಾಲನೆ
Super League Kerala: ಕೇರಳ ರಾಜ್ಯದ ವಿವಿಧ ಪ್ರದೇಶಗಳನ್ನು ಒಳಗೊಂಡಿರುವ ಆರು ಫ್ರಾಂಚೈಸಿಗಳು ಸೂಪರ್ ಲೀಗ್ ಕೇರಳ ಫುಟ್ಬಾಲ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದೆ. ಈ ತಂಡಗಳು ಕೇರಳದಲ್ಲಿ ಫುಟ್‌ಬಾಲ್‌ನ ಉತ್ಸಾಹವನ್ನು ಪುನರುಜ್ಜೀವನಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಅಲ್ಲದೆ ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆಗಳೊಂದಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವುದು ಈ ಲೀಗ್ನ ಪ್ರಮುಖ ಉದ್ದೇಶ.
ಬಹುನಿರೀಕ್ಷಿತ ಸೂಪರ್ ಲೀಗ್ ಕೇರಳ (SLK) ಫುಟ್ಬಾಲ್ ಲೀಗ್ಗೆ ಚಾಲನೆ ದೊರೆತಿದೆ. ಕೊಚ್ಚಿಯ ಐಕಾನಿಕ್ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಸೂಪರ್ ಲೀಗ್ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಮಾಲಿವುಡ್ನ ಖ್ಯಾತ ಚಿತ್ರ ನಟರುಗಳಾದ ಫೃಥ್ವಿ ರಾಜ್ ಹಾಗೂ ಆಸಿಫ್ ಅಲಿ ಸೇರಿದಂತೆ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು. ವಿಶೇಷ ಎಂದರೆ ಆಸಿಫ್ ಅಲಿ ಹಾಗೂ ಪೃಥ್ವಿರಾಜ್ ಈ ಲೀಗ್ನಲ್ಲಿನ ಕ್ಲಬ್ಗಳ ಮಾಲೀಕತ್ವವನ್ನೂ ಸಹ ಹೊಂದಿದ್ದಾರೆ. ಹೀಗಾಗಿಯೇ ಚೊಚ್ಚಲ ಸೂಪರ್ ಲೀಗ್ ಕೇರಳ ಟೂರ್ನಿಯ ಪಂದ್ಯ ವೀಕ್ಷಿಸಲು ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು.
ಇನ್ನು ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದ ಮಲಪ್ಪುರಂ ಫುಟ್ಬಾಲ್ ಕ್ಲಬ್ ಮತ್ತು ಫೋರ್ಕಾ ಕೊಚ್ಚಿ ಫುಟ್ಬಾಲ್ ಕ್ಲಬ್ ನಡುವೆ ಭರ್ಜರಿ ಪೈಪೋಟಿ ಕಂಡು ಬಂದಿತ್ತು. ಈ ರಣರೋಚಕ ಪಂದ್ಯವನ್ನು ವೀಕ್ಷಿಸಲು ಉಭಯ ತಂಡಗಳ ಕಟ್ಟಾ ಅಭಿಮಾನಿಗಳು ನೆಹರು ಸ್ಡೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದರು. ಅಲ್ಲದೆ ವಿಜಯ ಘೋಷಣೆಗಳೊಂದಿಗೆ ಅಭಿಮಾನಿಗಳು ಆಟಗಾರರನ್ನು ಹುರಿದುಂಬಿಸಿದರು. ಅಂತಿಮವಾಗಿ ಈ ಪಂದ್ಯವನ್ನು 2-0 ಅಂತರದಿಂದ ಗೆಲ್ಲುವಲ್ಲಿ ಮಲಪ್ಪುರಂ ಎಫ್‌ಸಿ ಯಶಸ್ವಿಯಾಗಿದೆ.
ವರ್ಣರಂಜಿತ ಕಾರ್ಯಕ್ರಮ:
ಸೂಪರ್ ಲೀಗ್ ಕೇರಳ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ಟಚ್ ಕೂಡ ನೀಡಲಾಗಿತ್ತು. ವರ್ಣರಂಜಿತವಾಗಿ ನಡೆದ ಓಪನಿಂಗ್ ಸರ್ಮನಿಯಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮನಮೋಹಕ ನೃತ್ಯ ಪ್ರದರ್ಶಿಸಿದರು. ಇನ್ನು ಸಂಗೀತ ಕ್ಷೇತ್ರದ ದಿಗ್ಗಜರಾದ ಸ್ಟೀಫನ್ ದೇವಸ್ಸಿ, ಶಿವಮಣಿ, ಡಾಬ್ಝಿ, ಡಿಜೆ ಸವ್ಯೋ ಮತ್ತು ಡಿಜೆ ಶೇಖರ್ ಸಂಗೀತ ರಸದೌತಣದೊಂದಿಗೆ ಅಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.
Spectacular Inauguration of Super League Kerala: A Triumph of Football in India #superleaguekerala #kerala #football #SLK #kerala #kochi #MahindraSuperLeagueKerala #tv9kannada pic.twitter.com/qi0HOw4UMA
— TV9 Kannada (@tv9kannada) September 11, 2024
6 ಫ್ರಾಂಚೈಸಿಗಳು:
ಕೇರಳ ರಾಜ್ಯದ ವಿವಿಧ ಪ್ರದೇಶಗಳನ್ನು ಒಳಗೊಂಡಿರುವ ಆರು ಫ್ರಾಂಚೈಸಿಗಳು ಸೂಪರ್ ಲೀಗ್ ಕೇರಳ ಫುಟ್ಬಾಲ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದೆ. ಈ ತಂಡಗಳು ಕೇರಳದಲ್ಲಿ ಫುಟ್‌ಬಾಲ್‌ನ ಉತ್ಸಾಹವನ್ನು ಪುನರುಜ್ಜೀವನಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಅಲ್ಲದೆ ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆಗಳೊಂದಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವ ಮೂಲಕ, ಸ್ಥಳೀಯ ಕ್ರೀಡೆಯ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಸೂಪರ್ ಲೀಗ್ ಕೇರಳ ಫುಟ್ಬಾಲ್ ಟೂರ್ನಿಯ 6 ತಂಡಗಳು:
- ಕ್ಯಾಲಿಕಟ್ ಎಫ್‌ಸಿ
- ಕಣ್ಣೂರು ವಾರಿಯರ್ಸ್ ಎಫ್‌ಸಿ
- ಕೊಚ್ಚಿ ಫೋರ್ಕಾ ಎಫ್‌ಸಿ
- ಮಲಪ್ಪುರಂ ಎಫ್‌ಸಿ
- ತಿರುವನಂತಪುರಂ ಕೊಂಬನ್ಸ್ ಎಫ್‌ಸಿ
- ತ್ರಿಶೂರ್ ಮ್ಯಾಜಿಕ್ ಎಫ್‌ಸಿ
ನಾಲ್ಕು ನಗರಗಳಲ್ಲಿ ಟೂರ್ನಿ:
ಕೇರಳ ಫುಟ್ಬಾಲ್ ಲೀಗ್ ಅನ್ನು ನಾಲ್ಕು ನಗರಗಳಲ್ಲಿ ಆಯೋಜಿಸಲು ಆಯೋಜಕರು ನಿರ್ಧರಿಸಿದ್ದಾರೆ. ಅದರಂತೆ ಇದೀಗ ಕೊಚ್ಚಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಟೂರ್ನಿಯ ಮೊದಲ ಪಂದ್ಯ ನಡೆದಿದ್ದು, ಇನ್ನುಳಿದ ಪಂದ್ಯಗಳಿಗೆ ಕೋಝಿಕ್ಕೋಡ್, ಮಲಪ್ಪುರಂ, ಮತ್ತು ತಿರುವನಂತಪುರಂ ಸ್ಟೇಡಿಯಂಗಳು ಆತಿಥ್ಯವಹಿಸಲಿದೆ. ಈ ಮೂಲಕ ಕೇರಳದಾದ್ಯಂತ ಅಭಿಮಾನಿಗಳಿಗೆ ವೈವಿಧ್ಯಮಯ ಫುಟ್‌ಬಾಲ್ ಅನುಭವವನ್ನು ಒದಗಿಸಲು ಆಯೋಜಕರು ಯೋಜನೆ ರೂಪಿಸಿದ್ದಾರೆ.
ಮಹೀಂದ್ರಾ ಪ್ರಾಯೋಜಕತ್ವ:
ಚೊಚ್ಚಲ ಸೂಪರ್ ಲೀಗ್ ಕೇರಳ ಫುಟ್ಬಾಲ್ ಟೂರ್ನಿಗೆ ಮಹೀಂದ್ರಾ ಕಂಪೆನಿಯು ಪ್ರಾಯೋಜಕತ್ವವನ್ನು ನೀಡಿದೆ. ಅದರಂತೆ ಈ ಟೂರ್ನಿಯು ಮಹೀಂದ್ರಾ ಸೂಪರ್ ಲೀಗ್ ಕೇರಳವಾಗಿ ಗುರುತಿಸಿಕೊಳ್ಳಲಿದೆ. ಭಾರತೀಯ ಫುಟ್‌ಬಾಲ್ ಲೀಗ್ ವ್ಯವಸ್ಥೆಯಿಂದ ಸ್ವತಂತ್ರವಾಗಿ ವೃತ್ತಿಪರ ಪುರುಷರ ಫುಟ್‌ಬಾಲ್ ಲೀಗ್‌ನಂತೆ SLK ಕಾರ್ಯನಿರ್ವಹಿಸುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಯುವ ಪ್ರತಿಭೆಗಳಿಗೆ ವೇದಿಕೆ:
ಸೂಪರ್ ಲೀಗ್ ಕೇರಳ ಫುಟ್ಬಾಲ್ ಲೀಗ್ ಮೂಲಕ ರಾಜ್ಯದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಕ್ಕಂತಾಗಲಿದೆ. ಈಗಾಗಲೇ ಕೇರಳದ 100 ಕ್ಕೂ ಹೆಚ್ಚು ಭರವಸೆಯ ಯುವ ಫುಟ್‌ಬಾಲ್ ಆಟಗಾರರನ್ನು ಎಸ್‌ಎಲ್‌ಕೆ ತಂಡದ ಮಾಲೀಕರು ವಿಶ್ವ ದರ್ಜೆಯ ತರಬೇತಿ ಮತ್ತು ಸ್ಪರ್ಧಾತ್ಮಕ ಟ್ರೈನಿಂಗ್ಗಾಗಿ ಆಯ್ಕೆ ಮಾಡಿದ್ದಾರೆ. ಇದು ಭಾರತೀಯ ಮತ್ತು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಹೊಸ ಯುಗಕ್ಕೆ ನಾಂದಿಯಾಡುವ ನಿರೀಕ್ಷೆಯಿದೆ.
ಸೂಪರ್ ಲೀಗ್ ಕೇರಳ ಧ್ಯೇಯ:
ಕೇರಳದ ಫುಟ್‌ಬಾಲ್ ಸಂಸ್ಕೃತಿಯನ್ನು ಉತ್ತುಂಗಕ್ಕೇರಿಸುವುದು, ರಾಜ್ಯದ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವ ಧ್ಯೇಯದೊಂದಿಗೆ ಸೂಪರ್ ಲೀಗ್ ಕೇರಳ ಫುಟ್ಬಾಲ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಇಂತಹ ಮಹತ್ವಾಕಾಂಕ್ಷೆಯ ಗುರಿಗಳೊಂದಿಗೆ ಕೇರಳದಲ್ಲಿ ಹೊಸ ಫುಟ್ಬಾಲ್ ಲೀಗ್ಗೆ ಚಾಲನೆ ನೀಡಲಾಗಿದ್ದು, ಈ ಮೂಲಕ ಎಸ್‌ಎಲ್‌ಕೆ ಆಯೋಜಕರು ಭಾರತೀಯ ಫುಟ್‌ಬಾಲ್‌ನಲ್ಲಿ ಹೊಸ ಯುಗದ ಪ್ರಾರಂಭದ ನಿರೀಕ್ಷೆಯಲ್ಲಿದ್ದಾರೆ.