ನಾನು ಕ್ರಿಕೆಟ್ ಆಡಲು ನಿರ್ಧರಿಸಿದ್ದೇ ‘ಸಚಿನ್ ಪಾಜಿ’ಯನ್ನು ಒಮ್ಮೆ ಭೇಟಿಯಾಗಲು: ಶ್ರೀಶಾಂತ್

  • Updated On - 2:44 pm, Wed, 16 September 20
ನಾನು ಕ್ರಿಕೆಟ್ ಆಡಲು ನಿರ್ಧರಿಸಿದ್ದೇ ‘ಸಚಿನ್ ಪಾಜಿ’ಯನ್ನು ಒಮ್ಮೆ ಭೇಟಿಯಾಗಲು: ಶ್ರೀಶಾಂತ್

ವಿವಾದಾತ್ಮಕ ಮತ್ತು ಮುಂಗೋಪಿ ವೇಗದ ಬೌಲರ್ ಎಸ್ ಶ್ರೀಶಾಂತ್ ನೆನಪಿದ್ದಾರೆ ತಾನೆ? ನೀವು ಆತನನ್ನು ಮರೆತಿರಲಿಕ್ಕೂ ಸಾಕು. ಯಾಕೆಂದರೆ ಶ್ರೀಶಾಂತ್ ಕಡೆಯ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿದ್ದು ಏಳು ವರ್ಷಗಳ ಹಿಂದೆ ಮತ್ತು ಭಾರತದ ಪರ ಅವರು ಕೊನೆಯ ಬಾರಿ ಆಡಿದ್ದು 2011ರಲ್ಲಿ.

ಇಂಡಿಯನ್ ಪ್ರಿಮಿಯರ್ ಲೀಗ್​ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆಡುತ್ತಿದ್ದ (2013) ಈ ಕೇರಳದ ವೇಗಿಯನ್ನು ದೆಹಲಿ ಪೊಲೀಸರು 16 ಮೇ, 2016ರಂದು ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಬಂಧಿಸಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸೆಪ್ಟಂಬರ್ 13, 2013 ರಂದು ಅವರ ವಿರುದ್ಧ ಜೀವಾವಧಿ ನಿಷೇಧ ಶಿಕ್ಷೆ ವಿಧಿಸಿತ್ತು. ಆದರೆ, ಸ್ವಭಾವತಃ ಹೋರಾಟಗಾರರಾಗಿರುವ ಶ್ರೀಶಾಂತ್, ತನ್ನ ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್​ನಲ್ಲಿ ಹೋರಾಡಿ ಶಿಕ್ಷೆಯನ್ನು 7 ವರ್ಷಗಳ ಅವಧಿಗೆ ತಗ್ಗಿಸಿಕೊಂಡರು.

ಅಂದಹಾಗೆ, ನಿನ್ನೆಗೆ ಶ್ರೀಶಾಂತ್ ಶಿಕ್ಷೆಯ ಅವಧಿಗೆ ಪೂರ್ತಿಗೊಂಡಿತು. ಈಗ 37ರ ಪ್ರಾಯದವರಾಗಿರುವ ಅವರು, ಟ್ವೀಟ್ ಮೂಲಕ ಪುನಃ ಸ್ಫರ್ಧಾತ್ಮಕ ಕ್ರಿಕೆಟ್​ಗೆ ವಾಪಸ್ಸಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

‘‘ನನ್ನ ವಿರುದ್ಧ ಮಾಡಿದ್ದ ಎಲ್ಲ ಆರೋಪಗಳಿಂದ ನಾನೀಗ ಮುಕ್ತನಾಗಿದ್ದೇನೆ ಮತ್ತು ನನ್ನ ಜೀವಕ್ಕಿಂತಲೂ ಜಾಸ್ತಿ ಪ್ರೀತಿಸುವ ಕ್ರಿಕೆಟ್​ಗೆ ವಾಪಸ್ಸಾಗಲು ತುದಿಗಾಲಲ್ಲಿ ನಿಂತಿದ್ದೇನೆ. ಅಭ್ಯಾಸದ ಸಮಯದಲ್ಲೂ ನನ್ನ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನ ನೀಡಬಯಸುತ್ತೇನೆ. ಕೇವಲ ಐದಾರು ವರ್ಷಗಳ ಕ್ರಿಕೆಟ್ ಮಾತ್ರ ನನ್ನಲ್ಲುಳಿದಿರುವುದರಿಂದ 

ಯಾವುದೇ ಟೀಮಿಗೆ ಆಡಿದರೂ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆ ನೀಡುತ್ತೇನೆ,’’ ಎಂದು ಶ್ರೀಶಾಂತ್ ಟ್ವೀಟ್​ನಲ್ಲಿ ಹೇಳಿದ್ದಾರೆ.

ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಜೂನ್ ತಿಂಗಳಲ್ಲೇ 2020-21 ರ ರಣಜಿ ಟ್ರೋಫಿ ಸೀಸನ್​ಗೆ ಶ್ರೀಶಾಂತ್ ಅವರ ಆಯ್ಕೆಯನ್ನು ಪರಿಗಣಿಸುವ ನಿರ್ಧಾರವನ್ನು ಪ್ರಕಟಿಸಿ, ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಿತ್ತು. ಆದರೆ, ಕೊವಿಡ್-19 ಪಿಡುಗಿನಿಂದಾಗಿ ಈ ಬಾರಿಯ ರಣಜಿ ಸೀಸನ್ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ.

ಶ್ರೀಶಾಂತ್, ಮುಂದಿನ ಐಪಿಎಲ್ ಸೀಸನ್​ನಲ್ಲಿ ಯಾವುದಾದರು ಫ್ರಾಂಚೈಸಿಗೆ ಆಡುವ ಇಚ್ಛೆಯನ್ನು ಸಹ ವ್ಯಕ್ತಪಡಿಸಿದ್ದಾರೆ.

‘‘ಐಪಿಎಲ್​ನಲ್ಲಿ ಯಾವುದೇ ತಂಡಕ್ಕೆ ಆಯ್ಕೆಯಾದರೂ ನಾನು ಆಡುತ್ತೇನೆ. ಆದರೆ ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವುದು ನನ್ನ ಮಹದಾಸೆಯಾಗಿದೆ. ನಾನು ಹಾಗೆ ಅಂದುಕೊಳ್ಳಲು ಕಾರಣ ‘ಸಚಿನ್ ಪಾಜಿ’. ನಾನು ಕ್ರಿಕೆಟ್ ಆಡಲು ಶುರು ಮಾಡಿದ್ದೇ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುವುದಕ್ಕೋಸ್ಕರ. ನಾನೊಂದು ವೇಳೆ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರೆ, ಡ್ರೆಸ್ಸಿಂಗ್ ರೂಮಿನಲ್ಲಿ ಸಚಿನ್ ಪಾಜಿ ಅವರಿಂದ ಕಲಿಯುವ ಸದವಕಾಶ ಮತ್ತೊಮ್ಮೆ ನನ್ನದಾಗುತ್ತದೆ,’’ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.

ಯಾವ ತಂಡಕ್ಕೆ ಆಯ್ಕೆಯಾದರೂ ಶ್ರೀಶಾಂತ್ ಒಂದು ವರ್ಷದವರೆಗೆ ಕಾಯಲೇಬೇಕು.

Click on your DTH Provider to Add TV9 Kannada