ರೋದಿಸುವದನ್ನ ನಿಲ್ಲಿಸಿ..! ಪಿಚ್​ ಬಗ್ಗೆ ತಕರಾರು ತೆಗೆದಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರ ಬಾಯಿ ಮುಚ್ಚಿಸಿದ ವಿಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 02, 2021 | 9:33 PM

Vivian Richards: ಭಾರತದಲ್ಲಿ ಆಡಲು ತೆರಳುವಾಗ ಈ ರೀತಿಯ ಸ್ಪಿನ್ ಸ್ನೇಹಿ ಪಿಚ್‌ಗಳು ನಿರೀಕ್ಷಿತವಾಗಿರುತ್ತವೆ. ಭಾರತವೆಂದರೆ ಸ್ಪಿನ್ ಭೂಮಿ. ನಿಮ್ಮ ರೋದನೆ ಮತ್ತು ನರಳುವಿಕೆಯನ್ನು ನಿಲ್ಲಿಸಿ. ಭಾರತದ ಸ್ಪಿನ್ ಪಿಚ್​ನಲ್ಲಿ ಹೇಗೆ ಆಡಬೇಕು ಅನ್ನೋದನ್ನ ಅರ್ಥ ಮಾಡಿಕೊಳ್ಳಿ.

ರೋದಿಸುವದನ್ನ ನಿಲ್ಲಿಸಿ..! ಪಿಚ್​ ಬಗ್ಗೆ ತಕರಾರು ತೆಗೆದಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರ ಬಾಯಿ ಮುಚ್ಚಿಸಿದ ವಿಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್
ವಿವಿಯನ್ ರಿಚರ್ಡ್ಸ್
Follow us on

ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದ ಪಿಚ್​ನಲ್ಲಿ ನಡೆದ ಸ್ಪಿನ್ ಮೋಡಿ, ಕ್ರಿಕೆಟ್ ಜನಕರೆನಿಸಿಕೊಂಡ ಆಂಗ್ಲರ ದಿಕ್ಕು ತಪ್ಪಿಸಿದೆ. ಸೋಲಿನ ಹತಾಶೆಯಲ್ಲಿ ಮೋದಿ ಪಿಚ್ ಸರಿಯಾಗಿಲ್ಲ ಎಂದು ಬಾಯಿ ಬಾಯಿ ಬಡಿದುಕೊಳ್ತಿದ್ದಾರೆ. ಆದ್ರೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರ ಬಾಯಿಗೆ ವಿಂಡೀಸ್ ದಿಗ್ಗಜ ರಿಚರ್ಡ್ಸ್ ಬೀಗ ಹಾಕಿದ್ದಾರೆ. ಅಹಮದಾಬಾದ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯವನ್ನ ಟೀಂ ಇಂಡಿಯಾ, ಕೇವಲ ಎರಡೇ ದಿನದಲ್ಲಿ ಗೆದ್ದು ಬೀಗಿದೆ. ನೆಲಕ್ಕೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಮಾತಿನಂತೆ, ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗರು ಆರೋಪ ಮಾಡುತ್ತಿದ್ದಾರೆ. ಭಾರತ ಕಳಪೆ ಪಿಚ್ ನಿರ್ಮಿಸಿ ಗೆಲುವು ದಾಖಲಿಸಿದೆ ಎಂದು ಕಿಡಿ ಕಾರುತ್ತಿದ್ದಾರೆ.

ಐಸಿಸಿ ಭಾರತ ತಂಡದ ಪಾಯಿಂಟ್ ಕಡಿತಗೊಳಿಸಬೇಕು..
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಆಲಿಸ್ಟರ್ ಕುಕ್ ಮತ್ತು ಮಾಂಟಿ ಪನೇಸರ್, ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದ ಪಿಚ್ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಂಟಿ ಪನೇಸರ್, ಅಹಮದಾಬಾದ್​ನಲ್ಲಿ ನಡೆಯುವ 4ನೇ ಪಂದ್ಯದಲ್ಲೂ, ಭಾರತ ಕಳಪೆ ಪಿಚ್ ನಿರ್ಮಿಸಿದ್ರೆ, ಐಸಿಸಿ ಭಾರತ ತಂಡದ ಪಾಯಿಂಟ್ ಕಡಿತಗೊಳಿಸಬೇಕು ಎಂದಿದ್ದಾರೆ.

ಹೀಗೆ ಇಂಗ್ಲೆಂಡ್ ಕ್ರಿಕೆಟಿಗರು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ರೆ, ವೆಸ್ಟ್ ಇಂಡೀಸ್ ದಿಗ್ಗಜ ಸರ್​ ಐಸಾಕ್  ವಿವಿಯನ್ ರಿಚರ್ಡ್ಸ್ ಸರಿಯಾಗೇ ತಿರುಗೇಟು ನೀಡಿದ್ದಾರೆ. ಸ್ಪಿನ್ ನೆಲದಲ್ಲಿ ತಿರುವು ಪಡೆಯುವಂತಾ ಪಿಚ್​ಗಳಿರುವುದು ಆಶ್ಚರ್ಯ ತರುವಂತ ಸಂಗತಿಯಲ್ಲ. ಇಂಗ್ಲೆಂಡ್‌ನ ಮಾಜಿ ಆಟಗಾರರು ರೋದಿಸುವುದನ್ನ ನಿಲ್ಲಿಸಿ, ತಮ್ಮ ಆಟಗಾರರಿಗೆ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಸೂಚಿಸಬೇಕು ಎಂದಿದ್ದಾರೆ.

ರೋದನೆ ಮತ್ತು ನರಳುವಿಕೆಯನ್ನು ನಿಲ್ಲಿಸಿ..
ಭಾರತದಲ್ಲಿ ಆಡಲು ತೆರಳುವಾಗ ಈ ರೀತಿಯ ಸ್ಪಿನ್ ಸ್ನೇಹಿ ಪಿಚ್‌ಗಳು ನಿರೀಕ್ಷಿತವಾಗಿರುತ್ತವೆ. ಭಾರತವೆಂದರೆ ಸ್ಪಿನ್ ಭೂಮಿ. ನಿಮ್ಮ ರೋದನೆ ಮತ್ತು ನರಳುವಿಕೆಯನ್ನು ನಿಲ್ಲಿಸಿ. ಭಾರತದ ಸ್ಪಿನ್ ಪಿಚ್​ನಲ್ಲಿ ಹೇಗೆ ಆಡಬೇಕು ಅನ್ನೋದನ್ನ ಅರ್ಥ ಮಾಡಿಕೊಳ್ಳಿ.
-ವಿವಿಯನ್ ರಿಚರ್ಡ್ಸ್, ದಿಗ್ಗಜ ಕ್ರಿಕೆಟಿಗ

ರಿಚರ್ಡ್ಸ್ ಹೇಳಿರೋದು ಅರ್ಥಗರ್ಭಿತವಾಗಿದೆ. ಅದೇ ಟೀಂ ಇಂಡಿಯಾ ಇಂಗ್ಲೆಂಡ್​ಗೆ ಹೋದ್ರೆ, ಫಾಸ್ಟ್ ಪಿಚ್​ಗಳನ್ನ ಮಾಡಿ ಗೆದ್ದು ಬೀಗ್ತಾರೆ. ಆದ್ರೆ ಈ ಬಗ್ಗೆ ಟೀಂ ಇಂಡಿಯಾ ಆಟಗಾರರಾಗಲಿ, ಮಾಜಿ ಕ್ರಿಕೆಟಿಗರಾಗಲಿ ಪಿಚ್ ಸರಿಯಿಲ್ಲ ಅಂತಾ ಕುಂಟು ನೆಪ ಹೇಳೋದಿಲ್ಲ. ಆದ್ರೆ ಇಂಗ್ಲೆಂಡ್ ಕ್ರಿಕೆಟಿಗರ ಈ ವರ್ತನೆ ನೋಡುತ್ತಿರುವ ಅಭಿಮಾನಿಗಳು, ಕುಣಿಯೋಕೆ ಬಾರದವನು ನೆಲ ಡೋಂಕು ಅಂದ ಅಂತಾ ಆಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: India vs England: ಅಂತಿಮ ಟೆಸ್ಟ್​ನಿಂದ ಹೊರಗುಳಿದ ಬುಮ್ರಾ.. ಟಿ20, ಏಕದಿನ ಸರಣಿಯಲ್ಲೂ ಕಣಕ್ಕಿಳಿಯುವುದು ಡೌಟ್

Published On - 3:32 pm, Tue, 2 March 21