ಕ್ರಿಕೆಟಿಗ ಸೂರ್ಯ ಹಾಗೂ ದೇವಿಶಾ ದಂಪತಿಗೆ ಮುದ್ದಾದ ಹೆಣ್ಣು ಮಗು ಜನನ
Suryakumar Yadav and Devisha Shetty welcome baby girl: ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್‌ನಿಂದ ಕ್ರೀಡಾಂಗಣದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ವೈಯಕ್ತಿಕ ಜೀವನದಲ್ಲಿ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅವರ ಪತ್ನಿ ದೇವಿಶಾ ಶೆಟ್ಟಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು SKY ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ SKY ಗೆ ಹೊಸ ಹುಮ್ಮಸ್ಸು ನೀಡಿದೆ.

2026 ರ ಐಪಿಎಲ್‌ನಲ್ಲಿ (IPL 2026) ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಸೂರ್ಯಕುಮಾರ್ ಯಾದವ್ಗೆ (Suryakumar Yadav) ಈ ಸೀಸನ್ ಅಂದುಕೊಂಡಂತೆ ನಡೆದಿಲ್ಲ. ಈ ಆವೃತ್ತಿಯಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಸೂರ್ಯಕುಮಾರ್ ರನ್ ಬರ ಎದುರಿಸುತ್ತಿದ್ದಾರೆ. ಹೀಗಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ಸೂರ್ಯಕುಮಾರ್ಗೆ ವೈಯಕ್ತಿಕ ಬದುಕಿನಲ್ಲಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅವರ ಮಡದಿ ದೇವಿಶಾ ಶೆಟ್ಟಿ (Devisha Shetty) ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಈ ವಿಚಾರವನ್ನು ಸೂರ್ಯಕುಮಾರ್ ಯಾದವ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ 10 ವರ್ಷಗಳ ನಂತರ ಪೋಷಕರಾಗಿದ್ದಾರೆ.
10 ವರ್ಷಗಳ ನಂತರ ಮಗು
ಮೇಲೆ ಹೇಳಿದಂತೆ ಸೂರ್ಯಕುಮಾರ್ ಹಾಗೂ ದೇವಿಶಾ 2016 ರಲ್ಲಿ ವಿವಾಹವಾಗಿದ್ದರು. ಅಂದರೆ ಸೂರ್ಯ ಟೀಂ ಇಂಡಿಯಾ ಪರ ಆಡುವ ಮೊದಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಾಲೇಜಿನಲ್ಲಿ ಪ್ರಾರಂಭವಾದ ಇವರಿಬ್ಬರ ಪ್ರೇಮ ಕಥೆ ಸಾಕಷ್ಟು ದಿನಗಳವರೆಗೆ ಮುಂದುವರದಿತ್ತು. ದೀರ್ಘಕಾಲ ಡೇಟಿಂಗ್ ಮಾಡಿದ್ದ ಈ ಜೋಡಿ ಜುಲೈ 7, 2016 ರಂದು ವಿವಾಹವಾಗಿದ್ದರು. ಈಗ, 10 ವರ್ಷಗಳ ದಾಂಪತ್ಯದ ನಂತರ ಮೊದಲ ಮಗುವಿಗೆ ಪೋಷಕರಾಗಿದ್ದಾರೆ.
View this post on Instagram
ಕರ್ನಾಟಕದ ಅಳಿಯ ಸೂರ್ಯ
ಸೂರ್ಯಕುಮಾರ್ ಯಾದವ್ಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಸೂರ್ಯ ಅವರ ಮಡದಿ ದೇವಿಶಾ ಶೆಟ್ಟಿ ಕರ್ನಾಟಕದ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಲದವರು. ಇವರ ಕುಟುಂಬ ಸದ್ಯ ಮುಂಬೈನಲ್ಲಿ ವಾಸವಾಗಿದೆ. ಈ ದಂಪತಿಗಳಿಗೆ ಕಾಪು ಮಾರಿಯಮ್ಮ ಆರಾಧ್ಯ ದೈವವಾಗಿದ್ದು, ಆಗಾಗ್ಗೆ ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ಈ ದೇವಾಲಕ್ಕೆ ಭೇಟಿ ನೀಡಿದ್ದರು.
ಐಪಿಎಲ್‌ನಲ್ಲಿ ಸೂರ್ಯ ಪ್ರದರ್ಶನ
2026 ರ ಐಪಿಎಲ್‌ನಲ್ಲಿ ಸೂರ್ಯ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಆವೃತ್ತಿಯಲ್ಲಿ ಅವರು ಇಲ್ಲಿಯವರೆಗೆ ಕೇವಲ ಒಂದು ಅರ್ಧಶತಕವನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ 717 ರನ್ ಬಾರಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಸಂಚಲನ ಮೂಡಿಸಿದ್ದ ಸೂರ್ಯ, ಅತಿ ಹೆಚ್ಚು ರನ್ ಗಳಿಸಿದ್ದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೆ ಅಂದಿನಿಂದ, ಸೂರ್ಯ ಅವರ ಬ್ಯಾಟ್ ಸದ್ದು ಮಾಡಿಲ್ಲ. ಟೀಂ ಇಂಡಿಯಾ ಪರ ಸಪ್ಪೆ ಪ್ರದರ್ಶನ ನೀಡಿರುವ ಸೂರ್ಯ, ಈಗ ಐಪಿಎಲ್ನಲ್ಲೂ ರನ್ ಬರ ಎದುರಿಸುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 pm, Thu, 7 May 26
