ಸೆರ್ಬಿಯಾದ ಟೆನಿಸ್ ಲೆಜೆಂಡ್ ನೊವಾಕ್ ಜೊಕೊವಿಕ್ (Novak Djokovic) ವರ್ಷದ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್‌ನಲ್ಲಿ (US Open) ಆಡುವ ಅವಕಾಶ ಕಳೆದುಕೊಂಡಿದ್ದಾರೆ. ವಾಸ್ತವವಾಗಿ ನೊವಾಕ್ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳದೆ ಇರುವುದೇ ಈ ಅವಕಾಶ ಕೈತಪ್ಪಲು ಕಾರಣವಾಗಿದೆ. ಕೋವಿಡ್ ಲಸಿಕೆ ಬಗ್ಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವವರಲ್ಲಿ ಜೊಕೊವಿಕ್ ಕೂಡ ಒಬ್ಬರಾಗಿದ್ದು, ಈ ಹಿಂದೆ ಲಸಿಕೆ ಪಡೆಯದಿದ್ದಕ್ಕಾಗಿ ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲೂ (Australian Open) ಅವಕಾಶ ವಂಚಿತರಾಗಿದ್ದರು. ಆದರೆ ಕಾನೂನು ಹೋರಾಟದ ಬಳಿಕ ಅಂತಿಮವಾಗಿ ಅವರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು.
ಹಿಂದೆ ಸರಿದ ಜೊಕೊವಿಕ್
ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಆಗಿರುವ US ಓಪನ್ ಆಗಸ್ಟ್ 29 ರಿಂದ ನ್ಯೂಯಾರ್ಕ್‌ನಲ್ಲಿ ಆರಂಭವಾಗಲಿದೆ. ಪಂದ್ಯಾವಳಿಯ ಡ್ರಾವನ್ನು ಆಗಸ್ಟ್ 25 ಗುರುವಾರದಂದು ನಡೆಸಬೇಕಿತ್ತು. ಆದರೆ ಅದಕ್ಕೂ ಮೊದಲು, ಮಾಜಿ ವಿಶ್ವದ ನಂಬರ್ ಒನ್ ಆಟಗಾರ ಜೊಕೊವಿಕ್ ಯುಎಸ್ ಪಂದ್ಯಾವಳಿಯಿಂದ ಹಿಂದೆ ಸರಿಯುವ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. ಜೊಕೊವಿಕ್ ಇದನ್ನು ಟ್ವೀಟ್‌ನಲ್ಲಿ ಪ್ರಕಟಿಸಿದ್ದು, ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಾರಿ ನಾನು ಯುಎಸ್ ಓಪನ್‌ಗಾಗಿ ನ್ಯೂಯಾರ್ಕ್‌ಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ದುಃಖಿತನಾಗಿದ್ದೇನೆ. ‘ನೋಲ್ಫಾಮ್’ (ಜೊಕೊವಿಕ್ ಅಭಿಮಾನಿಗಳು), ಪ್ರೀತಿ ಮತ್ತು ಬೆಂಬಲದ ಸಂದೇಶಗಳಿಗೆ ಧನ್ಯವಾದಗಳು. ನನ್ನ ಸಹ ಆಟಗಾರರಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
Sadly, I will not be able to travel to NY this time for US Open. Thank you #NoleFam for your messages of love and support. ❤️ Good luck to my fellow players! I’ll keep in good shape and positive spirit and wait for an opportunity to compete again. ?? See you soon tennis world! ??
— Novak Djokovic (@DjokerNole) August 25, 2022
ಅಮೆರಿಕದಲ್ಲಿ ನಿಯಮಗಳೇನು?
ಜೊಕೊವಿಕ್ ಅವರು ಲಸಿಕೆಗೆ ಸಂಬಂಧಿಸಿದಂತೆ ಯುಎಸ್ ಸರ್ಕಾರದ ನಿಯಮಗಳನ್ನು ಅನುಸರಿಸುತ್ತಾರೆ ಎಂದು ಅಮೆರಿಕನ್ ಟೆನಿಸ್ ಅಸೋಸಿಯೇಷನ್ ಸ್ಪಷ್ಟಪಡಿಸಿತ್ತು. ಆದರೆ ಟೆನಿಸ್ ಅಸೋಸಿಯೇಷನ್ ಹೇಳಿಕೆಯನ್ನು ಒಪ್ಪದ ಜೊಕೊವಿಕ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಅಮೆರಿಕದ ಕೋವಿಡ್ ನಿಯಮಗಳ ಪ್ರಕಾರ, ಯಾವುದೇ ವಿದೇಶಿಗರು ಲಸಿಕೆ ಇಲ್ಲದೆ ಅಮೆರಿಕಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಜೊಕೊವಿಕ್ ಲಸಿಕೆಗೆ ನಿರಂತರ ವಿರೋಧ ವ್ಯಕ್ತಪಡಿಸಿದ್ದರಿಂದ, ಅವರು ಈ ಪಂದ್ಯಾವಳಿಯಿಂದ ಹೊರಗುಳಿಯುವುದು ಖಚಿತವಾಗಿತ್ತು. ಇದಕ್ಕೂ ಮುನ್ನ ಅವರು ಯುಎಸ್‌ನಲ್ಲಿ ನಡೆದ ಸಿನ್ಸಿನಾಟಿ ಓಪನ್‌ನಲ್ಲೂ ಆಡಲು ಸಾಧ್ಯವಾಗಲಿಲ್ಲ.
ಅವಕಾಶ ತಪ್ಪಿಸಿಕೊಂಡ ಜೊಕೊವಿಕ್
21 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ಜೊಕೊವಿಕ್, ಸದ್ಯಕ್ಕೆ ರಾಫೆಲ್ ನಡಾಲ್ ಅವರ ದಾಖಲೆಯ 22 ಗ್ರ್ಯಾಂಡ್ ಸ್ಲಾಮ್ ಪುರುಷರ ಸಿಂಗಲ್ಸ್ ಪ್ರಶಸ್ತಿಗಳನ್ನು ಸರಿಗಟ್ಟುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಜೊಕೊವಿಕ್ ಕಳೆದ ತಿಂಗಳು ವಿಂಬಲ್ಡನ್‌ನಲ್ಲಿ 21ನೇ ಗ್ರ್ಯಾನ್‌ಸ್ಲಾಮ್ ಗೆದ್ದಿದ್ದರು. ಅವರು ತಮ್ಮ ಹೆಸರಿನಲ್ಲಿ 3 ಯುಎಸ್ ಓಪನ್ ಪ್ರಶಸ್ತಿಗಳನ್ನು ಹೊಂದಿದ್ದು, ಕಳೆದ ವರ್ಷ, ಯುಎಸ್ ಓಪನ್‌ನ ಫೈನಲ್‌ನಲ್ಲಿ ಜೊಕೊವಿಕ್ ಡೇನಿಯಲ್ ಮೆಡ್ವೆಡೆವ್ ವಿರುದ್ಧ ಸೋತಿದ್ದರು.
Published On - 8:43 pm, Thu, 25 August 22