ಟೊಕಿಯೊ ಒಲಂಪಿಕ್ಸ್: 62 ಕೆಜಿ ವಿಭಾಗದ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿಯ 16ನೇ ಘಟ್ಟದ ಪಂದ್ಯದಲ್ಲಿ ಭಾರತದ ಸೋನಮ್ ಮಲಿಕ್ ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ವಿರುದ್ಧ ವೀರೋಚಿತ ಸೋಲು ಕಂಡಿದ್ದಾರೆ. ಕೊನೆಯ ಹದಿನೈದು ಸೆಕೆಂಡ್ಗಳವರೆಗೂ 2-0 ಇಂದ ಮುನ್ನಡೆ ಕಾಯ್ದುಕೊಂಡಿದ್ದ ಸೋನಮ್, ಆಗ ಖುರೆಲ್ಖು ಅವರಿಗೆ ಎರಡು ಅಂಕ ಬಿಟ್ಟುಕೊಟ್ಟರು. ಪಂದ್ಯ ಮುಗಿಯುವಾಗ ಈರ್ವರೂ 2-2ರಿಂದ ಸಮಬಲ ಹೊಂದಿದ್ದರು. ಇಂತಹ ಸಂದರ್ಭದಲ್ಲಿ ಕುಸ್ತಿಯಲ್ಲಿ ಪಾಲಿಸಲಾಗುವ, ಯಾರು ಒಂದೇ ಮೂವ್ನಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೆ- ಅವರೇ ಜಯಶಾಲಿ ಎಂಬ ನಿಯಮದ ಆಧಾರದಲ್ಲಿ ಎರಡು ಅಂಕಗಳನ್ನು ಒಟ್ಟಿಗೇ ಪಡೆದಿದ್ದ ಖುರೆಲ್ಖು ವಿಜಯಶಾಲಿಯಾದರು.
ಈ ಪಂದ್ಯದ ಮೂಲಕ ಟೊಕಿಯೊ ಒಲಂಪಿಕ್ಸ್ನಲ್ಲಿ ಭಾರತದ ರೆಸ್ಲಿಂಗ್ ಪಯಣ ಆರಂಭವಾಗಿದೆ. ಆದರೆ, ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಹಿನ್ನೆಡೆಯಿಂದ ಕುಸ್ತಿ ಪಯಣ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಮಂಗೋಲಿಯಾದ ಖುರೆಲ್ಖು ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದು, ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಕೂಡ ಇಂದೇ ನಡೆಯಲಿದೆ. ಸೋನಮ್ ಪಾಲಿಗೆ ಇರುವ ಕೊನೆಯ ಅವಕಾಶವೆಂದರೆ,ಖುರೆಲ್ಖು ಫೈನಲ್ ಪ್ರವೇಶಿಸಬೇಕು. ಆಗ ರೆಫಿಕೇಜ್ನಲ್ಲಿ(repechage) ಸ್ಪರ್ಧಿಸಲು ಸೋನಮ್ಗೆ ಅವಕಾಶ ದೊರೆಯಲಿದೆ.
ರೆಪಿಕೇಜ್ ಎಂದರೇನು?
ರೆಪಿಕೇಜ್ ರೌಂಡ್ ಎನ್ನುವುದು ಕುಸ್ತಿಯಲ್ಲಿ ಬಳಸುವ ನಿಯಮವಾಗಿದ್ದು, ಒಂದು ರೀತಿಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಇದ್ದಂತೆ. ಅತೀ ಸಣ್ಣ ಅಂತರದಿಂದ ಸೋತ ಸ್ಪರ್ಧಿಗಳಿಗೆ ಈ ಅವಕಾಶವಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಖುರೆಲ್ಖು ಅವರು ಫೈನಲ್ ಪ್ರವೇಶಿಸಿದರೆ, ಸೋನಮ್ಗೆ ಅವಕಾಶ ದೊರೆಯಲಿದೆ. ಆದರೆ ಖುರೆಲ್ಖು ಫೈನಲ್ ಪ್ರವೇಶಿಸುವ ಸಾಧ್ಯತೆ ಕ್ಷೀಣ ಎನ್ನುತ್ತಾರೆ ಕ್ರೀಡಾ ತಜ್ಞರು.
ಇದನ್ನೂ ಓದಿ:
Tokyo Olympics: ಭಾರತ ಪುರುಷರ ಹಾಕಿ ತಂಡದ ಫೈನಲ್ ಕನಸು ಭಗ್ನ; ಇನ್ನು ಕಂಚಿಗಾಗಿ ಹೋರಾಟ
(Indian women Free style wrestler Sonam Malik defeated by Bolortuya Khurelkhuu)
Published On - 10:13 am, Tue, 3 August 21