Tokyo Olympics: ರಿಂಗ್​ನಲ್ಲಿ ಭಾರತದ ಬಾಕ್ಸರ್​ಗಳಿಗೆ ತೀವ್ರತರವಾಗಿ ಏಟು ಬಿದ್ದರೂ ಉಪಚರಿಸಲು ಸ್ಥಳದಲ್ಲಿ ವೈದ್ಯರಿಲ್ಲ!

| Updated By: shivaprasad.hs

Updated on: Jul 30, 2021 | 4:57 PM

Indian Boxing Team: ಭಾರತದ ಬಾಕ್ಸರ್​ಗಳಿಗೆ ಬಾಕ್ಸಿಂಗ್ ರಿಂಗ್​ನಲ್ಲಿ ತೀವ್ರತರವಾದ ಗಾಯಗಳಾದರೂ ಉಪಚರಿಸಲು ಸ್ಥಳದಲ್ಲಿ ವೈದ್ಯರಿಲ್ಲ. ಕಾರಣ, ಆಯೋಜಕರು ವೈದ್ಯರಿಗೆ ನೀಡಿರುವ ಅನುಮತಿ ಕೇವಲ ಅಭ್ಯಾಸ ಪಂದ್ಯಗಳಿಗೆ ಮಾತ್ರ ಉಪಚರಿಸಲು ಸಾಧ್ಯವಾಗುವಂತಿದೆಯೇ ಹೊರತು, ಸ್ಪರ್ಧೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ.

Tokyo Olympics: ರಿಂಗ್​ನಲ್ಲಿ ಭಾರತದ ಬಾಕ್ಸರ್​ಗಳಿಗೆ ತೀವ್ರತರವಾಗಿ ಏಟು ಬಿದ್ದರೂ ಉಪಚರಿಸಲು ಸ್ಥಳದಲ್ಲಿ ವೈದ್ಯರಿಲ್ಲ!
ಜಮೈಕಾದ ಆರ್.ಬ್ರೌನ್ ವಿರುದ್ಧ ಸತೀಶ್ ಕುಮಾರ್ ಸೆಣಸಾಟದ ಚಿತ್ರ (ಕೃಪೆ: Reuters)
Follow us on

ಟೊಕಿಯೊ ಒಲಂಪಿಕ್ಸ್: ಭಾರತದ ಭರವಸೆಯ ಸೂಪರ್ ಹೆವಿವೇಟ್ ಬಾಕ್ಸರ್ ಸತೀಶ್ ಕುಮಾರ್ ಗುರುವಾರ 91+ ಕೆಜಿ ವಿಭಾಗದಲ್ಲಿ ಜಮೈಕಾದ ಬಾಕ್ಸರ್ ಜೊತೆ ಸೆಣಸಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರ ಕಣ್ಣಿನ ಮೇಲ್ಭಾಗಕ್ಕೆ ಗಂಭೀರವಾದ ಪೆಟ್ಟು ಬಿತ್ತು. ಸತೀಶ್ ಅವರಿಗೆ ಪಂದ್ಯದ ನಿರ್ದೇಶಕ ಸಾಂಟಿಯಾಗೋ ನೈವಾ ಮತ್ತು ಭಾರತದ ಕೋಚ್ ಸಿಎ ಕುಟ್ಟಪ್ಪ ಅವರು ಸ್ಥಳದಲ್ಲೇ ವೈದ್ಯಕೀಯ ಪ್ರಥಮ ಚಿಕಿತ್ಸೆ ಪಡೆಯಲು ಅನುಮತಿಸಿದರು. ಆದರೆ ದುರಂತವೆಂದರೆ, ಸತೀಶ್ ಅವರಿಗೆ ಆರೈಕೆ ಮಾಡಿ ಚಿಕಿತ್ಸೆ ನೀಡಲು ಅಲ್ಲಿ ವೈದ್ಯರಾರೂ ಪಂದ್ಯ ನಡೆಯುವ ಸ್ಥಳದಲ್ಲಿರಲೇ ಇಲ್ಲ! 

ಇದೇ ರೀತಿಯ ಮತ್ತೊಂದು ಘಟನೆ ಕಳೆದ ಶನಿವಾರ ವರದಿಯಾಗಿತ್ತು. ಭಾರತದ ವಿಕಾಸ್ ಕೃಷ್ಣನ್ ಜಪಾನ್​ನ ಮೆನ್ಸಾಹ್ ಒಕಾಜವಾ ಅವರೊಂದಿಗೆ ಸೆಣಸುವಾಗ ಎಡಗಣ್ಣಿನ ಕೆಳಭಾಗಕ್ಕೆ ತೀವ್ರತರವಾದ ಏಟು ಬಿದ್ದಿತ್ತು. ಆಗಲೂ ಚಿಕಿತ್ಸೆ ಪಡೆಯಲು ಅವಕಾಶವಿತ್ತು. ಆದರೆ, ವೈದ್ಯರು ಸ್ಥಳದಲ್ಲಿರಲಿಲ್ಲ.

ಈ ಘಟನೆಗಳಿಂದ ಸ್ಪಷ್ಟವಾದ ಒಂದು ಅಂಶವೆಂದರೆ ಭಾರತ ತಂಡದ ಒಂಬತ್ತು ಮಂದಿಯ ಬಾಕ್ಸಿಂಗ್ ತಂಡದಲ್ಲಿ ಅಧಿಕೃತವಾಗಿ ಡಾಕ್ಟರ್ ಇಲ್ಲವೇ ಇಲ್ಲ! ವೈದ್ಯರ ಸೌಲಭ್ಯವಿಲ್ಲದೇ ಭಾರತ ತಂಡದ ಬಾಕ್ಸರ್​ಗಳು ಬಾಕ್ಸಿಂಗ್ ರಿಂಗ್​ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಹಾಗಾದರೆ ಭಾರತದಿಂದ ಕಳುಹಿಸಲಾದ ಡಾಕ್ಟರ್ ಕರಣ್​ಜೀತ್ ಸಿಂಗ್ ಎಲ್ಲಿದ್ದಾರೆ ಎಂಬ ಪ್ರಶ್ನೆ ಬಂದರೆ ಅದಕ್ಕೂ ಉತ್ತರವಿದೆ. ಒಲಂಪಿಕ್ ಗ್ರಾಮದ ಕೊಠಡಿಯೊಳಗೆ ಅವರು ವಿಶ್ರಮಿಸುತ್ತಿದ್ದಾರೆ. ಇದಕ್ಕೆ ಕಾರಣ, ಒಲಂಪಿಕ್ ಅಧಿಕಾರಿಗಳ ಬೇಜವಾಬ್ದಾರಿ!

ಭಾರತ ತಂಡದಲ್ಲಿ ಮುಖ್ಯವಾಗಿ ಇರಲೇ ಬೇಕಾದ ಪಟ್ಟಿಯಲ್ಲಿ ವೈದ್ಯರ ಹೆಸರನ್ನು ಸೇರಿಸದೇ ‘ಹೆಚ್ಚುವರಿ ಅಧಿಕಾರಿ’ ಎಂಬ ಜವಾಬ್ದಾರಿಯೊಂದಿಗೆ ವೈದ್ಯ ಕರಣ್​ಜೀತ್ ಸಿಂಗ್ ಅವರ ಹೆಸರನ್ನು ನಮೂದಿಸಲಾಗಿದೆ. ಆದ ಕಾರಣ, ಅನಿವಾರ್ಯ ಪಟ್ಟಿಯಿಂದ ಹೊರಗಿರುವ ಅವರಿಗೆ ಕೊರೊನಾ ಮುನ್ನೆಚ್ಚರಿಕೆಯ ಕಾರಣ ಬಾಕ್ಸಿಂಗ್ ನಡೆಯುವ ಸ್ಥಳಕ್ಕೆ ಪ್ರವೇಶವೇ ಇಲ್ಲ. ಅವರೇನಿದ್ದರೂ ಒಲಂಪಿಕ್ ಗ್ರಾಮದಲ್ಲಿ ಮಾತ್ರ ಕ್ರೀಡಾಪಟುಗಳಿಗೆ ಚಿಕಿತ್ಸೆ ನೀಡಬೇಕು.

ಭಾರತದ ಸತೀಶ್ ಕುಮಾರ್ ಅವರ ಆಟದ ವೈಖರಿ (ಕೃಪೆ: ಪಿಟಿಐ)

ಟೊಕಿಯೊ ಒಲಂಪಿಕ್ಸ್​ನ ಸಂಯೋಜಕರು ಕರಣ್​ಜೀತ್ ಸಿಂಗ್ ಅವರಿಗೆ ನೀಡಲಾಗಿರುವ ಪಿ-ಟ್ಯಾಪ್ (P-TAP: Personnel Training Assist Programme) ಬ್ಯಾಡ್ಜ್​ನಲ್ಲಿ ವೈದ್ಯರಿಗೆ ಕೇವಲ ಬಾಕ್ಸರ್​ಗಳ ಟ್ರೈನಿಂಗ್ ನಡೆಯುವ ಸ್ಥಳಗಳಿಗೆ ಹೋಗಲು ಮಾತ್ರ ಅನುಮತಿಯಿದೆ. ಇದೇ ರೀತಿ ಮತ್ತೊಬ್ಬ ಫಿಸಿಯೊ ಆಯುಷ್ ಏಖಾಂಡೆ ಅವರಿಗೂ ಸ್ಪರ್ಧೆ ನಡೆಯುವ ಸ್ಥಳಗಳಿಗೆ ಹೋಗಲು ಅನುಮತಿ ಇಲ್ಲ. ಅವರೇನಿದ್ದರೂ ಅಭ್ಯಾಸದ ಸಂದರ್ಭದಲ್ಲಿ ಮಾತ್ರ ಆಟಗಾರರನ್ನು ಉಪಚರಿಸಬೇಕು. ಈ ನಿರ್ಧಾರಕ್ಕೆ ಭಾರತದ ಸ್ಪರ್ಧಿಗಳು ಬೆಲೆ ತೆರುತ್ತಿದ್ದು ಆಯೋಜಕರ ಈ ನಿರ್ಧಾರವನ್ನು ಎಲ್ಲರೂ ಟೀಕಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Tokyo Olympics: ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್​ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಭರ್ಜರಿ ಗೆಲುವು

ಇದನ್ನೂ ಓದಿ: Tokyo Olympics: ವಿಶ್ವದ ನಂ.1 ಆಟಗಾರ ಜೊಕೊವಿಕ್ ಚಿನ್ನ ಗೆಲ್ಲುವ ಕನಸು ಭಗ್ನ: ನೊವಾಕ್ ಮಣಿಸಿ ಫೈನಲ್​ ಪ್ರವೇಶಿಸಿದ ಅಲೆಕ್ಸಾಂಡರ್ ಜ್ವೆರೆವ್

(There is no team doctors to attend indian boxers injuries in the ring at Tokyo Olympics)

Published On - 4:53 pm, Fri, 30 July 21