Tokyo Olympics: ಒಲಿಂಪಿಕ್ಸ್ ಹಾಕಿ ಇತಿಹಾಸದಲ್ಲಿ ಚೊಚ್ಚಲ ಪದಕ ಗೆಲ್ಲುವ ಭಾರತೀಯ ಮಹಿಳೆಯರ ಕನಸು ಭಗ್ನ
india vs great britain: ಪಂದ್ಯದ ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಭಾರತ ಮೊದಲಾರ್ಧದ ವೇಳೆ 3-2 ಗೋಲುಗಳ ಅಂತರದ ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್ ಆರಂಭವಾದ ಐದನೇ ನಿಮಿಷದಲ್ಲಿ ಗ್ರೇಟ್ ಬ್ರಿಟನ್ ಸಮಬಲ ಸಾಧಿಸಿತು. ಇಲ್ಲಿಂದ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು.
ಒಲಿಂಪಿಕ್ಸ್ (Olympics) ಇತಿಹಾಸದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ (India Womens Hockey Team) ಚೊಚ್ಚಲ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಕಂಚಿನ ಪದಕ್ಕಾಗಿ ಗ್ರೇಟ್ ಬ್ರಿಟನ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರಾಣಿ ಪಡೆ 3-4 ಗೋಲುಗಳ ಅಂತರದಲ್ಲಿ ಸೋಲು ಕಂಡಿದ್ದು, ಭಾರತಕ್ಕೆ ಆರನೇ ಪದಕ ಕೈತಪ್ಪಿದೆ. ಈ ಮೂಲಕ ಒಲಿಂಪಿಕ್ ಇತಿಹಾಸದಲ್ಲಿ ಚೊಚ್ಚಲ ಪದಕಕ್ಕೆ ಕೊರಳೊಡ್ಡುವ ಭಾರತ ಮಹಿಳಾ ಹಾಕಿ ತಂಡದ ಆಸೆ ಈಡೇರಲಿಲ್ಲ.
ಪಂದ್ಯ ಆರಂಭವಾದ ಮೊದಲ ಕ್ವಾರ್ಟರ್ನಲ್ಲಿ ಉಭಯ ತಂಡಗಳಿಗೆ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ, ಎರಡನೇ ಕ್ವಾರ್ಟರ್ನ ಆರಂಭದಲ್ಲಿ ಭಾರತೀಯರು ಮಾಡಿದ ತಪ್ಪಿನಿಂದ ಬ್ರಿಟನ್ ಖಾತೆ ತೆರೆಯಿತು. ಇದರ ಬೆನ್ನಲ್ಲೆ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಇದರ ನಡುವೆ ಬ್ರಿಟನ್ ಮತ್ತೊಂದು ಗೋಲು ದಾಖಲಿಸಿ 2-0 ಮುನ್ನಡೆ ಸಾಧಿಸಿತು. ಎರಡನೇ ಕ್ವಾರ್ಟರ್ ಅಂತ್ಯದ ವೇಳೆಗೆ ಭರ್ಜರಿ ಕಮ್ಬ್ಯಾಕ್ ಮಾಡಿದ ಭಾರತ ಪೆನಾಲ್ಟಿ ಕಾರ್ನರ್ನಲ್ಲಿ ಗುರುಜಿತ್ ಕೌರ್ ಎರಡು ಬಾರಿ ಚೆಂಡನ್ನು ನೆಟ್ನೊಳಗೆ ಅಟ್ಟಿ ಸಮಬಲ ಸಾಧಿಸಿದರು. ಮತ್ತೊಮ್ಮೆ ವಂದನಾ ಅವರು ತಮ್ಮ ಚಾಣಕ್ಷತನದಿಂದ ಗೋಲು ದಾಖಲಿಸಿ 3-2 ರ ಮುನ್ನಡೆ ಸಾಧಿಸುವಂತೆ ಮಾಡಿದರು.
What an inspiring first half this has been! ?
Time to go a step higher in the second period. ?#GBRvIND #HaiTayyar #IndiaKaGame #Tokyo2020 #TeamIndia #TokyoTogether #StrongerTogether #HockeyInvites #WeAreTeamIndia #hockeybelgium pic.twitter.com/GHVEwqbia9
— Hockey India (@TheHockeyIndia) August 6, 2021
ಹೀಗೆ ಪಂದ್ಯದ ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಭಾರತ ಮೊದಲಾರ್ಧದ ವೇಳೆ 3-2 ಗೋಲುಗಳ ಅಂತರದ ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್ ಆರಂಭವಾದ ಐದನೇ ನಿಮಿಷದಲ್ಲಿ ಗ್ರೇಟ್ ಬ್ರಿಟನ್ ಸಮಬಲ ಸಾಧಿಸಿತು. ಇಲ್ಲಿಂದ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಅಂತಿಮ ನಾಲ್ಕನೇ ಕ್ವಾರ್ಟರ್ ಆರಂಭದಲ್ಲಿ ಬ್ರಿಟನ್ ಪೆನಾಲ್ಟಿ ಕಾರ್ನರ್ ಮೂಲಕ ಮುನ್ನಡೆ ಸಾಧಿಸಿತು. ಬಳಿಕ ಭಾರತಕ್ಕೆ ಕಮ್ಬ್ಯಾಕ್ ಮಾಡಲು ಸಾಧ್ಯವಾಗಲೇಯಿಲ್ಲ. ಅಂತಿಮವಾಗಿ ರಾಣಿ ಪಡೆ ಸೋಲುಕಂಡಿತು.
ಇದಕ್ಕೂ ಮುನ್ನ ಪ್ರಥಮ ಬಾರಿಗೆ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದ್ದ ಭಾರತೀಯ ಮಹಿಳಾ ಹಾಕಿ ತಂಡ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಅರ್ಜೇಂಟಿನಾ ವಿರುದ್ಧ ಸೋಲು ಕಂಡಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಮುನ್ನಡೆಯನ್ನು ಸಾಧಿಸಿದತಾದರೂ ಬಳಿಕ ಎದುರಾಳಿಗೆ ಎರಡು ಗೋಲು ಬಿಟ್ಟುಕೊಡುವ ಮೂಲಕ ಹಿನ್ನೆಡೆಯನ್ನು ಅನುಭವಿಸಿತು. 1-2 ಅಂತರದಿಂದ ಸೋಲು ಅನುಭವಿಸಿ ಫೈನಲ್ ಪ್ರವೇಶಿಸಲು ವಿಫಲವಾಯಿತು.
ಆದರೆ ಕಂಚಿನ ಪದಕ ಗೆಲ್ಲುವ ಅವಕಾಶ ಭಾರತೀಯ ಮಹಿಳಾ ತಂಡಕ್ಕಿತ್ತು. ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿ ಈ ಪದಕ ಮುಡಿಗೇರಿಸಿಕೊಳ್ಳಲು ಭಾರತೀಯ ತಂಡ ಹವಣಿಸುತ್ತಿತ್ತು. ಆದರೆ, ಮೂರನೇ ಸ್ಥಾನದಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಗ್ರೇಟ್ ಬ್ರಿಟನ್ ವಿರುದ್ಧ ಸೋತು ಟೋಕಿಯೋ ಒಲಿಂಪಿಕ್ಸ್ನಲ್ಲಿ ಅಭಿಯಾನ ಅಂತ್ಯಗೊಳಿಸಿದೆ.
ಪುರುಷರಿಂದ ಐತಿಹಾಸಿಕ ಸಾಧನೆ: ಕಳೆದ 41 ವರ್ಷಗಳಲ್ಲಿ ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ವಿಫಲವಾಗಿದ್ದ ಭಾರತೀಯ ಪುರುಷರ ಹಾಕಿ ತಂಡ ಈ ಬಾರಿ ಐತಿಹಾಸಿಕ ಸಾಧನೆ ಮಾಡಿತು. ಜರ್ಮನಿ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಸೆಣೆಸಾಟದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಭರ್ಜರಿ ಗೆಲುವು ಸಾಧಿಸಿತು. ಜರ್ಮನಿಯ ಆಕ್ರಮಣಕಾರಿ ಆಟಕ್ಕೆ ತಕ್ಕ ಉತ್ತರ ನೀಡಿದ ಮನ್ಪ್ರೀತ್ ಪಡೆ 5-4 ಗೋಲುಗಳ ಅಂತರದಿಂದ ಗೆದ್ದು 4 ದಶಕಗಳ ಬಳಿಕ ಕಂಚಿನ ಪದಕ ತನ್ನದಾಗಿಸಿದೆ. ಈ ಗೆಲುವು ಭಾರತೀಯ ಹಾಕಿಯ ಪುನರುಜ್ಜೀವನಕ್ಕೆ ವೇದಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.