ಟೋಕಿಯೋ ಒಲಿಂಪಿಕ್ಸ್ (Tokyo Olympics) 2020 ರಲ್ಲಿ ಭಾರತ ಪುರುಷರ ಹಾಕಿ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಕಂಚಿನ ಪದಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮನ್ಪ್ರೀತ್ ಪಡೆ 4-5 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ್ದು, ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಿದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಭಾರತ ಚೊಚ್ಚಲ ಪದಕಕ್ಕೆ ಕೊರಳೊಡ್ಡಿದೆ.
ಸಾಕಷ್ಟು ರೋಚಕತೆಯಿಂದ ಕೂಡಿದ್ದ ಕದನದಲ್ಲಿ ಪಂದ್ಯ ಆರಂಭವಾದ ಕೆಲವೇ ನಿಮಿಷದಲ್ಲಿ ಜರ್ಮನಿ ಖಾತೆ ತೆರೆಯಿತು. ಮುಂದಿನ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸುವ ಅವಕಾಶ ಇತ್ತಾದರು ಸ್ವಲ್ಪದರಲ್ಲೇ ಕೈಚೆಲ್ಲಿತು. ಈ ಮೂಲಕ ಮೊದಲ ಕ್ವಾರ್ಟರ್ನಲ್ಲಿ ಜರ್ಮನಿ 1-0 ಮುನ್ನಡೆ ಸಾಧಿಸಿತು.
#IND has done it!
They overcome a two-goal deficit against #GER to win their first Olympic #Hockey medal since 1980!@fih_hockey @WeAreTeamIndia pic.twitter.com/WAj5vVvHBu
— Olympics (@Olympics) August 5, 2021
ಎರಡನೇ ಕ್ವಾರ್ಟರ್ನ ಆರಂಭದಲ್ಲೇ ಭಾರತ ಕಮ್ಬ್ಯಾಕ್ ಮಾಡಿತು. ಸಿಮ್ರಂಜಿತ್ ಸಿಂಗ್ ಚೆಂಡನ್ನು ನೆಟ್ನೊಳಗೆ ಅಟ್ಟಿ ಮೊದಲ ಗೋಲು ದಾಖಲಿಸಿದರು. ಇದಾದ ಸ್ವಲ್ಪದರಲ್ಲೇ ಜರ್ಮನಿ ಒಂದರ ಹಿಂದೆ ಒಂದರಂತೆ ಸತತ ಎರಡು ಗೋಲು ಬಾರಿಸಿತು. ಈ ಸಂದರ್ಭ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹಾರ್ದಿಕ್ ಸಿಂಗ್ ಅದ್ಭುತವಾಗಿ ಉಪಯೋಗಿಸಿಕೊಂಡು 2ನೇ ಗೋಲು ದಾಖಲಿಸಿದರು. ಇದರ ಬೆನ್ನಲ್ಲೆ ಮತ್ತೊಂದು ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಸಿಡಿಸುವ ಮೂಲಕ ಭಾರತ 3-3ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
ಮೂರನೇ ಕ್ವಾರ್ಟರ್ನ ಆರಂಭದಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ದಕ್ಕಿತು. ಇದನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ರುಪಿಂದರ್ ಪಾಲ್ ಸಿಂಗ್ ಗೋಲು ಸಿಡಿಸಿ 4-3ರ ಮುನ್ನಡೆ ಸಾಧಿಸಿದರು. ಇದಾದ ಮೂರು ನಿಮಿಷದಲ್ಲಿ ಸಿಮ್ರಂಜಿತ್ ಸಿಂಗ್ ಚೆಂಡನ್ನು ನೆಟ್ ಒಳಗೆ ಹಾಕಿ ಮುನ್ನಡೆ ಸಾಧಿಸಿದರು. ನಾಲ್ಕನೆ ಕ್ವಾರ್ಟರ್ನಲ್ಲಿ ಜರ್ಮನಿ ಪೆನಾಲ್ಟಿ ಮೂಲಕ ತನ್ನ ಗೋಲಿನ ಸಂಖ್ಯೆಯನ್ನು 4ಕ್ಕೆ ಏರಿಸಿತು. ಈ ಮೂಲಕ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ನಂತರದಲ್ಲಿ ಜರ್ಮನಿಗೆ ಗೋಲು ದಾಖಲಿಸಲು ಅವಕಾಶ ಕೊಡದ ಭಾರತ ಒಂದು ಅಂಕದಿಂದ ಮುನ್ನಡೆ ಸಾಧಿಸಿ ಗೆಲುವು ಕಂಡಿತು.
1972ರ ಬಳಿಕ ಮೊದಲ ಸಲ ಒಲಿಂಪಿಕ್ಸ್ ಸೆಮಿಫೈನಲ್ ಕಂಡ ಭಾರತಕ್ಕೆ ವಿಶ್ವ ಚಾಂಪಿಯನ್ ಬೆಲ್ಜಿಯಂ ಬಲವಾದ ಹೊಡೆತ ನೀಡಿತ್ತು. ಹೀಗಾಗಿ ಕೊನೆಯಲ್ಲಿ ಕಂಚಾದರೂ ಒಲಿಯಲಿ ಎಂಬುದು ದೇಶದ ಕ್ರೀಡಾಭಿಮಾನಿಗಳ ಹಾರೈಕೆಯಾಗಿತ್ತು. ಅದರಂತೆ ಕೋಟ್ಯಾಂತರ ಭಾರತೀಯರ ಆಸೆಯನ್ನು ನಿರಾಸೆಗೊಳಿಸದ ಭಾರತ ಕೊನೆಗೂ ಪದಕಕ್ಕೆ ಕೊರಳೊಡ್ಡಿದೆ. ಜರ್ಮನಿಯ ಆಕ್ರಮಣಕಾರಿ ಆಟಕ್ಕೆ ತಕ್ಕ ಉತ್ತರ ನೀಡಿದ ಮನ್ಪ್ರೀತ್ ಪಡೆ 5-4 ಗೋಲುಗಳ ಅಂತರದಿಂದ ಗೆದ್ದು 4 ದಶಕಗಳ ಬಳಿಕ ಕಂಚಿನ ಪದಕ ತನ್ನದಾಗಿಸಿದೆ.
ಟೋಕಿಯೋ ಒಲಿಂಪಿಕ್ಸ್ನ ಸೆಮಿ ಫೈನಲ್ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-5 ಗೋಲುಗಳ ಅಂತರದಿಂದ ಭಾರತ ಸೋತಿತ್ತು.
Published On - 8:47 am, Thu, 5 August 21