Updated on: Jul 31, 2021 | 10:27 PM
ವಿಶ್ವದ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ 2020 ಟೋಕಿಯೊ ಒಲಿಂಪಿಕ್ಸ್ ನಿಂದ ಖಾಲಿ ಕೈಯಲ್ಲಿ ಮರಳಬೇಕಾಯಿತು. ಅವರು ಗೋಲ್ಡನ್ ಸ್ಲಾಮ್ ಅನ್ನು ಪೂರ್ಣಗೊಳಿಸುವ ಕನಸಿನೊಂದಿಗೆ ಈ ಪಂದ್ಯಾವಳಿಗೆ ಬಂದರು ಆದರೆ ಕಂಚಿನ ಪದಕವನ್ನು ಸಹ ಗೆಲ್ಲಲು ಸಾಧ್ಯವಾಗಲಿಲ್ಲ. ಒಂದೇ ವರ್ಷದಲ್ಲಿ ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲಾಮ್‌ಗಳೊಂದಿಗೆ ಒಲಿಂಪಿಕ್ ಚಿನ್ನ ಗೆಲ್ಲುವುದನ್ನು ಗೋಲ್ಡನ್ ಸ್ಲಾಮ್ ಎಂದು ಕರೆಯಲಾಗುತ್ತದೆ. ಶನಿವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಅವರು 6-4, 7-6, 6-3ರಲ್ಲಿ ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಅವರ ಎದುರು ಸೋಲಬೇಕಾಯ್ತು. ಈ ಪಂದ್ಯದ ಸಮಯದಲ್ಲಿ, ನೊವಾಕ್ ಜೊಕೊವಿಚ್ ಹಲವಾರು ಬಾರಿ ತನ್ನ ತಾಳ್ಮೆಯನ್ನು ಕಳೆದುಕೊಂಡರು ಮತ್ತು ರಾಕೆಟ್ ಮೇಲೆ ತನ್ನ ಕೋಪವನ್ನು ಹೊರಹಾಕಿದರು.
ಜೊಕೊವಿಕ್ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರನೇ ಬಾರಿಗೆ ಸೋಲನ್ನು ಎದುರಿಸಬೇಕಾಯಿತು. ಒಲಿಂಪಿಕ್ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಜೊಕೊವಿಕ್ ಸೋತು ಗೋಲ್ಡನ್ ಸ್ಲಾಮ್ ಪೂರ್ಣಗೊಳಿಸಿದ ಮೊದಲ ಪುರುಷ ಆಟಗಾರ ಎಂಬ ಕನಸಿಗೆ ಎಳ್ಳುನೀರು ಬಿಟ್ಟರು. ಇದರ ನಂತರ, ಅವರು ಮಿಶ್ರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು.
ಮೂರನೇ ಸೆಟ್ ನ ಸುದೀರ್ಘ ರ್ಯಾಲಿಯಲ್ಲಿ ಬಸ್ಟಾ ಹೊಡೆತವನ್ನು ತಡೆಯುವಲ್ಲಿ ವಿಫಲನಾದ ನಂತರ ಅವರು ತನ್ನ ರಾಕೆಟ್ ಅನ್ನು ಸ್ಟ್ಯಾಂಡ್ ಕಡೆಗೆ ಎಸೆದರು. ಎರಡು ಸೆಟ್ ನಂತರ, ಬುಸ್ಟಾ ತನ್ನ ಸರ್ವ್ ಅನ್ನು ಮುರಿದಾಗ, ಅವರು ಮತ್ತೊಮ್ಮೆ ತನ್ನ ರಾಕೆಟ್ ಅನ್ನು ನೆಟ್ಗೆ ಹೊಡೆದರು. ಈ ಕಾರಣದಿಂದಾಗಿ, ಪಂದ್ಯದ ಸಮಯದಲ್ಲಿ ಹಾಜರಿದ್ದ ಬಾಲ್ ಬಾಯ್ಸ್ ಕೂಡ ಹೆದರಿಕೊಳ್ಳಬೇಕಾಯ್ತು. ಜೊಕೊವಿಕ್ ನಂತರ, ರಾಕೆಟ್ ಎತ್ತಿಕೊಂಡು ಅದನ್ನು ಛಾಯಾಗ್ರಾಹಕರ ಮೇಲೆ ಎಸೆದರು.
ರಾಕೆಟ್ ಅನ್ನು ನೆಟ್ ಮೇಲೆ ಎಸೆದ ನಂತರ ಚೇರ್ ಅಂಪೈರ್ ಜೊಕೊವಿಕ್ಗೆ ಎಚ್ಚರಿಕೆ ನೀಡಿದರು. ಜೊಕೊವಿಕ್ ಎರಡು ಬಾರಿ ದುರ್ವರ್ತನೆ ತೋರಿದ್ದರಿಂದ ಬುಸ್ಟಾ ಅಂಪೈರ್ ಬಳಿ ಪೆನಾಲ್ಟಿ ಪಾಯಿಂಟ್‌ಗಳನ್ನು ಕೇಳಿದರು. ಆದರೆ ಮೊದಲ ಘಟನೆಯ ನಂತರ ಅಂಪೈರ್ ಜೊಕೊವಿಕ್ಗೆ ಎಚ್ಚರಿಕೆ ನೀಡಲಿಲ್ಲ. ಪಂದ್ಯವನ್ನು ಗೆದ್ದ ನಂತರ, ಬುಸ್ಟಾ ಸ್ಥಳದಲ್ಲೆ ಭಾವುಕರಾಗಿ ಮೈದಾನದಲ್ಲಿಯೇ ಕುಸಿದು ಬಿದ್ದರು. ಜೊಕೊವಿಕ್ ನಿಧಾನ ಮತ್ತು ನಿರಾಶಾದಾಯಕ ಹೆಜ್ಜೆಗಳೊಂದಿಗೆ ಹೊರನಡೆದರು.
ಮಿಶ್ರ ಡಬಲ್ಸ್ ಜೋಡಿಯಾದ ಜೊಕೊವಿಕ್ ಮತ್ತು ನೀನಾ ಸ್ಟೊಜನೊವಿಚ್ ಶುಕ್ರವಾರ ಸೆಮಿಫೈನಲ್‌ನಲ್ಲಿ ಸೋತಿದ್ದರು. ಅದರ ನಂತರ ಅವರು ಇಂದು ಆಸ್ಟ್ರೇಲಿಯಾದ ಮಿಶ್ರ ಡಬಲ್ಸ್ ಜೋಡಿ ಆಶ್ ಬಾರ್ಟಿ ಮತ್ತು ಜಾನ್ ಪೀರ್ಸ್ ಅವರನ್ನು ಕಂಚಿನ ಪದಕ ಪಂದ್ಯದಲ್ಲಿ ಎದುರಿಸಬೇಕಿತ್ತು ಆದರೆ ಎಡ ಭುಜದ ಗಾಯದಿಂದಾಗಿ ಅವರು ಪಂದ್ಯದಿಂದ ಹಿಂದೆ ಸರಿದರು. ಮಿಶ್ರ ಡಬಲ್ಸ್ ಕಂಚಿನ ಪದಕ ಆಸ್ಟ್ರೇಲಿಯಾ ಜೋಡಿಯ ಪಾಲಾಯಿತು.