ಟೋಕಿಯೊ ಒಲಿಂಪಿಕ್ಸ್ 2020 ರ ಸೆಮಿಫೈನಲ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಅರ್ಜೆಂಟೀನಾ ವಿರುದ್ಧ 2-1 ಅಂತರದಿಂದ ಸೋಲೊಪ್ಪಿಕೊಂಡಿತು. ಪಂದ್ಯವನ್ನು ಉತ್ತಮ ರೀತಿಯಲ್ಲಿ ಆರಂಭಿಸಿದ ಭಾರತ ಎರಡನೇ ನಿಮಿಷದಲ್ಲಿ ಗೋಲು ಗಳಿಸಿತು. ಆದರೆ ಅರ್ಜೆಂಟೀನಾ ಕ್ಯಾಪ್ಟನ್ ಮಾರಿಯಾ ಬೆರಿನ್ಯುವೊ ಅವರ ಎರಡು ಗೋಲುಗಳ ಮೂಲಕ ಪಂದ್ಯವನ್ನು ತಮ್ಮ ಪರವಾಗಿ ಮಾಡಿಕೊಂಡರು. ಭಾರತ ತಂಡವು ಮೊದಲ ಬಾರಿಗೆ ಒಲಿಂಪಿಕ್ಸ್‌ನ ಸೆಮಿಫೈನಲ್ ತಲುಪಿತು. ಆದರೆ ಫೈನಲ್ ತಲುಪುವಲ್ಲಿ ವಿಫಲವಾಯಿತು. ಅದಾಗ್ಯೂ, ಭಾರತದ ವನಿತೆಯರ ಹಾಕಿ ತಂಡದ ಈ ಸಾಧನೆಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಪ್ರಧಾನಿ ಮೋದಿ, ಹಾಕಿ ತಂಡದ ನಾಯಕಿ ಮತ್ತು ಕೋಚ್ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತಕ್ಕೆ ಈಗ ಕಂಚಿನ ಪದಕ ಗೆಲ್ಲುವ ಅವಕಾಶವಿದೆ. ಇದಕ್ಕಾಗಿ ಅವರು ಗ್ರೇಟ್ ಬ್ರಿಟನ್ ಅನ್ನು ಎದುರಿಸಬೇಕಾಗುತ್ತದೆ. ಈ ಪಂದ್ಯವು ಆಗಸ್ಟ್ 6 ರಂದು ನಡೆಯಲಿದೆ. ಮತ್ತೊಂದೆಡೆ, ಅರ್ಜೆಂಟೀನಾ ಫೈನಲ್‌ನಲ್ಲಿ ನೆದರ್‌ಲ್ಯಾಂಡ್ಸ್ ಅನ್ನು ಎದುರಿಸಲಿದೆ. ಡಚ್ ತಂಡವು ಮೊದಲ ಸೆಮಿಫೈನಲ್ ನಲ್ಲಿ 5-1ರಲ್ಲಿ ಗ್ರೇಟ್ ಬ್ರಿಟನ್ ಅನ್ನು ಸೋಲಿಸಿತು. ನೆದರ್‌ಲ್ಯಾಂಡ್ಸ್ ಸತತ ಐದನೇ ಬಾರಿಗೆ ಒಲಿಂಪಿಕ್ ಫೈನಲ್‌ಗೆ ಪ್ರವೇಶಿಸಿದೆ. ಚಿನ್ನದ ಪದಕದ ಪಂದ್ಯವು ಆಗಸ್ಟ್ 6 ರಂದು ನಡೆಯಲಿದೆ.
3 ಪಂದ್ಯ ಸೋತಿದ್ದ ಭಾರತ
ಇದಕ್ಕೂ ಮುನ್ನ ಗುಂಪು ಹಂತದ ಪಂದ್ಯದಲ್ಲಿ ಮೊದಲ 3 ಪಂದ್ಯ ಸೋತಿದ್ದ ಭಾರತ ಆ ಬಳಿಕ ಸತತ 2 ಪಂದ್ಯ ಗೆದ್ದು ಭರ್ಜರಿ ಕಮ್ಬ್ಯಾಕ್ ಮಾಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇಲ್ಲಿ 3 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಸ್ಪ್ರೇಲಿಯಾವನ್ನು 1-0 ಗೋಲಿನಿಂದ ಕಟ್ಟಿಹಾಕಿ ಸೆಮಿ ಫೈನಲ್‌ಗೆ ಪ್ರವೇಶ ಪಡೆದು ಜಗತ್ತೇ ಬೆರಗಾಗುವಂತೆ ಮಾಡಿತ್ತು.
ಇನ್ನೂ ಭಾರತದ ಖ್ಯಾತ ಕುಸ್ತಿತಿಪಟು ರವಿಕುಮಾರ್ ಇತಿಹಾಸ ನಿರ್ಮಿಸಿದ್ದಾರೆ. ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆದ್ದು ಭಾರತಕ್ಕೆ ಮಗದೊಂದು ಪದಕ ಖಾತ್ರಿಪಡಿಸಿದ್ದಾರೆ.
ರವಿ ಅವರು ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಬಲ್ಜೆರಿಯಾದ ಜಾರ್ಗೀ ವಂಗೆಲೊವ್ ಎದುರು 14-4 ಅಂಕಗಳ ಅಂತರದಲ್ಲಿ ಅಮೋಘ ಗೆಲುವು ಸಾಧಿಸಿ ಸೆಮೀಸ್ಗೆ ಅರ್ಹತೆಗಿಟ್ಟಿಸಿಕೊಂಡಿದ್ದರು.