ಮೇಲಿನ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಒಂದಷ್ಟು ಓವರ್​ಗಳನ್ನು ಎಸೆಯುವಂತಿರಬೇಕು: ಬದ್ರಿನಾಥ್

|

Updated on: Dec 01, 2020 | 4:05 PM

ಈಗಿನ ಭಾರತದ ಕ್ರಿಕೆಟ್ ಟೀಮು ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಅವರಂಥ ಬ್ಯಾಟಿಂಗ್ ಅಲ್​ರೌಂಡರ್​ಗಳ ಕೊರತೆ ಅನುಭವಿಸುತ್ತಿದೆ ಮತ್ತು ಅದು ಟೀಮಿನ ಸಮತೋಲನದ ಮೇಲೆ ಭಾರೀ ಪ್ರಭಾವವನ್ನುಂಟು ಮಾಡಿದೆಯೆಂದು ಭಾರತದ ಮಾಜಿ ಆಟಗಾರ ಎಸ್ ಬದ್ರಿನಾಥ್ ಹೇಳುತ್ತಾರೆ.

ಮೇಲಿನ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಒಂದಷ್ಟು ಓವರ್​ಗಳನ್ನು ಎಸೆಯುವಂತಿರಬೇಕು: ಬದ್ರಿನಾಥ್
Follow us on

ಎಸ್ ಬದ್ರಿನಾಥ್

ಅಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ಭಾರತ ಕಂಡ ಎರಡು ದಯನೀಯ ಸೋಲುಗಳಿಗೆ ಕಾರಣ ಅಡುವ ಇಲೆವೆನ್​ನಲ್ಲಿ ಆರನೇ ಬೌಲರ್​ನ ಅಲಭ್ಯತೆ ಎಂದು ಹೇಳಲಾಗುತ್ತಿದೆ. ಎರಡನೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಯಾಂಕ್ ಅಗರ್​ವಾಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನ ಆರನೇ ಬೌಲರ್​ ಆಗಿ ಉಪಯೋಗಿಸಿದರಾದರೂ ಅದು ಅವರ ಯೋಜನೆಯ ಭಾಗಕ್ಕಿಂತ ಹತಾಷೆಯ ಪ್ರತೀಕವಾಗಿತ್ತು. ಹಲವಾರು ಮಾಜಿ ಆಟಗಾರರು ಸಹ ಟೀಮಿನಲ್ಲಿ ಆರನೇ ಬೌಲರ್​ ಯಾಕಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ಓದುಗರಿಗೆ ಎಸ್ ಬದ್ರಿನಾಥ್ ನೆನಪಿರಬಹುದು. ಭಾರಿ ಪ್ರತಿಭಾವಂತ ಬ್ಯಾಟ್ಸ್​ಮನ್ ಆಗಿದ್ದರೂ ಬದ್ರಿನಾಥ್ ಭಾರತದ ಪರ ಕೇವಲ 2 ಟೆಸ್ಟ್​ಗಳನ್ನು ಮಾತ್ರ ಆಡಿದರು. ಹಾಗೆಯೆ 7 ಒಂದು ದಿನದ ಅಂತರರಾಷ್ಟ್ರೀಯ ಮತ್ತು 1 ಟಿ20ಐ ಪಂದ್ಯದಲ್ಲೂ ತಮಿಳುನಾಡಿನ ಈ ಆಟಗಾರ ಭಾರತವನ್ನು ಪ್ರತಿನಿಧಿಸಿದರು. ಈಗ ತಮಿಳು ಕ್ರೀಡಾ ಚ್ಯಾನಲೊಂದಕ್ಕೆ ವೀಕ್ಷಕ ವಿವರಣೆಕಾರರಾಗಿರುವ ಬದ್ರಿ ಸಹ ಒಂದು ದಿನದ ಪಂದ್ಯಗಳಲ್ಲಿ ಆರನೇ ಬೌಲರ್ ಅವಶ್ಯಕತೆಯಿದೆ, ಭಾರತ ಈ ಕೊರತೆಯಿಂದಾಗೇ ಆಸ್ಟ್ರೇಲಿಯ ವಿರುದ್ಧದ ಮೊದಲೆರಡು ಪಂದ್ಯಗಳನ್ನು ಶೋಚನೀಯವಾಗಿ ಸೋತಿದೆ ಎಂದು ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ

‘‘ಭಾರತಕ್ಕೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಅವರಂಥ ಆಟಗಾರರು ಮೇಲಿನ ಕ್ರಮಾಂಕದಲ್ಲಿ ಬೇಕಾಗಿದ್ದಾರೆ. ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟಿಂಗ್ ದುರ್ಬಲವಾಗಿದೆ ಅಂತ ನಾನು ಹೇಳುತ್ತಿಲ್ಲ. ಸಚಿನ್, ಸೆಹ್ವಾಗ್ ಮತ್ತು ಸೌರವ್ ತಮ್ಮ ಉತ್ಕೃಷ್ಟ ಬ್ಯಾಟಿಂಗ್ ಜೊತೆಗೆ 3-4 ಓವರ್​ಗಳನ್ನು ಸಹ ಬೌಲ್ ಮಾಡುತ್ತಿದ್ದರು. ಹಾಗಾಗಿ, ಟೀಮಿಗೆ ಆರನೇ ಬೌಲರ್​ನ ಕೊರತೆ ಎದುರಾಗುತ್ತಿರಲಿಲ್ಲ. ಪ್ರಮುಖ ಬೌಲರ್​ನೊಬ್ಬ ಲಯ ಮತ್ತು ನಿಯಂತ್ರಣ ಕಳೆದುಕೊಂಡು ರನ್​ಗಳನ್ನು ಸೋರಿಸುತ್ತಿದ್ದರೆ, ಟೀಮಿನ ಕ್ಯಾಪ್ಟನ್ ಇಂಥ ಬೌಲರ್​ಗಳಿಂದ 10 ಓವರ್​ಗಳನ್ನು ಬೌಲ್ ಮಾಡಿಸಬಹುದು. ಪ್ರಮುಖ ಬೌಲರ್ ಆಗಿರುವ ಮಾತ್ರಕ್ಕೆ ಅವನು ತನ್ನ ಕೋಟಾದ 10 ಓವರ್​ಗಳನ್ನು ಬೌಲ್ ಮಾಡಲೇಬೇಕು ಅಂತೇನಿಲ್ಲ. ಈಗಿನ ಟೀಮಿನಲ್ಲಿ ಮೇಲಿನ ಕ್ರಮಾಂಕದ ಯಾವುದೇ ಬ್ಯಾಟ್ಸ್​ಮನ್ ಬೌಲಿಂಗ್ ಮಾಡುವುದಿಲ್ಲ. ಹಾಗಾಗಿ ಭಾರತ ಸಚಿನ್, ಸೆಹ್ವಾಗ್ ಮತ್ತು ಸೌರವ್ ಅವರಂಥ ಆಟಗಾರರ ಸೇವೆಯನ್ನು ಮಿಸ್ ಮಾಡಿಕೊಳ್ಳುತ್ತಿದೆ,’’ ಎಂದು ಬದ್ರಿ ಹೇಳಿದ್ದಾರೆ.

ಬದ್ರಿನಾಥ್ ಹೇಳುತ್ತಿರುವುದು ಅತ್ಯಂತ ಸಮಂಜಸವಾಗಿದೆ. ಯಾಕೆ ಅಂತ ನೀವೊಮ್ಮೆ ಗಮನಿಸಿ. ಸಚಿನ್ ತಾವಾಡಿದ 463 ಒಂದು ದಿನ ಪಂದ್ಯಗಳಲ್ಲಿ 154 ವಿಕೆಟ್ ಪಡೆದಿದ್ದಾರೆ. ಹಾಗೆಯೇ, ಸೆಹ್ವಾಗ್ 251 ಪಂದ್ಯಗಳಲ್ಲಿ 96 ಮತ್ತು ಸೌರವ್ 311 ಪಂದ್ಯಗಳಲ್ಲಿ 100 ವಿಕೆಟ್​ಗಳನ್ನು ಪಡೆದಿದ್ದಾರೆ. ಅಂದರೆ, ಟನ್​ಗಟ್ಟಲೆ ರನ್ ಗಳಿಸುವುದರೊಂದಿಗೆ ಈ ತ್ರಿವಳಿಗಳು ವಿಕೆಟ್​ಗಳನ್ನೂ ಕಬಳಿಸುತ್ತಿದ್ದರು. ಇವರಂಥ ಆಟಗಾರರ ಕೊರತೆ ಟೀಮ್ ಇಂಡಿಯಾ ಎದುರಿಸುತ್ತಿರುವುದರಿಂದ ಟೀಮಿನ ಸಮತೋಲನ ಏರುಪೇರಾಗಿದೆ ಎಂದು ಬದ್ರಿ ಹೇಳುತ್ತಾರೆ.

‘‘ಒಂದು ಪಕ್ಷ ರೋಹಿತ್ ಶರ್ಮ ಟೀಮಿಗೆ ವಾಪಸ್ಸಾದರೂ, ಆರನೇ ಬೌಲರ್​ನ ಕೊರತೆ ನೀಗಿಸಲಾರರು. ಯಾಕೆಂದರೆ ಇತ್ತೀಚಿಗೆ ಅವರು ಬೌಲಿಂಗ್ ಮಾಡುವುದನ್ನು ನಿಲ್ಲಿಸಿದ್ದಾರೆ. ಮೊದಲೆಲ್ಲ ವಿರಾಟ್​ ಕೊಹ್ಲಿ ಸಹ ಬೌಲ್ ಮಾಡುತ್ತಿದ್ದರು, ಈಗ ಮಾಡುತ್ತಿಲ್ಲ. ಆಸ್ಟ್ರೇಲಿಯ ತಂಡವನ್ನು ಗಮನಿಸಿ. ಮಾರ್ಕಸ್ ಸ್ಟಾಯ್ನಿಸ್ 5-6 ಓವರ್​ಗಳನ್ನು ಸಲೀಸಾಗೆ ಎಸೆಯುತ್ತಾರೆ. ಗ್ಲೆನ್ ಮ್ಯಾಕ್ಸ್​ವೆಲ್ ಸಹ 6-7 ಒವರ್​ಗಳನ್ನು ಬೌಲ್ ಮಾಡುತ್ತಾರೆ. ಭಾರತ ಈ ಆಯಾಮದಲ್ಲಿ ಸಮಸ್ಯೆ ಎದುರಿಸುತ್ತಿದೆ,’’ ಎಂದು ಬದ್ರಿ ಹೇಳಿದ್ದಾರೆ.