ಟೆಸ್ಟೋಸ್ಟೆರಾನ್(testosterone) ಮಟ್ಟವನ್ನು ಪರಿಶೀಲನೆ ಮಾಡದೆಯೇ ತೃತೀಯ ಲಿಂಗಿಗಳಿಗೆ(Transgender women) ಮಹಿಳೆಯರಿಗಾಗಿ ಇರುವ ಮಹಿಳಾ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ಸ್ಪರ್ಧಿಸಲು ಇನ್ನು ಮುಂದೆ ಅನುಮತಿ ಇರುವುದಿಲ್ಲ ಎಂದು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ(Sebastian Coe) ತಿಳಿಸಿದ್ದಾರೆ. ಜಾಗತಿಕ ಟ್ರ್ಯಾಕ್ ಮತ್ತು ಫೀಲ್ಡ್ ಫೆಡರೇಶನ್‌ನ ಸಭೆಯ ನಂತರ ಮಾತನಾಡಿದ ಕೋ, ಈ ವರ್ಷ ಮಾರ್ಚ್ 31 ರಿಂದ ವಿಶ್ವ ಮಹಿಳಾ ಶ್ರೇಯಾಂಕದ ಸ್ಪರ್ಧೆಗಳಿಂದ ಪುರುಷ ಪ್ರೌಢಾವಸ್ಥೆಯನ್ನು ದಾಟಿದ ಯಾವುದೇ ಮಹಿಳಾ ಟ್ರಾನ್ಸ್ಜೆಂಡರ್ ಅಥ್ಲೀಟ್ಗಳನ್ನು ಸ್ಪರ್ಧೆಯಿಂದ ಹೊರಗಿಡಲು ಕೌನ್ಸಿಲ್ ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಪುರುಷ ಹಾರ್ಮೋನ್ ಪ್ರಮಾಣ ಹೆಚ್ಚು ಇರುವ ಅಥ್ಲೀಟ್‌ಗಳು ವಿಶ್ವ ರ‍್ಯಾಂಕಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಟ್ರಾನ್ಸ್‌ಜೆಂಡರ್ ಅಥ್ಲೀಟ್‌ಗಳ ಸಮಸ್ಯೆಯ ಬಗ್ಗೆ 40 ರಾಷ್ಟ್ರೀಯ ಫೆಡರೇಷನ್‌ಗಳ ಪ್ರತಿನಿಧಿಗಳು, ವಿಶ್ವ ಅಥ್ಲೆಟಿಕ್ಸ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ರಾಷ್ಟ್ರೀಯ ಒಕ್ಕೂಟಗಳು ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಸಮಾಲೋಚನೆ ನಡೆಸಿದೆ ಎಂದು ಸೆಬಾಸ್ಟಿಯನ್ ಕೋ ಹೇಳಿದರು.
ಇದನ್ನೂ ಓದಿ: Trans Tea Stall: ರೈಲು ನಿಲ್ದಾಣದಲ್ಲಿ ದೇಶದ ಮೊದಲ ತೃತೀಯಲಿಂಗಿಗಳ ಟೀ ಸ್ಟಾಲ್, ಪ್ರಹ್ಲಾದ ಜೋಶಿ, ಆನಂದ್ ಮಹೇಂದ್ರಾ ಪ್ರಶಂಸೆ
ಸಮಾಲೋಚನೆ ನಡೆಸಿದವರಲ್ಲಿ ಹೆಚ್ಚಿನವರು ಟ್ರಾನ್ಸ್‌ಜೆಂಡರ್ ಅಥ್ಲೀಟ್‌ಗಳು ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಬಾರದು ಎಂದು ಹೇಳಿದ್ದಾರೆ. ನಾವು ತೆಗೆದುಕೊಂಡ ಈ ನಿರ್ಧಾರ ನಮ್ಮ ಕ್ರೀಡೆಯ ಉತ್ತಮ ಹಿತಾಸಕ್ತಿಗಾಗಿ ಎಂದು ನಾನು ನಂಬುತ್ತೇನೆ. ಈ ನಿರ್ಧಾರಗಳು ಶಾಶ್ವತವಲ್ಲ. ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಟ್ರಾನ್ಸ್ಜೆಂಡರ್ ವ್ಯಕ್ತಿಯ ನೇತೃತ್ವದಲ್ಲಿ ವರ್ಕಿಂಗ್ ಗ್ರೂಪ್ ಅನ್ನು ರಚಿಸಲಾಗುವುದು ಎಂದು ಸೆಬಾಸ್ಟಿಯನ್ ಕೋ ತಿಳಿಸಿದರು.
ವಿವಿಧ ವರ್ಗಗಳ ನಡುವೆ ಸಂಘರ್ಷದ ಅಗತ್ಯಗಳು ಮತ್ತು ಹಕ್ಕುಗಳನ್ನು ಒಳಗೊಂಡಿರುವಾಗ ನಿರ್ಧಾರಗಳು ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ನಾವು ಇತರ ಎಲ್ಲ ಪರಿಗಣನೆಗಳಿಗಿಂತ ಮಹಿಳಾ ಕ್ರೀಡಾಪಟುಗಳಿಗೆ ನ್ಯಾಯೋಚಿತತೆಯನ್ನು ಕಾಪಾಡಿಕೊಳ್ಳಬೇಕು ಎಂಬ ದೃಷ್ಟಿಕೋನದಿಂದ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ