ಜರ್ಮನ್ ಫುಟ್ಬಾಲ್ ಲೀಗ್ ಬುಂಡೆಸ್ಲಿಗಾ ಸಹಯೋಗದೊಂದಿಗೆ ಭಾರತದಲ್ಲಿ ಫುಟ್ಬಾಲ್ ಕ್ರಾಂತಿಗೆ ಮುಂದಾದ ಟಿವಿ9
Indian Tigers & Tigresses: ಭಾರತದಲ್ಲಿ ಯುವ ಫುಟ್ಬಾಲ್ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕೆಲಸಕ್ಕೆ ಭಾರತದ ಅತಿದೊಡ್ಡ ಸುದ್ದಿ ನೆಟ್‌ವರ್ಕ್ ಟಿವಿ9 ಕೂಡ ಮುಂದಾಗಿದೆ. ಇದಲ್ಲದೆ ಈ ಪ್ರತಿಭೆಗಳ ಕನಸನ್ನು ನನಸಾಗಿಸಲು ಟಿವಿ9 ಸುದ್ದಿ ವಾಹಿನಿ, ಜರ್ಮನಿಯ ಫುಟ್ಬಾಲ್ ಲೀಗ್ ಬುಂಡೆಸ್ಲಿಗಾ ಸಹಯೋಗದಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಇದು ಫುಟ್ಬಾಲ್ ಮಾತ್ರವಲ್ಲದೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದೆ.
ಕ್ರೀಡೆಗಳ ವಿಚಾರದಲ್ಲಿ ಭಾರತವನ್ನು ಸಾಮಾನ್ಯವಾಗಿ ಕ್ರಿಕೆಟ್ ಧರ್ಮ ರಾಷ್ಟ್ರ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೂ ಇದ್ದು, ಇಲ್ಲಿ ಕ್ರಿಕೆಟ್ಗೆ ಸಿಗುವಷ್ಟು ಮಾನ್ಯತೆ ಬೇರೆ ಯಾವ ಆಟಕ್ಕೂ ಸಿಗುವುದಿಲ್ಲ. ಹೀಗಾಗಿ ಕ್ರಿಕೆಟ್ ಹೊರತುಪಡಿಸಿ ಉಳಿದ ಆಟಗಳಲ್ಲಿ ಭಾರತ ಯಶಸ್ಸು ಸಾಧಿಸಿದ್ದು ತೀರ ಕಡಿಮೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವದ ಅತ್ಯಂತ ಯಶಸ್ವಿ ಕ್ರೀಡೆಯಾದ ಫುಟ್ಬಾಲ್ಗೂ ಭಾರತದಲ್ಲಿ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಅದರಂತೆ ಸ್ಥಳೀಯ ಮಟ್ಟದಿಂದಲೂ ಫುಟ್ಬಾಲ್ (football) ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕೆಲಸ ಮಾಡಲಾಗುತ್ತಿದೆ. ಇದೀಗ ಅಂತಹ ಯುವ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕೆಲಸಕ್ಕೆ ಭಾರತದ ಅತಿದೊಡ್ಡ ಸುದ್ದಿ ನೆಟ್‌ವರ್ಕ್ ಟಿವಿ9 (TV9 Network) ಕೂಡ ಮುಂದಾಗಿದೆ. ಇದಲ್ಲದೆ ಈ ಪ್ರತಿಭೆಗಳ ಕನಸನ್ನು ನನಸಾಗಿಸಲು ಟಿವಿ9 ಸುದ್ದಿ ವಾಹಿನಿ, ಜರ್ಮನಿಯ ಫುಟ್ಬಾಲ್ ಲೀಗ್ ಬುಂಡೆಸ್ಲಿಗಾ (Bundesliga) ಸಹಯೋಗದಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಇದು ಫುಟ್ಬಾಲ್ ಮಾತ್ರವಲ್ಲದೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದೆ.
ಭಾರತದಲ್ಲಿ ಟ್ಯಾಲೆಂಟ್ ಹಂಟ್
ಭಾರತದ ಅತಿದೊಡ್ಡ ಸುದ್ದಿ ನೆಟ್‌ವರ್ಕ್ ಟಿವಿ9, ಯುರೋಪ್‌ನ ಅಗ್ರ ಫುಟ್‌ಬಾಲ್ ಲೀಗ್ ಬುಂಡೆಸ್ಲಿಗಾದೊಂದಿಗೆ ಕೈಜೋಡಿಸಿದೆ. ಅದರಂತೆ ಉಭಯರ ಸಹಯೋಗದೊಂದಿಗೆ ದೇಶದಲ್ಲಿ ಯುವ ಫುಟ್ಬಾಲ್ ಪ್ರತಿಭೆಗಳ ಭೇಟೆ ಆರಂಭವಾಗಲಿದೆ. ‘ಇಂಡಿಯಾಸ್ ಟೈಗರ್ಸ್ & ಟೈಗ್ರೆಸಸ್’ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಡಿಯಲ್ಲಿ ಟಿವಿ9 ದೇಶಾದ್ಯಂತ 14 ವರ್ಷದೊಳಗಿನ ಪ್ರತಿಭಾವಂತ ಯುವ ಫುಟ್ಬಾಲ್ ಪಟುಗಳನ್ನು ಆಯ್ಕೆ ಮಾಡುತ್ತದೆ. ಇದಾದ ನಂತರ ಈ ಟ್ಯಾಲೆಂಟ್ ಹಂಟ್ನಲ್ಲಿ ಭಾಗಿಯಾದವರಲ್ಲಿ 20 ಹುಡುಗರು ಮತ್ತು 20 ಹುಡುಗಿಯರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಈ ಶಾರ್ಟ್‌ಲಿಸ್ಟ್ ಮಾಡಿದ ಮಕ್ಕಳಿಗೆ ಜರ್ಮನಿ ಮತ್ತು ಆಸ್ಟ್ರಿಯಾದಲ್ಲಿರುವ ಯುರೋಪಿಯನ್ ಫುಟ್‌ಬಾಲ್ ತಜ್ಞರು ತರಬೇತಿ ನೀಡುತ್ತಾರೆ.
ಜರ್ಮನ್ ಫುಟ್ಬಾಲ್ ಕ್ಲಬ್‌ಗಳ ಸಹಾಯ ಹಸ್ತ
ಟಿವಿ9 ಮತ್ತು ಬುಂಡೆಸ್ಲಿಗಾದ ಈ ಟ್ಯಾಲೆಂಟ್ ಹಂಟ್ನಲ್ಲಿ ಜರ್ಮನ್ ಫುಟ್ಬಾಲ್ ಅಸೋಸಿಯೇಷನ್ ಜೊತೆಗೆ ಅನೇಕ ದೊಡ್ಡ ಫುಟ್ಬಾಲ್ ಕ್ಲಬ್ಗಳು ಸಹಭಾಗಿಯಾಗಿವೆ. ತರಬೇತಿ ನೀಡಿದ ನಂತರ, ಮಕ್ಕಳಿಗೆ ಯುರೋಪಿಯನ್ ಕ್ಲಬ್‌ಗಳೊಂದಿಗೆ ಸೌಹಾರ್ದ ಪಂದ್ಯಗಳನ್ನು ಆಡುವ ಅವಕಾಶವನ್ನೂ ನೀಡಲಾಗುತ್ತದೆ.
ಪ್ರತಿಭೆ ಇಲ್ಲ ಎಂಬುದು ವಿಷಾಧನೀಯ; ಬರುನ್ ದಾಸ್
ಇನ್ನು ಈ ಬಗ್ಗೆ ಮಾತನಾಡಿದ ಟಿವಿ9 ಎಂಡಿ ಬರುನ್ ದಾಸ್, ‘ಈ ಟ್ಯಾಲೆಂಟ್ ಹಂಟ್ ಮೂಲಕ ಭಾರತವನ್ನು ಫುಟ್‌ಬಾಲ್‌ನಲ್ಲಿ ಉದಯೋನ್ಮುಖ ರಾಷ್ಟ್ರವಾಗಿ ನೋಡಲು ಬಯಸುತ್ತಿದ್ದೇವೆ. 140 ಕೋಟಿ ಜನಸಂಖ್ಯೆ ಹೊಂದಿರುವ ದೇಶಕ್ಕೆ ಫುಟ್ಬಾಲ್ ವಿಶ್ವಕಪ್ ಆಡಲು ಅಗತ್ಯವಾದ ಪ್ರತಿಭೆ ಇಲ್ಲ ಎಂಬುದು ವಿಷಾಧನೀಯ. ಈ ಉಪಕ್ರಮದ ಮೂಲಕ ಮುಂದೊಂದು ದಿನ ಫುಟ್ಬಾಲ್ ವಿಶ್ವಕಪ್ ಆಡುವ ಭಾರತದ ಕನಸನ್ನು ನನಸಾಗಿಸಲು ನಾವು ಬಯಸಿದ್ದೇವೆ’ ಎಂದರು.
ಟಿವಿ9ನ ಈ ಟ್ಯಾಲೆಂಟ್ ಹಂಟ್ ಬಗ್ಗೆ ಮಾತನಾಡಿದ ಬುಂಡೆಸ್ಲಿಗಾ CCO ಪಿಯರೆ ನೌಬರ್ಟ್, ‘ಸುದ್ದಿವಾಹಿನಿಯ ಈ ಮಹತ್ವದ ಕಾರ್ಯವನ್ನು ಶ್ಲಾಘಿಸಿದರು. ಯಾರಿಗೆ ಫುಟ್ಬಾಲ್ ಇಷ್ಟವೋ ಅವರಿಗೆ ಖಂಡಿತ ಸಹಾಯ ಮಾಡುತ್ತೇವೆ’ ಎಂದರು.
ಫುಟ್ಬಾಲ್ ಬಗ್ಗೆ ಪ್ರತ್ಯೇಕ ವೆಬ್‌ಸೈಟ್
ಈ ಕ್ರಾಂತಿಕಾರಿ ಉಪಕ್ರಮದ ಹೊರತಾಗಿ, ಭಾರತದಲ್ಲಿ ಫುಟ್‌ಬಾಲ್ ಬಗ್ಗೆ ಕುತೂಹಲ ಕೆರಳಿಸಲು ಟಿವಿ9 ಹೊಸ ವೆಬ್‌ಸೈಟ್ ಅನ್ನು ಸಹ ಪ್ರಾರಂಭಿಸಲು ಹೊರಟಿದೆ. ಈ ಆಟಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಪಾಡ್‌ಕಾಸ್ಟ್‌ಗಳು, ವರದಿಗಳು ಮತ್ತು ಲೇಖನಗಳನ್ನು ‘ಫುಟ್‌ಬಾಲ್ 9’ ಹೆಸರಿನಲ್ಲಿ ವೆಬ್‌ಸೈಟ್ ಪ್ರಾರಂಭಿಸಲಾಗುತ್ತದೆ. ಈ ವೆಬ್ಸೈಟ್ನಲ್ಲಿ ಯುರೋಪಿಯನ್ ಫುಟ್ಬಾಲ್ ಲೀಗ್ ಮತ್ತು ಭಾರತೀಯ ಫುಟ್‌ಬಾಲ್‌ಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಪ್ರೇಕ್ಷಕರಿಗೆ ನೀಡಲಾಗುತ್ತದೆ.
3 ದಿನಗಳ ಕಾರ್ಪೊರೇಟ್ ಕಪ್
ಪ್ರತಿಭಾನ್ವೇಷಣೆಯ ಹೊರತಾಗಿ ಟಿವಿ9 ಮತ್ತೊಂದು ಉಪಕ್ರಮವನ್ನು ಆರಂಭಿಸಿದೆ. ಸಂಸ್ಥೆಯು ಮತ್ತೊಮ್ಮೆ ಮೂರು ದಿನಗಳ ಫುಟ್ಬಾಲ್ ಕಾರ್ಪೊರೇಟ್ ಕಪ್ ಅನ್ನು ಆಯೋಜಿಸಲಿದೆ. ಇದರ ಮೊದಲ ಆವೃತ್ತಿಯನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಗೆಲ್ಲುವ ತಂಡಕ್ಕೆ ಜರ್ಮನಿ ಪ್ರವಾಸದ ಸಂಪೂರ್ಣ ವೆಚ್ಚವನ್ನು ನೀಡಲಾಗುವುದು.
ಜರ್ಮನಿಯಲ್ಲಿ ಶೃಂಗಸಭೆ
ಭಾರತ ಮತ್ತು ಜರ್ಮನಿ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಟಿವಿ9 ನೆಟ್‌ವರ್ಕ್ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಅದರಂತೆ ಟಿವಿ9, ಜರ್ಮನಿಯ ಟಾಪ್ ಫುಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ಕಾನ್ಕ್ಲೇವ್ ಆಯೋಜಿಸಲಿದೆ. ಟಿವಿ9 ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯ ಮೊದಲ ಅಂತರರಾಷ್ಟ್ರೀಯ ಆವೃತ್ತಿಯನ್ನು ಈ ಆಗಸ್ಟ್‌ನಲ್ಲಿ ಜರ್ಮನಿಯಲ್ಲಿ ಆಯೋಜಿಸಲಾಗುವುದು. ಈ ಶೃಂಗಸಭೆಯಲ್ಲಿ ವ್ಯಾಪಾರ, ಭದ್ರತೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಕ್ರೀಡೆ ಮತ್ತು ಸಂಸ್ಕೃತಿ ಕುರಿತು ಚರ್ಚೆ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:26 pm, Fri, 17 May 24