ದೆಹಲಿ: ವಿಜಯ ಹಜಾರೆ ಟ್ರೋಫಿ 2021 ಅಂತಿಮ ಹಂತವನ್ನು ತಲುಪಿದೆ. ನಾಳೆ ನಡೆಯಲಿರುವ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ, ಭರ್ಜರಿ ಫಾರ್ಮ್ನಲ್ಲಿರುವ ಕರ್ನಾಟಕ ತಂಡವು ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಮುಂಬೈ ತಂಡವನ್ನು ಹಾಗೂ ಇನ್ನೊಂದು ಸೆಮಿಫೈನಲ್ನಲ್ಲಿ ಗುಜರಾತ್ ತಂಡವು ಉತ್ತರ ಪ್ರದೇಶವನ್ನು ಎದುರಿಸಲಿವೆ. ಟೂರ್ನಮೆಂಟಿನ ಮೊದಲ ಪಂದ್ಯದಲ್ಲಿ ಅಲ್ಪ ಅಂತರದಿಂದ ಉತ್ತರ ಪ್ರದೇಶಕ್ಕೆ ಸೋತ ಕರ್ನಾಟಕ ನಂತರ ಗೆಲುವಿನ ನಾಗಾಲೋಟ ಶುರು ಮಾಡಿತು. ಆರಂಭ ಆಟಗಾರರಾದ ನಾಯಕ ರವಿಕುಮಾರ್ ಸಮರ್ಥ್ ಮತ್ತು ಉತ್ಕೃಷ್ಟ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ಎದುರಾಳಿ ಬೌಲರ್ಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಪಡಿಕ್ಕಲ್ ಸತತ 4 ಶತಕಗಳನ್ನು ಬಾರಿಸಿ ಲಿಸ್ಟ್ ಎ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮತ್ತು ವಿಶ್ವದ ಕೇವಲ ಮೂರನೇ ಆಟಗಾರನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕೇರಳ ವಿರುದ್ಧ ಆಡಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಮರ್ಥ (192) ಮತ್ತು ಪಡಿಕ್ಕಲ್ (101) ಬಾರಿಸಿ ತಮ್ಮ ಟೀಮಿಗೆ 80 ರನ್ಗಳ ಸುಲಭ ಜಯ ಕೊಡಿಸಿದರು. 6 ಇನ್ನಿಂಗ್ಸಗಳಲ್ಲಿ ಇವರಿಬ್ಬರು ಇದುವರೆಗೆ 1,273 ರನ್ ಕಲೆ ಹಾಕಿದ್ದಾರೆ. ಈ ಸಾಲಿನ ಪಂದ್ಯಾವಳಿಯಲ್ಲಿ ಪಡಿಕ್ಕಲ್ ಅತಿ ಹೆಚ್ಚು ರನ್ (673) ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ರನ್ ಗಳಿಕೆಯಲ್ಲಿ ಅವರನನ್ನು ಹಿಂಬಾಲಿಸುತ್ತಿರುವ ಸಮರ್ಥ 605 ರನ್ ಶೇಖರಿಸಿದ್ದಾರೆ.
ಅತ್ತ, ಮುಂಬೈ ತಾನಾಡಿರುವ ಎಲ್ಲ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕ್ವಾರ್ಟರ್ ಫೈನಲ್ನಲ್ಲಿ ಅದು ಸೌರಾಷ್ಟ್ರವನ್ನು 9 ವಿಕೆಟ್ಗಳಿಂದ ಸೋಲಿಸಿತು. ಟೆಸ್ಟ್ಗಳಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸುವ ಪೃಥ್ವಿ ಶಾ ಕೇವಲ 123 ಎಸೆತಗಳಲ್ಲಿ ಅಜೇಯ 185 ರನ್ ಬಾರಿಸಿದರು. 285 ರನ್ಗಳ ಮೊತ್ತವನ್ನು ಮುಂಬೈ 42 ನೇ ಓವರ್ನಲ್ಲಿಯೇ ದಾಟಿತು. ಮತ್ತೊಂದು ಗಮನಾರ್ಹ ಅಂಶವೆಂದರೆ ಅಡಿರುವ ಎಲ್ಲ ಪಂದ್ಯಗಳನ್ನು ಮುಂಬೈ ಭಾರಿ ಅಂತರದಿಂದ ಗೆದ್ದಿದೆ.
ಕರ್ನಾಟಕ ಮತ್ತು ಮುಂಬೈ ನಡುವಿನ ಸೆಮಿಫೈನಲ್ ಗುರುವಾರದಂದು ದೆಹಲಿಯ ಪಾಲಂ ಎ ಮೈದಾನದಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಬ್ಯಾಟ್ಸ್ಮನ್ಗಳಿಗೆ ಸ್ವರ್ಗವಾಗಿರುವುದರಿಂದ ನಾಳಿನ ಪಂದ್ಯದಲ್ಲಿ ರನ್ ಹೊಳೆಯನ್ನು ನಿರೀಕ್ಷಿಸಬಹುದು.
ಮತ್ತೊಂದು ಸೆಮಿಫೈನಲ್ನಲ್ಲಿ ಗುಜರಾತ್ ಮತ್ತು ಉತ್ತರ ಪ್ರದೇಶ ಸೆಣಸಲಿವೆ. ಕ್ವಾರ್ಟರ್ ಫೈನಲ್ನಲ್ಲಿ ಉತ್ತರ ಪ್ರದೇಶವು ದೆಹಲಿಯನ್ನು 46ರನ್ಗಳಿಂದ ಸೋಲಿಸಿತು. ಗುಜರಾತ್ ಸಹ ಈ ಸಾಲಿನ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಈ ತಂಡದ ಟಾಪ್ ಆರ್ಡರ್ ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದೆ. ಕ್ವಾರ್ಟರ್ ಫೈನಲ್ನಲ್ಲಿ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ 134 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದರು.
ಉತ್ತರ ಪ್ರದೇಶ ಸಹ ತನ್ನ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ಹೆಚ್ಚು ಆತುಕೊಂಡಿದೆ. ಅನುಭವಿ ಬೌಲರ್ ಪಿಯುಶ್ ಚಾವ್ಲಾ ಅವರಲ್ಲಿ ಈಗಲೂ ಪಂದ್ಯ ಗೆದ್ದು ಕೊಡುವ ಸಾಮರ್ಥ್ಯವಿದೆ. ಗುಜರಾತ್ ಮತ್ತು ಯುಪಿ ನಡುವಿನ ಸೆಮಿಫೈನಲ್ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಾಳೆ (ಗುರುವಾರ) ನಡೆಯಲಿದೆ.
ಇದನ್ನೂ ಓದಿ: ವಿಜಯ ಹಜಾರೆ ಟ್ರೋಫಿ: ಸತತ 4ನೇ ಶತಕ ದಾಖಲಿಸಿದ ದೇವದತ್ ಪಡಿಕ್ಕಲ್, ಈ ಸಾಧನೆಗೈದ ವಿಶ್ವದ 3ನೇ ಆಟಗಾರ
Published On - 10:51 pm, Wed, 10 March 21