ವಿಜಯ ಹಜಾರೆ ಟ್ರೋಫಿ: ಸತತ 4ನೇ ಶತಕ ದಾಖಲಿಸಿದ ದೇವದತ್ ಪಡಿಕ್ಕಲ್, ಈ ಸಾಧನೆಗೈದ ವಿಶ್ವದ 3ನೇ ಆಟಗಾರ

ವಿಜಯ ಹಜಾರೆ ಟ್ರೋಫಿ: ಸತತ 4ನೇ ಶತಕ ದಾಖಲಿಸಿದ ದೇವದತ್ ಪಡಿಕ್ಕಲ್, ಈ ಸಾಧನೆಗೈದ ವಿಶ್ವದ 3ನೇ ಆಟಗಾರ
ದೇವದತ್ ಪಡಿಕ್ಕಲ್

ವಿಜಯ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿರುವ ಪಡಿಕ್ಕಲ್ ನಿಸ್ಸಂದೇಹವಾಗಿ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಕೇರಳ ವಿರುದ್ಧ ನಡೆಯುತ್ತಿರುವ ಕ್ವಾರ್ಟರ್​ ಫೈನಲ್​ನಲ್ಲಿ ಅವರು ಶತಕ ಬಾರಿಸುವುದಲ್ಲದೆ, ಮೊದಲ ವಿಕೆಟ್​ಗೆ ಕರ್ನಾಟಕ ತಂಡದ ನಾಯಕ ರವಿಕುಮಾರ್ ಸಮರ್ಥ್​ ಜೊತೆ 43 ಓವರ್​ಗಳಲ್ಲಿ 249 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡರು.

Arun Belly

|

Mar 08, 2021 | 4:08 PM

ನವದೆಹಲಿ: ದೇಶೀಯ ಬೌಲರ್​ಗಳು ಕರ್ನಾಟಕದ ಆರಂಭ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ತಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರಸ್ತುತ ಜಾರಿಯಲ್ಲಿರುವ ವಿಜಯ ಹಜಾರೆ ಟ್ರೋಫಿ ಟೂರ್ನಮೆಂಟ್​ನಲ್ಲಿ ಶತಕಗಳನ್ನು ಬಾರಿಸುವುದು ಅವರಿಗೆ ನೀರು ಕುಡಿದಷ್ಟೇ ಸುಲಭವಾಗಿರುವಂತಿದೆ. ಇಂದು ಕೇರಳ ವಿರುದ್ಧ ನವದೆಹಲಿಯ ಪಾಲಂ ‘ಎ’ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಡಿಕ್ಕಲ್ 101 ಬಾರಿಸಿ ಸತತವಾಗಿ 4ನೇ ಶತಕ ಬಾರಿಸಿರುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್ 13ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತಿಹೆಚ್ಚು ರನ್ ಗಳಿಸಿದ 21ರ ಪ್ರಾಯದ ಪಡಿಕ್ಕಲ್ ಅದೇ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಐಪಿಎಲ್ ನಂತರ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತಾವಾಡಿದ 6 ಪಂದ್ಯಗಳಿಂದ 43.60 ಸರಾಸರಿಯಲ್ಲಿ 1 ಅರ್ಧ ಶತಕದೊಂದಿಗೆ 218 ರನ್ ಬಾರಿಸಿದ್ದರು. ಈ ಅರ್ಧ ಶತಕ (ಅಜೇಯ 99) ಹೆಚ್ಚು ಕಡಿಮೆ ಶತಕದಂತಿತ್ತು.

ವಿಜಯ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿರುವ ಪಡಿಕ್ಕಲ್ ನಿಸ್ಸಂದೇಹವಾಗಿ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಕೇರಳ ವಿರುದ್ಧ ನಡೆಯುತ್ತಿರುವ ಕ್ವಾರ್ಟರ್​ ಫೈನಲ್​ನಲ್ಲಿ ಅವರು ಶತಕ ಬಾರಿಸುವುದಲ್ಲದೆ, ಮೊದಲ ವಿಕೆಟ್​ಗೆ ಕರ್ನಾಟಕ ತಂಡದ ನಾಯಕ ರವಿಕುಮಾರ್ ಸಮರ್ಥ್​ ಜೊತೆ 43 ಓವರ್​ಗಳಲ್ಲಿ 249 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. ಲಿಸ್ಟ್​ ‘ಎ’ ಕ್ರಿಕೆಟ್​ನಲ್ಲಿ ತಮ್ಮ ಅತ್ಯಧಿಕ ವೈಯಕ್ತಿಕ ಸ್ಕೋರ್ (192) ದಾಖಲಿಸಿದ ಸಮರ್ಥ್, ಟೀಮಿನ ಮೊತ್ತ 338/3 ತಲುಪಲು ಪ್ರಮುಖ ಕಾರಣರಾದರು.

ಈ ಪಂದ್ಯಕ್ಕೆ ಮೊದಲು ಒಡಿಷಾ ವಿರುದ್ಧ 152, ಕೇರಳ ವಿರುದ್ಧ ಅಜೇಯ 126 (ಲೀಗ್ ಹಂತದ ಪಂದ್ಯ) ಮತ್ತು ರೇಲ್ವೇಸ್ ವಿರುದ್ಧ ಔಟಾಗದೆ 145 ಬಾರಿಸಿದ್ದಾರೆ. ಪ್ರಸಕ್ತ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅವರು ಇದುವರೆಗೆ 4 ಪಂದ್ಯಗಳಿಂದ 673 ರನ್​ಗಳನ್ನು ಕಲೆಹಾಕಿದ್ದಾರೆ!

Devdutt Padikkal and Virat-Kohli

ವಿರಾಟ್​ ಕೊಹ್ಲಿ ಜೊತೆ ದೇವದತ್ ಪಡಿಕ್ಕಲ್

ಲಿಸ್ಟ್ ‘ಎ’ ಕ್ರಿಕೆಟ್​ ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್ ಸತತವಾಗಿ 4 ಸೆಂಚುರಿಗಳನ್ನು ಬಾರಿಸಿರುವ ವಿಶ್ವದ ಕೇವಲ 3 ನೇಆಟಗಾರರಾಗಿದ್ದಾರೆ. ಇದಕ್ಕೂ ಮೊದಲು, ಶ್ರೀಲಂಕಾದ ನಾಯಕರಾಗಿದ್ದ ಕುಮಾರ ಸಂಗಕ್ಕಾರ 2015 ರ ಐಸಿಸಿ ವಿಶ್ವಕಪ್​ನಲ್ಲಿ ಸತತ 4 ಶತಕಗಳನ್ನು ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಅಲ್ವಿರೊ ಪೀಟರ್ಸನ್ 2015-16 ಸಾಲಿನ ಮೊಮೆಂಟಮ್ ಒನ್​ ಡೇ ಕಪ್​ನಲ್ಲಿ ಈ ಸಾಧನೆ ಮಾಡಿದ್ದರು.

ವಿಜಯ ಹಜಾರೆ ಟ್ರೋಫಿಯ ನಂತರ ಪಡಿಕ್ಕಲ್ ಈ ಬಾರಿ ಭಾರತದಲ್ಲೇ ನಡೆಯಲಿರುವ ಐಪಿಎಲ್ 2021 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ 2020ರಲ್ಲಿ ಐಪಿಎಲ್​ನಲ್ಲಿ ಮೊಟ್ಟಮೊದಲ ಪಂದ್ಯ ಅಡುತ್ತಿರುವ ವಿಷಯವನ್ನು ಟೀಮಿನ ಹೆಡ್ ಕೋಚ್ ಆಸ್ಟ್ರೇಲಿಯಾದ ಮಾಜಿ ಆರಂಭ ಆಟಗಾರ ಸೈಮನ್ ಕಟೀಚ್ ತನಗೆ ಹೇಳಿದರೆಂದು ಕಳೆದ ಸಾಲಿನ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಪಾತ್ರರಾದ ಸಂದರ್ಭದಲ್ಲಿ ತಿಳಿಸಿದ ಪಡಿಕ್ಕಲ್, ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ಗಳಾದ ಎ ಬಿ ಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಆಡುತ್ತಿರುವುದು ತಮ್ಮ ಪಾಲಿನ ಸೌಭಾಗ್ಯ ಅಂತಲೂ ಹೇಳಿದ್ದರು.

ಓದುಗರಿಗೆ ಪ್ರಾಯಶಃ ನೆನೆಪಿರಬಹುದು, ಐಪಿಎಲ್​ಗೆ ಪಡಿಕ್ಕಲ್ 2019ರಲ್ಲೇ ಆರ್​ಸಿಬಿ ಆಯ್ಕೆಯಾದರೂ ಆ ಸೀಸನ್​ನಲ್ಲಿ ಅವರು ಒಂದು ಪಂದ್ಯವನ್ನೂ ಆಡಿರಲಿಲ್ಲ. ಇತ್ತೀಚಿನ ವರದಿಗಳು ಬಂದಾಗ ಕೇರಳ 25 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 118 ರನ್ ಗಳಿಸಿತ್ತು. ಉಳಿದ 25 ಒವರ್​ಗಳಲ್ಲಿ ಅದಕ್ಕೆ ಗೆಲ್ಲಲು ಇನ್ನೂ 221 ರನ್ ಬೇಕು

ಇದನ್ನೂ ಓದಿ: Vijay Hazare Trophy: ಭಾರತ ಕ್ರಿಕೆಟ್ ತಂಡಕ್ಕೆ ಹತ್ತಿರವಾಗ್ತಿದ್ದಾರೆ ದೇವದತ್ ಪಡಿಕ್ಕಲ್

Follow us on

Most Read Stories

Click on your DTH Provider to Add TV9 Kannada